ಹೋರ್ಮುಜ್ ಜಲಸಂಧಿ ಸೋಶಿಯಲ್ ಮೀಡಿಯಾ ಅಲ್ಲ! ಟ್ರಂಪ್ ಕಾಲೆಳೆದ ಇರಾನ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕಳೆದ ಆರು ವಾರಗಳಿಂದ ನಡೆಯುತ್ತಿರುವ ಭೀಕರ ಯುದ್ಧವು ಈಗ ಕೇವಲ ಕ್ಷಿಪಣಿ ಮತ್ತು ಬಾಂಬ್‌ಗಳಿಗೆ ಸೀಮಿತವಾಗಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ಯುದ್ಧವಾಗಿಯೂ ರೂಪಾಂತರಗೊಂಡಿದೆ. ಇರಾನ್(Iran) ವಿರುದ್ಧ ಅಮೆರಿಕ ಘೋಷಿಸಿರುವ ನೌಕಾ ದಿಗ್ಬಂಧನವನ್ನು ಇರಾನ್‌ನ ರಾಜತಾಂತ್ರಿಕ ಕಚೇರಿಗಳು ಅತ್ಯಂತ ವ್ಯಂಗ್ಯವಾಗಿ ಟೀಕಿಸುತ್ತಿದ್ದು, ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ.
ಬ್ಲಾಕ್ ಮಾಡಿದರೆ ಮರಳಿ ಬ್ಲಾಕ್ ಮಾಡಲು ಇದು ಫೇಸ್‌ಬುಕ್ ಅಲ್ಲ!
ವಿಶ್ವದ ಅತ್ಯಂತ ಸಂವೇದನಾಶೀಲ ತೈಲ ಮಾರ್ಗವಾದ 'ಸ್ಟ್ರೈಟ್ ಆಫ್ ಹೋರ್ಮುಜ್ ಅನ್ನು ಅಮೆರಿಕ ಬಂದ್ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ಹೈದರಾಬಾದ್‌ನಲ್ಲಿರುವ ಇರಾನ್ ಕಾನ್ಸುಲೇಟ್, ಹೋರ್ಮುಜ್ ಜಲಸಂಧಿ ಎಂಬುದು ಸೋಶಿಯಲ್ ಮೀಡಿಯಾ ಅಲ್ಲ. ಅಲ್ಲಿ ಯಾರಾದರೂ ನಿಮ್ಮನ್ನು 'ಬ್ಲಾಕ್' ಮಾಡಿದರೆ, ನೀವು ಅವರನ್ನು ಮರಳಿ ಬ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು ತನ್ನ ಅಧಿಕೃತ 'X ಖಾತೆಯಲ್ಲಿ ಬರೆದುಕೊಂಡಿದೆ.
ಈ ಒಂದು ಸಾಲಿನ ವ್ಯಂಗ್ಯವು ಅಮೆರಿಕದ ಭೌತಿಕ ದಿಗ್ಬಂಧನವು ಜಾಗತಿಕ ಮಾರುಕಟ್ಟೆಯ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರಲಿದೆ ಎಂಬುದನ್ನು ಪರೋಕ್ಷವಾಗಿ ನೆನಪಿಸಿದೆ.
ಟ್ರಂಪ್ ನಿರ್ಧಾರ ಮತ್ತು ಸಮುದ್ರ ದರೋಡೆ ಆರೋಪ
ಇಸ್ಲಾಮಾಬಾದ್‌ನಲ್ಲಿ ನಡೆದ ಇರಾನ್-ಅಮೆರಿಕ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಪ್ರಕಟಿಸಿದ್ದಾರೆ. ಇರಾನ್‌ನ ಬಂದರುಗಳಿಗೆ ಯಾವುದೇ ಹಡಗುಗಳು ಪ್ರವೇಶಿಸದಂತೆ ಅಥವಾ ಹೊರಬರದಂತೆ ಅಮೆರಿಕದ ನೌಕಾಪಡೆ ಕಾವಲು ಕಾಯುತ್ತಿದೆ. ಇದನ್ನು ಇರಾನ್ ಸಮುದ್ರ ದರೋಡೆ ಎಂದು ಕರೆದಿದೆ.
ನಮ್ಮ ಬಂದರುಗಳಿಗೆ ಬೆದರಿಕೆ ಹಾಕಿದರೆ, ಪರ್ಷಿಯನ್ ಗಲ್ಫ್ ಮತ್ತು ಅರಬ್ಬೀ ಸಮುದ್ರದ ಯಾವುದೇ ಬಂದರುಗಳು ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಸಿದೆ. ಅತ್ತ ಅಮೆರಿಕ ಕೂಡ ಕಠಿಣ ನಿಲುವು ತಳೆದಿದ್ದು, ದಿಗ್ಬಂಧನವನ್ನು ಉಲ್ಲಂಘಿಸುವ ಯಾವುದೇ ಹಡಗಿನ ಮೇಲೆ ನೇರ ಮಿಲಿಟರಿ ದಾಳಿ ನಡೆಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಬಾಲಿವುಡ್ ಮೀಮ್‌ಗಳ ಮೊರೆ ಹೋದ ಇರಾನ್!
ವಿಪರ್ಯಾಸವೆಂದರೆ, ಒಂದು ಕಡೆ ಯುದ್ಧ ನಡೆಯುತ್ತಿದ್ದರೆ, ಮತ್ತೊಂದೆಡೆ ಇರಾನ್‌ನ ರಾಜತಾಂತ್ರಿಕರು ಭಾರತೀಯ ಜನಪ್ರಿಯ ಸಂಸ್ಕೃತಿಯನ್ನು ಬಳಸಿ ಅಮೆರಿಕವನ್ನು ಲೇವಡಿ ಮಾಡುತ್ತಿದ್ದಾರೆ.
ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್, ಬಾಲಿವುಡ್‌ನ ಪ್ರಸಿದ್ಧ ಹಾಸ್ಯ ಚಿತ್ರ ಧಮಾಲ್ನ ಒಂದು ಕ್ಲಿಪ್ ಅನ್ನು ಹಂಚಿಕೊಂಡಿದೆ. ಅಲ್ಲದೆ, ಅದರಲ್ಲಿ ರಿತೇಶ್ ದೇಶ್‌ಮುಖ್ ಪಾತ್ರವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಅಮೆರಿಕಕ್ಕೆ ಹೋಲಿಸಲಾಗಿದೆ ಮತ್ತು ಅವರನ್ನು ಇರಾನ್ ಪ್ರತಿನಿಧಿಸುವವರು ಬೆನ್ನಟ್ಟುತ್ತಿರುವುದನ್ನು ತೋರಿಸಲಾಗಿದೆ.
ಈ ಪೋಸ್ಟ್‌ಗೆ ಭಾರತೀಯ ಮೀಮ್‌ಗಳು ಸಾರ್ವಕಾಲಿಕ ಶ್ರೇಷ್ಠ ಎಂಬ ಕ್ಯಾಪ್ಷನ್ ನೀಡಲಾಗಿದೆ.
ಜಾಗತಿಕ ಆರ್ಥಿಕತೆಯ ಮೇಲೆ ಆಘಾತ
ಈ ಸಂಘರ್ಷವು ಚೀನಾದಂತಹ ರಾಷ್ಟ್ರಗಳನ್ನು ಕೆರಳಿಸಿದೆ. ಚೀನಾ ಈ ದಿಗ್ಬಂಧನವನ್ನು ಬೇಜವಾಬ್ದಾರಿಯುತ ಮತ್ತು ಅಪಾಯಕಾರಿ ಎಂದು ಕರೆದಿದೆ. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದಂದಿನಿಂದ ತೈಲ ಬೆಲೆಗಳು ಗಗನಕ್ಕೇರಿವೆ. ಹೋರ್ಮುಜ್ ಮೂಲಕ ಸಾಗುವ ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಭಾಗ ಈಗ ಸ್ಥಗಿತಗೊಂಡಿರುವುದು ವಿಶ್ವದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ.
ಡಿಜಿಟಲ್ ಡಿಪ್ಲೊಮಸಿ: ಹೊಸ ಕಾಲದ ಯುದ್ಧತಂತ್ರ
ಸಾಂಪ್ರದಾಯಿಕ ರಾಜತಾಂತ್ರಿಕ ಮಾತುಕತೆಗಳಿಗಿಂತ ಹೆಚ್ಚಾಗಿ, ಇರಾನ್ ಈಗ ವ್ಯಂಗ್ಯದ ಹಾಸ್ಯ ಮತ್ತು ವೈರಲ್ ಕಂಟೆಂಟ್ ಮೂಲಕ ವಿಶ್ವದ ಗಮನ ಸೆಳೆಯಲು ಯತ್ನಿಸುತ್ತಿದೆ. ಯುದ್ಧ ಭೂಮಿಯಲ್ಲಿ ಗುಂಡುಗಳು ಹಾರುತ್ತಿದ್ದರೆ, ಇಂಟರ್ನೆಟ್ ಪರದೆಯ ಮೇಲೆ ಮೀಮ್‌ಗಳು ಹಾರುತ್ತಿವೆ. ಇದು ಕೇವಲ ಭೂಪ್ರದೇಶಕ್ಕಾಗಿ ನಡೆಯುತ್ತಿರುವ ಯುದ್ಧವಲ್ಲ, ಬದಲಾಗಿ ಜಾಗತಿಕ ಅಭಿಪ್ರಾಯವನ್ನು ರೂಪಿಸುವ ತಂತ್ರವೂ ಆಗಿದೆ,(ಏಜೆನ್ಸೀಸ್).