ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಮಂಗನ ಮರಿ ಪಂಚ್
- ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಅನಾಥ ಮಂಗನ ಮರಿ ಪಂಚ್
- ಪಂಚ್‌ನ ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು
- ಪಂಚ್‌ನ ನಡುವಳಿಕೆ ಬಗ್ಗೆ ಸ್ಪಷ್ಟಣೆ ಕೊಟ್ಟ ಮೃಗಾಲಯ ಸಿಬ್ಬಂದಿ
ಟೋಕಿಯೋ: ನೀವು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದರೆ, ಒಂದು ಪುಟ್ಟ ಮಂಗ ತನ್ನ ಗಾತ್ರಕ್ಕಿಂತ ದೊಡ್ಡದಿರುವ ಬೊಂಬೆಯನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಖಂಡಿತ ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿರುವ ಈ ವಿಡಿಯೋ ಹಿಂದಿರುವ ಕಥೆ ಅತೀವ ನೋವಿನಿಂದ ಕೂಡಿದೆ.
ಯಾರು ಈ 'ಪಂಚ್'? ಬೊಂಬೆಗೂ ಇವನಿಗೂ ಏನು ಸಂಬಂಧ?
ಈ ವಿಡಿಯೋದಲ್ಲಿರುವ ಮಂಗನ ಮರಿಯ ಹೆಸರು ಪಂಚ್ (Punch The Monkey). ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಮಕಾಕ್ ಮರಿಯನ್ನು ಅದು ಹುಟ್ಟಿದ ತಕ್ಷಣವೇ ಅದರ ತಾಯಿ ಕೈಬಿಟ್ಟಿತ್ತು. ಅಂದಿನಿಂದ ಮೃಗಾಲಯದ ಸಿಬ್ಬಂದಿಯೇ ಇದನ್ನು ಮಗುವಿನಂತೆ ಸಾಕುತ್ತಿದ್ದಾರೆ. ತಾಯಿಯಿಲ್ಲದ ಒಂಟಿತನ ಪಂಚ್‌ನನ್ನು ಕಾಡಬಾರದು ಎಂಬ ಕಾರಣಕ್ಕೆ ಆರೈಕೆದಾರರು ಅದಕ್ಕೆ ಒರಾಂಗುಟನ್ ಪ್ರಭೇದದ ಮಂಗದ ಬೊಂಬೆಯೊಂದನ್ನು ನೀಡಿದ್ದರು. ಆ ಬೊಂಬೆಯನ್ನೇ ತನ್ನ ತಾಯಿ ಎಂದು ನಂಬಿದ ಪಂಚ್, ಎಲ್ಲಿಗೆ ಹೋದರೂ ಅದನ್ನು ತನ್ನ ಜತೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಮೃಗಾಲಯ ಸಿಬ್ಬಂದಿ ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ? ನೋಡುಗರು ರೊಚ್ಚಿಗೆದ್ದಿದ್ದೇಕೆ?
ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ನೆಟ್ಟಿಗರನ್ನು ಆಘಾತಕ್ಕೀಡು ಮಾಡಿದೆ. ಇದರಲ್ಲಿ ಪಂಚ್ ತನ್ನ ನೆಚ್ಚಿನ ಬೊಂಬೆಯೊಂದಿಗೆ ಆಟವಾಡುತ್ತಿರುವಾಗ, ದೊಡ್ಡ ಮಂಗವೊಂದು ಅಟ್ಟಿಸಿಕೊಂಡು ಬಂದು ಪಂಚ್‌ನನ್ನು ನೆಲದ ಮೇಲೆ ಎಳೆಯುತ್ತದೆ. ಭಯಭೀತನಾದ ಪಂಚ್ ಹೇಗೋ ತಪ್ಪಿಸಿಕೊಂಡು ಓಡಿಹೋಗಿ, ಸಾಂತ್ವನಕ್ಕಾಗಿ ಮತ್ತೆ ತನ್ನ ಆ ಬೊಂಬೆಯನ್ನೇ ಅಪ್ಪಿಕೊಳ್ಳುತ್ತಾನೆ. ಈ ದೃಶ್ಯ ನೋಡುಗರಿಗೆ ಕರುಳನ್ನ ಹಿಂಡಿದ ಅನುಭವ ನೀಡಿದ್ದು, ಮಂಗಗಳ ನಡುವೆಯು ಬುಲ್ಲಿಯಿಂಗ್ (ಪೀಡಿಸುವುದು) ನಡೆಯುತ್ತದೆಯೇ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
ಮೃಗಾಲಯದ ಸ್ಪಷ್ಟನೆ: ಅದು ಪೀಡನೆಯಲ್ಲ, ಶಿಸ್ತು!
ಈ ವಿವಾದದ ಬಗ್ಗೆ ಇಚಿಕಾವಾ ಸಿಟಿ ಮೃಗಾಲಯವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪಂಚ್ ಮತ್ತೊಂದು ಮರಿ ಮಂಗನ ಜೊತೆ ಆಟವಾಡಲು ಹೋದಾಗ, ಆ ಮರಿಯ ತಾಯಿ ತನ್ನ ಮಗುವಿನ ರಕ್ಷಣೆಗಾಗಿ ಪಂಚ್‌ನನ್ನು ಎಳೆದಿದೆ ಎಂದು ಮೃಗಾಲಯ ವಿವರಿಸಿದೆ. ಪಂಚ್‌ನ ಬಗ್ಗೆ ಕನಿಕರ ಪಡಬೇಡಿ, ಗುಂಪಿನೊಂದಿಗೆ ಬೆರೆಯಲು ಕಲಿಯುವ ಹಂತದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಪಂಚ್ ಮಾನಸಿಕವಾಗಿ ತುಂಬಾ ಗಟ್ಟಿಯಾಗಿದ್ದಾನೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಪಂಚ್ ಅಪ್ಪಿಕೊಂಡಿರುವ ಆ ಬೊಂಬೆ ಐಕಿಯಾ ಕಂಪನಿಯದ್ದಾಗಿದೆ. ವಿಷಯ ತಿಳಿಯುತ್ತಿದ್ದಂತೆ ಐಕಿಯಾ ಜಪಾನ್ ಅಧ್ಯಕ್ಷೆ ಪೆಟ್ರಾ ಫೇರ್ ಅವರು ಮೃಗಾಲಯಕ್ಕೆ ಭೇಟಿ ನೀಡಿ, ಪಂಚ್ ಮತ್ತು ಅಲ್ಲಿನ ಇತರ ಪ್ರಾಣಿಗಳಿಗೆ ಸಾಕಷ್ಟು ಬೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕೃತಿ ಮತ್ತು ಪ್ರೀತಿಯ ನಡುವಿನ ಸಂಘರ್ಷ
ಸದ್ಯಕ್ಕೆ ಪಂಚ್ ಸುರಕ್ಷಿತವಾಗಿದ್ದಾನೆ. ಆದರೆ ಬೊಂಬೆಯನ್ನೇ ಸರ್ವಸ್ವ ಎಂದು ನಂಬಿದ ಈ ಅನಾಥ ಮರಿಯ ಕಥೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಾಣಿಗಳಿಗೂ ಭಾವನೆಗಳಿರುತ್ತವೆ ಮತ್ತು ಅವು ಸಹ ಮನುಷ್ಯರಂತೆ ಕೋಪ, ಪ್ರೀತಿ, ಅಸೂಯೆ ಮೊದಲಾದ ಭಾವನೆಗಳನ್ನು ವ್ಯಕ್ತ ಪಡಿಸುತ್ತವೆ ಎನ್ನುವುದಕ್ಕೆ ಈ ಪಂಚ್‌ನ ವಿಡಿಯೋವೆ ನಿದರ್ಶನವಾಗಿದೆ,(ಏಜನ್ಸೀಸ್).