ಇನ್ನೂ ಮುಗಿದಿಲ್ಲ ಅಸಲಿ ಆಟ! ಇರಾನ್‌ಗೆ ಇಸ್ರೇಲ್​ ಪ್ರಧಾನಿ ನೀಡಿದ ಆ ಭೀಕರ ಎಚ್ಚರಿಕೆಯ ಹಿಂದಿನ ಮರ್ಮವೇನು..? 
ವಿದೇಶ

ಇನ್ನೂ ಮುಗಿದಿಲ್ಲ ಅಸಲಿ ಆಟ! ಇರಾನ್‌ಗೆ ಇಸ್ರೇಲ್​ ಪ್ರಧಾನಿ ನೀಡಿದ ಆ ಭೀಕರ ಎಚ್ಚರಿಕೆಯ ಹಿಂದಿನ ಮರ್ಮವೇನು..? Benjamin Netanyahu

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಘೋಷಿಸಿ ಇಂದಿಗೆ 11 ದಿನಗಳು ಸಂದಿವೆ. ಪರಿಸ್ಥಿತಿ ತಿಳಿಯಾಗುವ ಬದಲು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರು ಸೋಮವಾರ ರಾತ್ರಿ (ಮಾ. 9) ಇರಾನ್‌ಗೆ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. ನಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ, ಇರಾನ್‌ನ ಸರ್ವಾಧಿಕಾರಿ ಆಡಳಿತದ ಬೆನ್ನುಮೂಳೆ ಮುರಿಯುವವರೆಗೆ ನಾವು ವಿಶ್ರಮಿಸುವುದಿಲ್ಲ ಎಂದು ಗುಡುಗಿದ್ದಾರೆ.

ಬೆನ್ನುಮೂಳೆ ಮುರಿಯುವ ಕೆಲಸ ಶುರುವಾಗಿದೆ: ನೆತನ್ಯಾಹು ಕಿಡಿ

ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ನೆತನ್ಯಾಹು, ಇರಾನ್‌ನ ಧಾರ್ಮಿಕ ನಾಯಕತ್ವವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದಾರೆ.
ಇರಾನ್‌ನ ಜನತೆ ಸರ್ವಾಧಿಕಾರದ ನೊಗವನ್ನು ಕಿತ್ತೆಸೆಯಬೇಕೆಂಬುದು ನಮ್ಮ ಆಕಾಂಕ್ಷೆಯಾಗಿದೆ. ಇದು ಅಂತಿಮವಾಗಿ ಅವರ ಮೇಲೆ ಅವಲಂಬಿತವಾಗಿದೆ. ಆದರೆ, ಇದುವರೆಗೆ ನಾವು ಕೈಗೊಂಡ ಕ್ರಮಗಳಿಂದ ಇರಾನ್ ಆಡಳಿತದ ಮೂಳೆಗಳನ್ನು ನಾವು ಮುರಿಯುತ್ತಿದ್ದೇವೆ ಎಂಬಲ್ಲಿ ಸಂಶಯವಿಲ್ಲ. ನೆನಪಿರಲಿ, ನಾವು ಇನ್ನೂ ಕೆಲಸ ಮುಗಿಸಿಲ್ಲ ಎಂದು ಇಸ್ರೇಲ್​ ಪ್ರಧಾನಿ ಎಚ್ಚರಿಸಿದ್ದಾರೆ.
ಈ ಯುದ್ಧದ ಮೂಲಕ ಇಸ್ರೇಲ್‌ನ ಅಂತಾರಾಷ್ಟ್ರೀಯ ಸ್ಥಾನಮಾನದಲ್ಲಿ ದೊಡ್ಡ ಬದಲಾವಣೆ ತರುವುದಾಗಿ ನೆತನ್ಯಾಹು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುದ್ಧ ಯಾವಾಗ ಮುಗಿಯಬೇಕೆಂದು ನಾವೇ ನಿರ್ಧರಿಸುತ್ತೇವೆ; ಇರಾನ್ ತಿರುಗೇಟು

ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧವು ಶೀಘ್ರದಲ್ಲೇ ಮುಗಿಯಬಹುದು ಎಂದು ಹೇಳಿಕೆ ನೀಡಿದ್ದರು. ಆದರೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ಅಮೆರಿಕದ ಪಡೆಗಳು ಈ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಯುದ್ಧದ ಅಂತ್ಯವನ್ನು ನಿರ್ಧರಿಸುವ ಅಧಿಕಾರ ಕೇವಲ ನಮಗಿದೆ ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಪ್ರಾದೇಶಿಕ ಸಮೀಕರಣಗಳು ಮತ್ತು ಭವಿಷ್ಯದ ಸ್ಥಿತಿಗತಿಗಳು ಈಗ ಇರಾನ್ ಸಶಸ್ತ್ರ ಪಡೆಗಳ ಕೈಯಲ್ಲಿದೆ ಎಂದು ಇರಾನ್ ಪ್ರತಿಪಾದಿಸಿದೆ.

ನೂತನ ಸುಪ್ರೀಂ ಲೀಡರ್ ನೇಮಕ: ಟ್ರಂಪ್ ಅಸಮಾಧಾನ!

ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ 56 ವರ್ಷದ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ನೂತನ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ನನಗೆ ಈ ನಿರ್ಧಾರದಿಂದ ಸಂತೋಷವಾಗಿಲ್ಲ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮೊಜ್ತಬಾ ಖಮೇನಿ ಅವರ ನೇಮಕವು ಇರಾನ್‌ನ ಹಠಮಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುದ್ಧದ ಸದ್ಯದ ಚಿತ್ರಣ

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದಾಗ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ನೆಲೆಗಳ ಮೇಲೆ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.
ಕಾರ್ಯಾಚರಣೆ ರೋರಿಂಗ್ ಲಯನ್: ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗೆ ಈ ಹೆಸರಿಟ್ಟಿದ್ದು, ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನು ತುರ್ತು ಪರಿಸ್ಥಿತಿಗೆ ಸನ್ನದ್ಧಗೊಳಿಸಿದೆ.

ಮುಂದಿನ ದಿನಗಳು ನಿರ್ಣಾಯಕ

ನೆತನ್ಯಾಹು ಅವರ ನಾಟ್ ಡನ್ ಯೆಟ್ ಎಂಬ ಹೇಳಿಕೆಯು ಮುಂಬರುವ ದಿನಗಳಲ್ಲಿ ಇರಾನ್ ಮೇಲೆ ಮತ್ತಷ್ಟು ಭೀಕರ ವೈಮಾನಿಕ ಮತ್ತು ಭೂಸೇನಾ ದಾಳಿಗಳು ನಡೆಯುವ ಮುನ್ಸೂಚನೆ ನೀಡಿದೆ. ಇತ್ತ ಇರಾನ್ ಕೂಡ ತನ್ನ ಸರ್ವಶಕ್ತಿಯನ್ನು ಬಳಸಿ ಹೋರಾಡಲು ಸಜ್ಜಾಗಿದ್ದು, ಮಧ್ಯಪ್ರಾಚ್ಯದ ಶಾಂತಿ ಸಂಪೂರ್ಣವಾಗಿ ಹದಗೆಟ್ಟಿದೆ,(ಏಜೆನ್ಸೀಸ್​).