ಹೊಡೆದು ಓಡಿಹೋಗುವ ಕಾಲ ಮುಗಿಯಿತು! ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ! ದೊಡ್ಡಣ್ಣನಿಗೆ ಟೆಹ್ರಾನ್ ಓಪನ್ ಚಾಲೆಂಚ್!
ನವದೆಹಲಿ: ಜಗತ್ತಿನ ಅತ್ಯಂತ ಸೂಕ್ಷ್ಮ ವಲಯವಾದ ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ, ಇರಾನ್(Iran Strikes US) ಮತ್ತು ಇಸ್ರೇಲ್ ನಡುವಿನ ಮಿಲಿಟರಿ ಸಂಘರ್ಷ ಈಗ ಅತ್ಯಂತ ಭೀಕರ ಹಂತಕ್ಕೆ ತಲುಪಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುವೈತ್‌ನಲ್ಲಿರುವ ಅಮೆರಿಕಾದ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕೇಂದ್ರೀಕೃತ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕ ಇತ್ತೀಚೆಗೆ ಇರಾನ್‌ನ ಖೇಶ್ಮ್ ದ್ವೀಪದ ಮೇಲೆ ನಡೆಸಿದ್ದ ವಾಯುದಾಳಿಗೆ ಪ್ರತಿಯಾಗಿ ಈ ಪ್ರಚಂಡ ಆಪರೇಷನ್ ನಡೆಸಲಾಗಿದೆ ಎಂದು ಇರಾನ್ ಘೋಷಿಸಿದೆ.
ಇನ್ಮುಂದೆ ‘ಹಿಟ್ ಅಂಡ್ ರನ್ ಆಟ ನಡೆಯಲ್ಲ! -ಅಮೆರಿಕಗೆ ಇರಾನ್ ಎಚ್ಚರಿಕೆ
ಕುವೈತ್ ಮೇಲಿನ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಇರಾನ್‌ನ IRGC ಏರೋಸ್ಪೇಸ್ ಫೋರ್ಸ್, ಅಮೆರಿಕಾದ ಮಿಲಿಟರಿ ನೆಲೆಗಳ ಮೇಲೆ ನಿಖರ ಮತ್ತು ಕೇಂದ್ರೀಕೃತ ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದೆ. ವಾಷಿಂಗ್ಟನ್‌ಗೆ ಅತ್ಯಂತ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿರುವ ಇರಾನ್ ಸೇನೆ, ಹೊಡೆದು ಓಡಿಹೋಗುವ ಯುಗ ಈಗ ಅಧಿಕೃತವಾಗಿ ಅಂತ್ಯಗೊಂಡಿದೆ. ಇನ್ನು ಮುಂದೆ ನಮ್ಮ ಮೇಲೆ ದಾಳಿ ಮಾಡುವ ಆಕ್ರಮಣಕಾರಿ ಪಡೆಗಳು ತಮ್ಮ ಅಜ್ಞಾನ ಮತ್ತು ರೇಕ್ಲೆಸ್ ಸಾಹಸಗಳ ಭೀಕರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಅಮೆರಿಕ ಮತ್ತೊಮ್ಮೆ ಇರಾನ್ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾದರೂ ಇದಕ್ಕಿಂತ ನೂರು ಪಟ್ಟು ಭೀಕರ ತಿರುಗೇಟು ನೀಡಲಾಗುವುದು ಎಂದು ಗುಡುಗಿದೆ.
ಆದರೆ, ಇರಾನ್‌ನ ಈ ಭೀಕರ ದಾಳಿಯಿಂದ ತಮಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಅಮೆರಿಕ ಮತ್ತು ಕುವೈತ್ ಜಂಟಿಯಾಗಿ ಪ್ರತಿಪಾದಿಸಿವೆ. ಕುವೈತ್ ಮಿಲಿಟರಿ ತನ್ನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದೆ ಎಂದು ಹೇಳಿದ್ದರೆ, ಅಮೆರಿಕದ ಸೆಂಟ್ರಲ್ ಕಮಾಂಡ್ ತಮ್ಮ ಯಾವುದೇ ಸೈನಿಕರಿಗೆ ಗಾಯಗಳಾಗಿಲ್ಲ ಹಾಗೂ ಮಿಲಿಟರಿ ಆಸ್ತಿ ಪಾಸ್ತಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ ಸರಣಿ ಸ್ಫೋಟಗಳು; ತಲ್ಲಣಗೊಂಡ ಬಹ್ರೇನ್, ಇರಾಕ್!
ಇರಾನ್ ಕ್ಷಿಪಣಿ ಉಡಾಯಿಸುತ್ತಿದ್ದಂತೆಯೇ ಕುವೈತ್, ಬಹ್ರೇನ್, ಇರಾಕ್ ಮತ್ತು ಇರ್ಬಿಲ್‌ನಾದ್ಯಂತ ಸ್ಫೋಟದ ಸೌಂಡ್‌ಗಳು ಕೇಳಿಬಂದಿವೆ. ಬಹ್ರೇನ್‌ನಲ್ಲಿ ಏರ್ ರೈಡ್ ಸೈರನ್‌ಗಳು ಮೊಳಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಬಂಕರ್‌ಗಳಿಗೆ ತೆರಳುವಂತೆ ನಾಗರಿಕರಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ಕ್ಷಿಪಣಿಗಳನ್ನು ಹೊಡೆದುರುಳಿಸಿದ ನಂತರ ಬೀಳುವ ಗ್ರೆನೇಡ್ ಹಾಗೂ ಮದ್ದುಗುಂಡುಗಳ ಅವಶೇಷಗಳಿಂದ ದೂರವಿರುವಂತೆ ಕುವೈತ್ ಸರ್ಕಾರ ತನ್ನ ಜನರಿಗೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ.
ಅಮೆರಿಕ ತನ್ನ ರಕ್ಷಣಾತ್ಮಕ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದು, ಇರಾನ್‌ನ ರೇಡಾರ್ ಮತ್ತು ಡ್ರೋನ್ ತರಬೇತಿ ಕೇಂದ್ರಗಳ ಮೇಲೆ ತಾವು ನಡೆಸಿದ ದಾಳಿ ಕೇವಲ ಆತ್ಮರಕ್ಷಣೆಗಾಗಿ ಮಾತ್ರ ಎಂದು ವಾಷಿಂಗ್ಟನ್ ಹೇಳಿದೆ.
ಹೊರ್ಮುಜ್ ಜಲಸಂಧಿ ಬಂದ್ ಭೀತಿ; $97 ದಾಟಿದ ಕಚ್ಚಾ ತೈಲ ಬೆಲೆ!
ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿ ಪ್ರಸ್ತುತ ಈ ಮಹಾಯುದ್ಧದ ಕೇಂದ್ರ ಬಿಂದುವಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಸಂಸತ್ತಿಗೆ ಮಾಹಿತಿ ನೀಡಿ, ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತ್ರ ನಿರ್ಬಂಧಗಳ ಸಡಿಲಿಕೆ ಇರಲಿದೆಯೇ ಹೊರತು ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಇರಾನ್‌ನ ಬ್ಲ್ಯಾಕ್‌ಮೇಲ್‌ಗೆ ಬಗ್ಗುವುದಿಲ್ಲ ಎಂದಿದ್ದಾರೆ.
ಮತ್ತೊಂದೆಡೆ, ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆಯು (UN) ಜಲಸಂಧಿಯಲ್ಲಿನ ಈ ಸುದೀರ್ಘ ಅಡಚಣೆಯಿಂದಾಗಿ ಜಾಗತಿಕ ತೈಲ ಆಮದು ವೆಚ್ಚ ಬರೋಬ್ಬರಿ 20 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಲಿದ್ದು, ಬಡ ರಾಷ್ಟ್ರಗಳು ಕಂಪ್ಲೀಟ್ ಆಗಿ ನಾಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಈ ರಾಜಕೀಯ ಅನಿಶ್ಚಿತತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $97 ಕ್ಕಿಂತಲೂ ಅಧಿಕವಾಗಿದ್ದು, ಯುಎಸ್ ಡಬ್ಲ್ಯೂಟಿಐ ತೈಲ ಬೆಲೆ $95 ಕ್ಕೆ ತಲುಪಿದೆ.
ಇಸ್ರೇಲ್-ಹಿಸ್ಬುಲ್ಲಾ ಭೀಕರ ರಕ್ತಪಾತ!
ಅಮೆರಿಕ-ಇರಾನ್ ನಡುವೆ ಯುದ್ಧ ನಡೆಯುತ್ತಿರುವಾಗಲೇ ಇತ್ತ ಇಸ್ರೇಲ್ ಮತ್ತು ಹಿಸ್ಬುಲ್ಲಾ ಉಗ್ರರ ನಡುವಿನ ಹೋರಾಟ ಮತ್ತಷ್ಟು ರಕ್ತಸಿಕ್ತವಾಗಿದೆ. ದಕ್ಷಿಣ ಲೆಬನಾನ್‌ನ ಅಲ್-ಮರ್ವಾನಿಹ್ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಅಮಾಯಕರು ಸಜೀವ ದಹನವಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಸ್ಬುಲ್ಲಾ ನಡೆಸಿದ ಡೆಡ್ಲಿ ಡ್ರೋನ್ ದಾಳಿಯಲ್ಲಿ ನಾಲ್ಕು ಇಸ್ರೇಲಿ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಡೀ ಜಗತ್ತಿನ ಆರ್ಥಿಕತೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಕಂಟ್ರೋಲ್ ಮಾಡುವ ಈ ಭೀಕರ ಯುದ್ಧ ಮುಂಬರುವ ದಿನಗಳಲ್ಲಿ ಜಾಗತಿಕ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಲಿದೆಯೇ ಎಂದು ವಿಶ್ವದ ದೊಡ್ಡ ದೊಡ್ಡ ದೇಶಗಳು ಆತಂಕದಿಂದ ಗಮನಿಸುತ್ತಿವೆ,(ಏಜೆನ್ಸೀಸ್).