ಕಿಮ್ ಸಾಮ್ರಾಜ್ಯದಲ್ಲಿ ಅಣ್ವಸ್ತ್ರಗಳ ಸದ್ದು: IAEA ಮುಖ್ಯಸ್ಥರು ನೀಡಿದ ಆ ಒಂದು ಎಚ್ಚರಿಕೆಗೆ ಬೆಚ್ಚಿಬಿದ್ದ ಜಗತ್ತು! 
ವಿದೇಶ

ಕಿಮ್ ಸಾಮ್ರಾಜ್ಯದಲ್ಲಿ ಅಣ್ವಸ್ತ್ರಗಳ ಸದ್ದು: IAEA ಮುಖ್ಯಸ್ಥರು ನೀಡಿದ ಆ ಒಂದು ಎಚ್ಚರಿಕೆಗೆ ಬೆಚ್ಚಿಬಿದ್ದ ಜಗತ್ತು! Nuclear Arms

ಸೋಲ್: ಜಾಗತಿಕ ನಿಷೇಧಗಳು ಮತ್ತು ವಿಶ್ವಸಂಸ್ಥೆಯ ಎಚ್ಚರಿಕೆಗಳನ್ನು ಗಾಳಿಗೆ ತೂರಿರುವ ಉತ್ತರ ಕೊರಿಯಾ, ತನ್ನ ಅಣ್ವಸ್ತ್ರ ತಯಾರಿಕಾ(Nuclear Arms) ಸಾಮರ್ಥ್ಯವನ್ನು ಅತ್ಯಂತ ಗಂಭೀರ ಎನ್ನುವಷ್ಟು ಹೆಚ್ಚಿಸಿಕೊಂಡಿದೆ. ಉತ್ತರ ಕೊರಿಯಾದ ಪ್ರಮುಖ ಅಣ್ವಸ್ತ್ರ ಘಟಕಗಳಲ್ಲಿ ಚಟುವಟಿಕೆಗಳು ಹಿಂದೆಂದಿಗಿಂತಲೂ ವೇಗವಾಗಿ ನಡೆಯುತ್ತಿವೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಎಚ್ಚರಿಸಿದೆ.

ಯೊಂಗ್‌ಬ್ಯೋನ್ ಅಣು ಸ್ಥಾವರದಲ್ಲಿ ಚಟುವಟಿಕೆಗಳ ಸ್ಫೋಟ

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಮಾತನಾಡಿದ IAEA ಮುಖ್ಯಸ್ಥ ರಾಫೆಲ್ ಗ್ರೋಸ್ಸಿ, ಉತ್ತರ ಕೊರಿಯಾದ ಯೊಂಗ್‌ಬ್ಯೋನ್ ಪರಮಾಣು ಸಂಕೀರ್ಣದಲ್ಲಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಯೊಂಗ್‌ಬ್ಯೋನ್‌ನಲ್ಲಿರುವ ರಿಯಾಕ್ಟರ್, ಸಂಸ್ಕರಣಾ ಘಟಕ ಮತ್ತು ಲೈಟ್-ವಾಟರ್ ರಿಯಾಕ್ಟರ್‌ಗಳಲ್ಲಿ ಕಾರ್ಯಾಚರಣೆಯು ತೀವ್ರಗೊಂಡಿದೆ. ಇದು ಪ್ಯೊಂಗ್ಯಾಂಗ್ ತನ್ನ ಅಣ್ವಸ್ತ್ರಗಳಿಗಾಗಿ ಬೇಕಾದ ವಿಕಿರಣಶೀಲ ವಸ್ತುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗ್ರೋಸ್ಸಿ ತಿಳಿಸಿದ್ದಾರೆ.
2009 ರಿಂದಲೂ IAEA ಇನ್ಸ್‌ಪೆಕ್ಟರ್‌ಗಳಿಗೆ ಉತ್ತರ ಕೊರಿಯಾ ಪ್ರವೇಶ ನಿಷೇಧಿಸಿದೆ. ಆದರೆ ಸ್ಯಾಟಲೈಟ್ ಚಿತ್ರಗಳು ಮತ್ತು ಬಾಹ್ಯ ವಿಶ್ಲೇಷಣೆಗಳ ಆಧಾರದ ಮೇಲೆ ಉತ್ತರ ಕೊರಿಯಾ ತನ್ನ ಯುರೇನಿಯಂ ಪುಷ್ಟೀಕರಣದ ಸಾಮರ್ಥ್ಯವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿರುವುದು ದೃಢಪಟ್ಟಿದೆ.

ರಷ್ಯಾ ಜೊತೆಗಿನ ನಂಟು ಮತ್ತು ಜಾಗತಿಕ ಬಿಕ್ಕಟ್ಟು

ಯುಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಮತ್ತು ರಷ್ಯಾ ನಡುವಿನ ಸ್ನೇಹ ಗಾಢವಾಗುತ್ತಿರುವುದು ಜಗತ್ತಿನ ಕಣ್ಣು ಕೆಂಪಾಗಿಸಿದೆ. ಆದರೆ, ಉತ್ತರ ಕೊರಿಯಾದ ಅಣ್ವಸ್ತ್ರ ಅಭಿವೃದ್ಧಿಯಲ್ಲಿ ರಷ್ಯಾದ ನೇರ ಹಸ್ತಕ್ಷೇಪದ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು IAEA ಹೇಳಿದೆ. 2006 ರಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ, ಈಗ ಡಜನ್ಗಟ್ಟಲೆ ವಾರ್‌ಹೆಡ್‌ಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

ಸಮುದ್ರದಲ್ಲೂ ಕಿಮ್ ಅಬ್ಬರ: ಹೊಸ ಡಿಸ್ಟ್ರಾಯರ್ ಮತ್ತು ಕ್ಷಿಪಣಿ ಪರೀಕ್ಷೆ

ಅಣ್ವಸ್ತ್ರಗಳ ಜೊತೆಜೊತೆಗೆ ಉತ್ತರ ಕೊರಿಯಾ ತನ್ನ ನೌಕಾಪಡೆಯನ್ನು ಆಧುನೀಕರಿಸುವತ್ತಲೂ ಗಮನ ಹರಿಸಿದೆ. ಮಂಗಳವಾರವಷ್ಟೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ನೇತೃತ್ವದಲ್ಲಿ ಚೋ ಹ್ಯೋನ್ ದರ್ಜೆಯ ಹೊಸ ಯುದ್ಧನೌಕೆಯಿಂದ ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳು ಮತ್ತು ಹಡಗು ವಿರೋಧಿ ಕ್ಷಿಪಣಿಗಳ ಪರೀಕ್ಷೆ ನಡೆಸಲಾಯಿತು.

ಪರೀಕ್ಷೆಯ ಮುಖ್ಯಾಂಶಗಳು

ಕ್ರೂಸ್ ಕ್ಷಿಪಣಿಗಳು: ಸುಮಾರು 7,869 ರಿಂದ 7,920 ಸೆಕೆಂಡುಗಳ ಕಾಲ ಹಾರಾಟ ನಡೆಸಿ ಗುರಿಯನ್ನು ಮುಟ್ಟಿವೆ.
ಆಂಟಿ-ಶಿಪ್ ಕ್ಷಿಪಣಿಗಳು: 1,973 ಸೆಕೆಂಡುಗಳ ಕಾಲ ಹಾರಾಟ ನಡೆಸಿ ಅಲ್ಟ್ರಾ ಪ್ರೆಸಿಷನ್ ಅಂದರೆ ಅತ್ಯಂತ ನಿಖರವಾಗಿ ಗುರಿಯನ್ನು ಧ್ವಂಸಗೊಳಿಸಿವೆ.
ಉದ್ದೇಶ: ಯುದ್ಧನೌಕೆಯ ಸಮಗ್ರ ಶಸ್ತ್ರಾಸ್ತ್ರ ಕಮಾಂಡ್ ಸಿಸ್ಟಮ್ ಮತ್ತು ನ್ಯಾವಿಗೇಷನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದು.
ಈ ಸಂದರ್ಭದಲ್ಲಿ ಮಾತನಾಡಿದ ಕಿಮ್ ಜಾಂಗ್ ಉನ್, ದೇಶದ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಯಾವುದೇ ಕ್ಷಣದಲ್ಲೂ ದಾಳಿ ನಡೆಸಲು ನಮ್ಮ ಪಡೆಗಳು ಸಜ್ಜಾಗಿರಬೇಕು ಎಂದು ಕರೆ ನೀಡಿದ್ದಾರೆ.

ಜಾಗತಿಕ ಭದ್ರತೆಗೆ ಎದುರಾದ ದೊಡ್ಡ ಸವಾಲು

ಉತ್ತರ ಕೊರಿಯಾದ ಈ ನಿರಂತರ ಶಸ್ತ್ರಾಸ್ತ್ರ ಪರೀಕ್ಷೆಗಳು ಕೇವಲ ದಕ್ಷಿಣ ಕೊರಿಯಾ ಅಥವಾ ಜಪಾನ್‌ಗೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿವೆ. ಆರ್ಥಿಕ ದಿಗ್ಬಂಧನಗಳ ನಡುವೆಯೂ ಕಿಮ್ ಸಾಮ್ರಾಜ್ಯವು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ತಯಾರಿಸುತ್ತಿರುವುದು ಹೇಗೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ,(ಏಜೆನ್ಸೀಸ್).