ಟ್ರಂಪ್ ಬೇಡ ಅಂದಿದ್ದ ವ್ಯಕ್ತಿಯೇ ಈಗ ಗಲ್ಫ್ ರಾಷ್ಟ್ರಗಳ ರಕ್ಷಕ!ಇರಾನ್‌ನ ಮೊಪೆಡ್ಗಳನ್ನು ಚಿಂದಿ ಮಾಡಲು ಸಿದ್ಧವಾದ ಯುಕ್ರೇನ್ ಡ್ರೋನ್‌ಗಳು!
ದುಬೈ: ಮಧ್ಯಪ್ರಾಚ್ಯದ ಯುದ್ಧಭೂಮಿಯಲ್ಲಿ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಇರಾನ್‌ನ ಅಗ್ಗದ ಬೆಲೆಯ ಆದರೆ ಅತ್ಯಂತ ವಿನಾಶಕಾರಿ ಶಾಹೆದ್ ಡ್ರೋನ್‌ಗಳ ಅಬ್ಬರಕ್ಕೆ ತತ್ತರಿಸಿರುವ ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕ, ಈಗ ಸಹಾಯಕ್ಕಾಗಿ ಯುಕ್ರೇನ್‌ನತ್ತ (Sting Interceptor) ಮುಖ ಮಾಡಿವೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇರಾನ್ ನಿರ್ಮಿತ ಇದೇ ಡ್ರೋನ್‌ಗಳನ್ನು ಎದುರಿಸಿ ಪಳಗಿರುವ ಯುಕ್ರೇನ್, ಈಗ ಗಲ್ಫ್ ರಾಷ್ಟ್ರಗಳ ಪಾಲಿಗೆ ರಕ್ಷಕನಾಗಿ ಉದಯಿಸಿದೆ.
ಹಾರುವ ಮೊಪೆಡ್ಗಳ ಆರ್ಭಟ ಮತ್ತು ಅಮೆರಿಕದ ಲೆಕ್ಕಾಚಾರ
ಇರಾನ್‌ನ ಶಾಹೆದ್-136 ಡ್ರೋನ್‌ಗಳನ್ನು ಅವುಗಳ ವಿಶಿಷ್ಟ ಶಬ್ದದಿಂದಾಗಿ ಹಾರುವ ಮೊಪೆಡ್‌ಗಳು ಎಂದು ಕರೆಯಲಾಗುತ್ತದೆ. ಕೇವಲ $20,000 ರಿಂದ $30,000 (ಸುಮಾರು 18-25 ಲಕ್ಷ ರೂ.) ವೆಚ್ಚದ ಈ ಪುಟ್ಟ ಡ್ರೋನ್‌ಗಳು ಅಮೆರಿಕದ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ಷಣಾ ವ್ಯವಸ್ಥೆಯನ್ನು ಅಕ್ಷರಶಃ ಹೈರಾಣಾಗಿಸಿವೆ. ವರದಿಗಳ ಪ್ರಕಾರ, ಕಳೆದ ಮೂರು ವಾರಗಳಲ್ಲಿ ಇರಾನ್ ನಡೆಸಿದ ಡ್ರೋನ್ ದಾಳಿಯಿಂದಾಗಿ ಅಮೆರಿಕದ 13 ಮಿಲಿಟರಿ ನೆಲೆಗಳು ವಾಸಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಇದರಿಂದ ಅಮೆರಿಕಕ್ಕೆ ಅಂದಾಜು 2.9 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ.
ವೆಚ್ಚದ ಯುದ್ಧ: $30 ಸಾವಿರ ವರ್ಸಸ್ $40 ಲಕ್ಷ!
ಗಲ್ಫ್ ರಾಷ್ಟ್ರಗಳ ಮುಂದಿರುವ ಅತಿದೊಡ್ಡ ಸವಾಲೆಂದರೆ ಆರ್ಥಿಕತೆ. ಇರಾನ್‌ನ ಒಂದು ಡ್ರೋನ್ ಹೊಡೆದುರುಳಿಸಲು ಅಮೆರಿಕ ಸುಮಾರು 4 ಮಿಲಿಯನ್ ಡಾಲರ್ ಮೌಲ್ಯದ ಪೇಟ್ರಿಯಾಟ್ ಕ್ಷಿಪಣಿಗಳನ್ನು ಬಳಸುತ್ತಿದೆ. ಅಂದರೆ, ಶತ್ರುವಿನ ಅಗ್ಗದ ಅಸ್ತ್ರವನ್ನು ನಾಶಪಡಿಸಲು ಮಿತ್ರಪಡೆಗಳು ಭಾರಿ ಬೆಲೆ ತೆರುತ್ತಿವೆ. ಇದರ ಜೊತೆಗೆ ಎಫ್-16 ಯುದ್ಧ ವಿಮಾನಗಳನ್ನು ಆಕಾಶದಲ್ಲಿ ನಿರಂತರವಾಗಿ ಹಾರಾಟ ನಡೆಸಲು ಗಂಟೆಗೆ 25,000 ವೆಚ್ಚವಾಗುತ್ತಿದೆ. ಈ ಅಸಮಾನತೆಯೇ ಈಗ ಯುಕ್ರೇನ್‌ನತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.
ಯುಕ್ರೇನ್‌ನ ಸ್ಟಿಂಗ್ ಮತ್ತು ಬುಲೆಟ್ ಕಿಲೆರ್ಸ್
ರಷ್ಯಾ ವಿರುದ್ಧದ ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ನಿರೀಕ್ಷಿತ ನೆರವು ಸಿಗದಿದ್ದಾಗ ಯುಕ್ರೇನ್ ಸ್ವತಃ ಡ್ರೋನ್ ಕಿಲೆರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು. ಯುಕ್ರೇನ್ ತಯಾರಿಸಿದ ಸ್ಟಿಂಗ್ ಮತ್ತು ಬುಲೆಟ್ ಇಂಟರ್ಸೆಪ್ಟರ್‌ಗಳು ಈಗ ಜಗತ್ತಿನ ಗಮನ ಸೆಳೆದಿವೆ.
ಸ್ಟಿಂಗ್: ಇದು ಗಂಟೆಗೆ 315-340 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳನ್ನು ಹೊಂದಿರುವ ಇದು 10,000 ಅಡಿ ಎತ್ತರದಲ್ಲಿ ಹಾರುವ ಶಾಹೆದ್ ಡ್ರೋನ್‌ಗಳನ್ನು ನಿಖರವಾಗಿ ಹೊಡೆದುರುಳಿಸುತ್ತದೆ. ವಿಶೇಷವೆಂದರೆ, ಗುರಿ ಪತ್ತೆಯಾಗದಿದ್ದರೆ ಇದು ಮರಳಿ ತನ್ನ ನೆಲೆಗೆ ಬರುತ್ತದೆ.
ಬುಲೆಟ್: ಇದು 3D ಪ್ರಿಂಟೆಡ್ ತಂತ್ರಜ್ಞಾನದಿಂದ ಮಾಡಲ್ಪಟ್ಟಿದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ಶತ್ರು ಡ್ರೋನ್‌ಗಳನ್ನು ಪತ್ತೆ ಮಾಡುತ್ತದೆ.
ಫೆಬ್ರವರಿ ತಿಂಗಳೊಂದರಲ್ಲೇ ರಷ್ಯಾ ಉಡಾಯಿಸಿದ 5,000 ಡ್ರೋನ್‌ಗಳ ಪೈಕಿ ಶೇ.87ರಷ್ಟನ್ನು ಯುಕ್ರೇನ್ ಯಶಸ್ವಿಯಾಗಿ ನಾಶಪಡಿಸಿದೆ. ಈ ಅನುಭವವೇ ಈಗ ಗಲ್ಫ್ ರಾಷ್ಟ್ರಗಳಿಗೆ ಬೇಕಾಗಿದೆ.
ಜೆಲೆನ್ಸ್ಕಿಗೆ ರೆಡ್ ಕಾರ್ಪೆಟ್ ಸ್ವಾಗತ
ಕೆಲವೇ ವಾರಗಳ ಹಿಂದೆ ಜೆಲೆನ್ಸ್ಕಿ ಸಹಾಯ ಕೇಳುವ ಕೊನೆಯ ವ್ಯಕ್ತಿ ಎಂದು ಲೇವಡಿ ಮಾಡಿದ್ದ ಡೊನಾಲ್ಡ್ ಟ್ರಂಪ್, ಈಗ ಅನಿವಾರ್ಯವಾಗಿ ಯುಕ್ರೇನ್ ನೆರವನ್ನು ಒಪ್ಪಿಕೊಂಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ದೇಶಗಳಿಗೆ ಭೇಟಿ ನೀಡಿದಾಗ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಯುಕ್ರೇನ್ ತನ್ನ ಸ್ಟಿಂಗ್ ತಂತ್ರಜ್ಞಾನ ಮತ್ತು 200ಕ್ಕೂ ಹೆಚ್ಚು ಡ್ರೋನ್ ತಜ್ಞರನ್ನು ಗಲ್ಫ್‌ಗೆ ಕಳುಹಿಸಿಕೊಡಲಿದೆ. ಪ್ರತಿಯಾಗಿ ಯುಕ್ರೇನ್‌ಗೆ ರಷ್ಯಾ ವಿರುದ್ಧ ಹೋರಾಡಲು ಅತ್ಯಾಧುನಿಕ ರಕ್ಷಣಾ ಕ್ಷಿಪಣಿಗಳು ಸಿಗಲಿವೆ.
ತಂತ್ರಜ್ಞಾನದ ವ್ಯತ್ಯಾಸವೇನು..?
ಇರಾನ್‌ನ ಶಾಹೆದ್ ಡ್ರೋನ್‌ಗಳು ಕಾಮಿಕಾಜೆ ಮಾದರಿಯವು. ಅಂದರೆ ಅವು ಗುರಿಯನ್ನು ಅಪ್ಪಳಿಸಿ ತಾವೂ ಸ್ಫೋಟಗೊಳ್ಳುತ್ತವೆ. ಆದರೆ ಯುಕ್ರೇನ್‌ನ ಇಂಟರ್ಸೆಪ್ಟರ್‌ಗಳು ಎಫ್‌ಪಿವಿ (FPV) ಗ್ಲಾಸ್‌ಗಳನ್ನು ಧರಿಸಿದ ಆಪರೇಟರ್‌ಗಳ ಮೂಲಕ ನಿಯಂತ್ರಿಸಲ್ಪಡುತ್ತವೆ. ಇದು ಶತ್ರುವಿನ ಜ್ಯಾಮಿಂಗ್ ತಂತ್ರವನ್ನೂ ಮೀರಿ ಕೆಲಸ ಮಾಡುತ್ತದೆ.
ಈ ಹೊಸ ಒಪ್ಪಂದವು ಜಾಗತಿಕ ರಾಜಕೀಯದಲ್ಲಿ ಯುಕ್ರೇನ್‌ನ ಸ್ಥಾನಮಾನವನ್ನು ಎತ್ತರಿಸಿದೆ. ಕೇವಲ ಸಹಾಯ ಪಡೆಯುವ ದೇಶವಾಗಿದ್ದ ಯುಕ್ರೇನ್, ಇಂದು ವಿಶ್ವದ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದ ರಫ್ತುದಾರನಾಗಿ ಹೊರಹೊಮ್ಮಿದೆ,(ಏಜೆನ್ಸೀಸ್).