ಪ್ರಕೃತಿಯ ರುದ್ರನರ್ತನ ಶುರು: 2026-27ರಲ್ಲಿ El Nino ಆರ್ಭಟ, ಹೇಗಿರಲಿದೆ ವಿಶ್ವದ ಹವಾಮಾನ? ಇಲ್ಲಿದೆ ಕಂಪ್ಲೀಟ್​ ಮಾಹಿತಿ... 
ವಿದೇಶ

ಪ್ರಕೃತಿಯ ರುದ್ರನರ್ತನ ಶುರು: 2026-27ರಲ್ಲಿ El Nino ಆರ್ಭಟ, ಹೇಗಿರಲಿದೆ ವಿಶ್ವದ ಹವಾಮಾನ? ಇಲ್ಲಿದೆ ಕಂಪ್ಲೀಟ್​ ಮಾಹಿತಿ...

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ಬೇಗೆಗೆ ತತ್ತರಿಸಿರುವ ಜನರು ಎಷ್ಟೇ ಬೇಡಿಕೊಂಡರು ವರುಣನ ಆಗಮನ ಮಾತ್ರ ಆಗುತ್ತಿಲ್ಲ
  • ದಿನದಿಂದ ದಿನಕ್ಕೆ ಬಿಸಿಲಿನ ಹೊಡೆತ ಹೆಚ್ಚಾಗುತ್ತಿದ್ದು ಮನೆಯಿಂದ ಹೊರ ಬರಲು ಜನರು ಹೆದರುವಂತಾಗಿದೆ
  • ಇದರ ನಡುವೆಯೇ ವಿಶ್ವವೇ ಚಿಂತೆಗೀಡಾಗುವಂತಹ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ
  • 2026ರ ದ್ವಿತೀಯಾರ್ಧದಲ್ಲಿ ಜಗತ್ತಿನ ಹವಾಮಾನ ವ್ಯವಸ್ಥೆಯಲ್ಲಿ ಭಾರಿ ಏರುಪೇರು ಉಂಟಾಗಲಿದೆ
ನವದೆಹಲಿ: ಬಿಸಿಲಿನ ಬೇಗೆಗೆ ತತ್ತರಿಸಿರುವ ಜನರು ಎಷ್ಟೇ ಬೇಡಿಕೊಂಡರು ವರುಣನ ಆಗಮನ ಮಾತ್ರ ಆಗುತ್ತಿಲ್ಲ. ಇದರ ಪರಿಣಾಮ ದಿನದಿಂದ ದಿನಕ್ಕೆ ಬಿಸಿಲಿನ ಹೊಡೆತ ಹೆಚ್ಚಾಗುತ್ತಿದೆ. ಇದರಿಂದ ಮನೆಯಿಂದ ಹೊರಗಡೆ ಬರಲು ಕೂಡ ಜನರು ಹೆದರುವಂತಾಗಿದೆ. ಇದರ ನಡುವೆಯೇ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, 2026ರ ದ್ವಿತೀಯಾರ್ಧದಲ್ಲಿ ಜಗತ್ತಿನ ಹವಾಮಾನ ವ್ಯವಸ್ಥೆಯಲ್ಲಿ ಭಾರಿ ಏರುಪೇರು ಉಂಟಾಗಲಿದ್ದು, ಪ್ರಬಲ 'ಎಲ್ ನಿನೊ' (El Nino) ವಿದ್ಯಮಾನವು ಮರುಕಳಿಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ ಏಷ್ಯಾದ ಬಹುತೇಕ ಭಾಗಗಳಲ್ಲಿ ತೀವ್ರವಾದ ಬಿಸಿಲು ಮತ್ತು ಬರಗಾಲದ ಭೀತಿ ಎದುರಾದರೆ, ಅತ್ತ ಅಮೆರಿಕದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಅತಿಯಾದ ಮಳೆಯ ಆರ್ಭಟ ಕಂಡುಬರಲಿದೆ. ಈ ಜಾಗತಿಕ ಹವಾಮಾನ ಬದಲಾವಣೆಯು ಕೃಷಿ, ಪರಿಸರ ಮತ್ತು ಜನಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಈಗ ಆತಂಕಕ್ಕೆ ಕಾರಣವಾಗಿದೆ.
ಜಪಾನ್ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷದ ಉತ್ತರ ಗೋಳಾರ್ಧದ ಬೇಸಿಗೆಯ ಅವಧಿಯಲ್ಲಿ 'ಎಲ್ ನಿನೋ' ಉಂಟಾಗುವ ಸಾಧ್ಯತೆ ಶೇ. 70 ರಷ್ಟಿದೆ. ಇದರ ಬೆನ್ನಲ್ಲೇ ಭಾರತದ ಹವಾಮಾನ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾದ ಮಾನ್ಸೂನ್ ಮಳೆಯ ಪ್ರಮಾಣ ಸರಾಸರಿಗಿಂತ ಕುಸಿಯಬಹುದು ಎಂದು ಎಚ್ಚರಿಸಿದೆ. ಇನ್ನು ಚೀನಾದ ಹವಾಮಾನ ಅಧಿಕಾರಿಗಳು ಏಪ್ರಿಲ್​ ತಿಂಗಳಿನಿಂದಲೇ ಎಲ್ ನಿನೋ ಪರಿಸ್ಥಿತಿಗಳು ಆರಂಭವಾಗಿದ್ದು, ಇದು ಈ ವರ್ಷದ ಅಂತ್ಯದವರೆಗೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಮೇ ತಿಂಗಳಿಂದ ಜುಲೈ ವರೆಗಿನ ಅವಧಿಯಲ್ಲಿ ಎಲ್ ನಿನೋ ಸಂಭವಿಸುವ ಸಾಧ್ಯತೆ ಶೇ. 61 ರಷ್ಟು ಇರುತ್ತದೆ ಎಂದು ಅಮೆರಿಕದ ಹವಾಮಾನ ಮುನ್ಸೂಚನಾ ಕೇಂದ್ರವು ಅಂದಾಜಿಸಿದೆ. ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಕೂಡ ಮುನ್ಸೂಚನೆ ನೀಡಿದ್ದು, ತಮ್ಮ ದೇಶದ ಬೆಳೆಯ ಅವಧಿಯ ಮೊದಲಾರ್ಧವಾದ ಮೇ ಮತ್ತು ಆಗಸ್ಟ್ ನಡುವೆ ಪೂರ್ವ ಬೆಳೆ ಪ್ರದೇಶಗಳಲ್ಲಿ ದೀರ್ಘಾವಧಿಯ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ಭಾರತದಾದ್ಯಂತ ಮಳೆ ಕಡಿಮೆ ಮತ್ತು ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚಿರುವುದಾಗಿ ಹವಾಮಾನ ಮಾದರಿಗಳು ಸೂಚಿಸುತ್ತವೆ ಎಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹವಾಮಾನ ಗುಪ್ತಚರ ಸಂಸ್ಥೆ ಮೆಟಿಯೊಮ್ಯಾಟಿಕ್ಸ್‌ನ ಹವಾಮಾನಶಾಸ್ತ್ರಜ್ಞ ಕ್ರಿಸ್ ಹೈಡ್ ಹೇಳಿದ್ದಾರೆ. ಅಲ್ಲದೆ, ಈ ವರ್ಷ ಅಮೆರಿಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮಧ್ಯಪಶ್ಚಿಮದಲ್ಲಿ ಬೆಳೆಯಲು ಸೂಕ್ತವಾದ ಪರಿಸ್ಥಿತಿಗಳು ಇರುತ್ತವೆ ಎಂದು ಭಾವಿಸುತ್ತೇನೆ. ಆದರೆ, ಎಲ್ ನಿನೋದ ಸಮಯವನ್ನು ಸಹ ನಾವು ಗಮನಿಸಬೇಕಾಗುತ್ತದೆ. ಏಕೆಂದರೆ, ಅತಿಯಾದ ತೇವಾಂಶವು ಕೊಯ್ಲಿನ ಮೇಲೆ ಕೆಲವು ಪರಿಣಾಮ ಬೀರಬಹುದು ಎಂದು ಹೈಡ್ ಹೇಳಿದ್ದಾರೆ.

ಏನಿದು ಎಲ್​ ನಿನೋ ಹಾಗೂ ಲಾ ನಿನಾ?

ಎಲ್ ನಿನೋ ಮತ್ತು ಲಾ ನಿನಾ ಎಂಬುದು ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುವ ಒಂದೇ ಹವಾಮಾನ ವ್ಯವಸ್ಥೆಯ ವಿರುದ್ಧ ಹಂತಗಳಾಗಿವೆ. ಎಲ್ ನಿನೋ ಎನ್ನುವುದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರದ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗುವ ಒಂದು ನೈಸರ್ಗಿಕ ಮಾದರಿಯಾಗಿದೆ. ವಾತಾವರಣದ ಒತ್ತಡದಲ್ಲಿನ ಬದಲಾವಣೆಯಿಂದಾಗಿ ಪಶ್ಚಿಮದಿಂದ ಬೀಸುವ ಮಾರುತಗಳು ದುರ್ಬಲಗೊಂಡಾಗ ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿದಾಗ, ಪಶ್ಚಿಮ ಪೆಸಿಫಿಕ್‌ನಲ್ಲಿ ಸಂಗ್ರಹವಾಗಿರುವ ಬೆಚ್ಚಗಿನ ನೀರು ಪೂರ್ವದ ಕಡೆಗೆ ಚಲಿಸುತ್ತದೆ. ಈ ಶಾಖದ ಮರುಹಂಚಿಕೆಯು ಜಾಗತಿಕ ಹವಾಮಾನ ಮಾದರಿಗಳನ್ನೇ ಬದಲಾಯಿಸುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಲಾ ನಿನಾ ವಿದ್ಯಮಾನವು ಮಾರುತಗಳು ಬಲಗೊಂಡಾಗ ಸಂಭವಿಸುತ್ತದೆ. ಈ ಮಾರುತಗಳು ಹೆಚ್ಚಿನ ಪ್ರಮಾಣದ ಬೆಚ್ಚಗಿನ ನೀರನ್ನು ಪಶ್ಚಿಮ ಪೆಸಿಫಿಕ್ ಕಡೆಗೆ ತಳ್ಳುತ್ತವೆ, ಇದರಿಂದಾಗಿ ಪೂರ್ವ ಭಾಗದಲ್ಲಿ ಕೆಳಗಿನಿಂದ ತಂಪಾದ ನೀರು ಮೇಲಕ್ಕೆ ಬರುತ್ತದೆ. ಇದರ ಪರಿಣಾಮವಾಗಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆಯ ಪ್ರಕಾರ, ಎಲ್ ನಿನೋ ಸರಾಸರಿ ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಸಂಭವಿಸಿದರೆ, ಲಾ ನಿನಾ ಪ್ರತಿ ಮೂರರಿಂದ ಏಳು ವರ್ಷಗಳಿಗೊಮ್ಮೆ ಉಂಟಾಗುತ್ತದೆ.
ಅಂಹಾಗೆ, ಈ ಎರಡು ವಿದ್ಯಮಾನಗಳು ಜಗತ್ತಿನಾದ್ಯಂತ ಮಳೆಯ ಪ್ರಮಾಣದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಲಾ ನಿನಾ ಸಾಮಾನ್ಯವಾಗಿ ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ತರುತ್ತದೆ, ಆದರೆ ಭಾರತೀಯ ಮಾನ್ಸೂನ್ ಮೇಲೆ ಇದರ ಪ್ರಭಾವವು ಏಕರೂಪವಾಗಿರದೆ ವ್ಯತ್ಯಾಸಗಳಿಂದ ಕೂಡಿರುತ್ತದೆ. ಅಮೆರಿಕ ಖಂಡಗಳಲ್ಲಿ ಲಾ ನಿನಾ ಪ್ರಭಾವದಿಂದ ಉತ್ತರ ಅಮೆರಿಕಾದಲ್ಲಿ ಆರ್ದ್ರತೆ ಹೆಚ್ಚಿದ್ದರೆ, ದಕ್ಷಿಣ ಅಮೆರಿಕದಲ್ಲಿ ಶುಷ್ಕ ವಾತಾವರಣವಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಲಾ ನಿನಾ ಸಮಯದಲ್ಲಿ ಅಮೆರಿಕ ಖಂಡದ ಹೆಚ್ಚಿನ ಭಾಗಗಳು ಒಣ ಹವೆಯನ್ನು ಎದುರಿಸುತ್ತವೆ.

ಈ ಹಿಂದೆ ಎಲ್​ ನಿನೋ ಯಾವ ರೀತಿಯ ಪರಿಣಾಮಗಳನ್ನು ಉಂಟು ಮಾಡಿದ್ದವು?

ಎಲ್ ನಿನೋ ವಿದ್ಯಮಾನಗಳು ಜಾಗತಿಕ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. 1997-1998ರ ಪ್ರಬಲ ಎಲ್ ನಿನೋ ಏಷ್ಯಾದಲ್ಲಿ ಭೀಕರ ಬರಗಾಲ ಮತ್ತು ಅಮೆರಿಕಾದಲ್ಲಿ ಪ್ರವಾಹಕ್ಕೆ ಕಾರಣವಾದರೆ, 2015-2016ರ ಘಟನೆಯು ಆಸ್ಟ್ರೇಲಿಯಾ ಹಾಗೂ ಆಗ್ನೇಯ ಏಷ್ಯಾದಲ್ಲಿ ಬರ ಮತ್ತು ಭಾರತದ ಮುಂಗಾರನ್ನು ಕುಂಠಿತಗೊಳಿಸಿ ಧಾನ್ಯ ಹಾಗೂ ಸಕ್ಕರೆ ಉತ್ಪಾದನೆಯನ್ನು ತಗ್ಗಿಸಿತು. ಇದೇ ವೇಳೆ ದಕ್ಷಿಣ ಅಮೆರಿಕದಲ್ಲಿ ಅತಿಯಾದ ಮಳೆಯಿಂದ ಸೋಯಾಬೀನ್ ಮತ್ತು ಜೋಳದ ಬೆಳೆಗಳು ಹಾನಿಗೊಳಗಾದವು. 2009-2010ರ ಸಾಧಾರಣ ಎಲ್ ನಿನೋ ಕೂಡ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಅಕ್ಕಿ ಹಾಗೂ ಗೋಧಿಯ ಇಳುವರಿಯನ್ನು ಕಡಿಮೆ ಮಾಡಿತ್ತು. ಇನ್ನು 2020 ರಿಂದ 2023 ರವರೆಗೆ ಸಂಭವಿಸಿದ ಇತ್ತೀಚಿನ ಪ್ರಬಲ 'ಲಾ ನಿನಾ' ವಿದ್ಯಮಾನವು ಇದಕ್ಕೆ ವಿರುದ್ಧವಾದ ಹವಾಮಾನ ವೈಪರೀತ್ಯಗಳನ್ನು ಸೃಷ್ಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿತು.

ಎಲ್ ನಿನೋ ಭಾರತದ ಮಾನ್ಸೂನ್ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಅಂದಹಾಗೆ, ನೈಋತ್ಯ ಮಾನ್ಸೂನ್ ಭಾರತದ ಕೃಷಿಯ ಜೀವಾಳವಾಗಿದೆ. ರಾಷ್ಟ್ರದ ವಾರ್ಷಿಕ ಮಳೆಯಲ್ಲಿ ಶೇ. 70 ರಷ್ಟು ಮಳೆಯನ್ನು ಈ ನೈಋತ್ಯ ಮಾನ್ಸೂನ್​ ಒದಗಿಸುತ್ತದೆ. ಆದಾಗ್ಯೂ, ಎಲ್​ ನಿನೋ ಈ ವ್ಯವಸ್ಥೆಗೆ ಅನೇಕ ವಿಧದಲ್ಲಿ ಅಡ್ಡಿಯಾಗಬಹುದು ತಜ್ಞರು ಎಚ್ಚರಿಸಿದ್ದಾರೆ. ಎಲ್ ನಿನೋ ಪ್ರಭಾವವು ಹೆಚ್ಚಾಗುತ್ತಿರುವ ಈ ಸಂದರ್ಭವು ಭಾರತದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಬದಲಾವಣೆಯಿಂದಾಗಿ 2027ರ ಬೇಸಿಗೆಯಲ್ಲಿ ತಾಪಮಾನವು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದ್ದು, ಇದು ಮಳೆಯ ಪ್ರಮಾಣವನ್ನು ಕುಗ್ಗಿಸಿ ವಿಶೇಷವಾಗಿ ರೈತರಿಗೆ ಸಂಕಷ್ಟ ತಂದೊಡ್ಡಬಹುದು. ಈ ಹಿಂದೆ 2015ರಲ್ಲಿ ಉಂಟಾದ ಎಲ್ ನಿನೋ ಪ್ರಭಾವದಿಂದಾಗಿ 2016ರಲ್ಲಿ ಜಗತ್ತಿನಾದ್ಯಂತ ತೀವ್ರ ಬಿಸಿಲು ಮತ್ತು ಭೀಕರ ಬರಗಾಲ ಸೃಷ್ಟಿಯಾದದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಕರ್ನಾಟಕದ ಮೇಲೆ ಎಲ್​ ನಿನೋ ಪ್ರಭಾವ ಏನು?

ಅಂದಹಾಗೆ, ಎಲ್ ನಿನೋ ವಿದ್ಯಮಾನವು ಭಾರತದ ವಿವಿಧ ಭಾಗಗಳಲ್ಲಿ ಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಸಾಮಾನ್ಯವಾಗಿ ಉತ್ತರ ಭಾರತ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ಪ್ರದೇಶಗಳು ಎಲ್ ನಿನೋದಿಂದಾಗಿ ತೀವ್ರ ಮಳೆ ಕೊರತೆ ಅಥವಾ ಬರಗಾಲವನ್ನು ಎದುರಿಸುತ್ತವೆ. ಆದರೆ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗಗಳಲ್ಲಿ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಸಮುದ್ರದ ಉಷ್ಣತೆ ಹೆಚ್ಚಾದಾಗ ಭೂಮಿಯು ಆ ಶಾಖವನ್ನು ಹೀರಿಕೊಳ್ಳುವುದರಿಂದ ಬೇಸಿಗೆಯ ತಾಪಮಾನ ಏರಿಕೆಯಾಗುತ್ತದೆ. ಆದರೂ, ಕೆಲವು ಪೂರಕ ಹವಾಮಾನ ವ್ಯವಸ್ಥೆಗಳಿಂದಾಗಿ ಈ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಚೆನ್ನೈನ ಹವಾಮಾನ ತಜ್ಞ ಶ್ರೀಕಾಂತ್ ವಿವರಿಸಿದ್ದಾರೆ. ಎಲ್ ನಿನೋ ಪ್ರಭಾವದಿಂದ ನೈಋತ್ಯ ಮುಂಗಾರು ಮಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೂ, ಅದು ಈಶಾನ್ಯ ಮುಂಗಾರು (ಹಿಂಗಾರು) ಮಳೆಗೆ ವರದಾನವಾಗುವ ಸಾಧ್ಯತೆ ಇರುತ್ತದೆ. ಎಲ್ ನಿನೋ ಸಮಯದಲ್ಲಿ ಈಶಾನ್ಯ ಮುಂಗಾರು ಮಾರುತಗಳು ಬಲಗೊಂಡು ಅತಿ ಹೆಚ್ಚು ಮಳೆ ತರಬಲ್ಲವು. ಇದರೊಂದಿಗೆ, ಹಿಂದೂ ಮಹಾಸಾಗರದಲ್ಲಿ ಕಂಡುಬರುವ 'ಇಂಡಿಯನ್ ಓಷನ್ ಡೈಪೋಲ್' (IOD) ಎಂಬ ತಾಪಮಾನದ ವ್ಯತ್ಯಯವು ಎಲ್ ನಿನೋದ ನಕಾರಾತ್ಮಕ ಪರಿಣಾಮಗಳನ್ನು ಸರಿದೂಗಿಸುತ್ತದೆ. ಹೀಗಾಗಿ, ಪ್ರತಿಯೊಂದು ಎಲ್ ನಿನೋ ಕೂಡ ಬರಗಾಲಕ್ಕೆ ಕಾರಣವಾಗುವುದಿಲ್ಲ, ಬದಲಿಗೆ ಇತರ ಸಾಗರ ವಿದ್ಯಮಾನಗಳು ಸಮತೋಲನ ಕಾಯ್ದುಕೊಂಡು ಉತ್ತಮ ಮಳೆಯನ್ನು ನೀಡುತ್ತವೆ.

ಎಲ್​ ನಿನೋ ಹೇಗೆ ಎದುರಿಸಬಹುದು?

ಪಶ್ಚಿಮದ ಹವಾಮಾನ ಮಾದರಿಗಳು 2027ರಲ್ಲಿ ಶೇ. 62ರಷ್ಟು ಎಲ್ ನಿನೋ (El Niño) ಸಂಭವಿಸುವ ಸಾಧ್ಯತೆಯನ್ನು ಸೂಚಿಸಿದ್ದು, ಇದು ಕಳೆದ 140 ವರ್ಷಗಳಲ್ಲೇ ಅತ್ಯಂತ ಪ್ರಬಲ ವಿದ್ಯಮಾನವಾಗುವ ಮುನ್ಸೂಚನೆ ನೀಡಿದೆ. ಇದು ಗಂಭೀರ ಆತಂಕಕ್ಕೆ ಕಾರಣವಾಗಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಪರಿಸ್ಥಿತಿ ಅನಿಶ್ಚಿತವಾಗಿರುವ ಈ ಸಂದರ್ಭದಲ್ಲಿ, ಕೃಷಿ, ಆರೋಗ್ಯ ಮತ್ತು ಜಲ ನಿರ್ವಹಣಾ ಕ್ಷೇತ್ರಗಳಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).