ಶಾಂತಿಯ ಕೊನೆಯ ಹಾದಿಯೂ ಬಂದ್! ಅಮೆರಿಕದ ಮುಖಕ್ಕೆ ಹೊಡೆದಂತೆ ಮಾತುಕತೆ ನಿಲ್ಲಿಸಿದ ಇರಾನ್!
ಟೆಹ್ರಾನ್: ಪಶ್ಚಿಮ ಏಷ್ಯಾದ ರಣಾಂಗಣದಲ್ಲಿ ಪರಿಸ್ಥಿತಿ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಸರ್ವನಾಶವಾಗಬಹುದು ಎಂದು ನೀಡಿದ ಭಯಾನಕ ಎಚ್ಚರಿಕೆಯ ಬೆನ್ನಲ್ಲೇ, ಇರಾನ್(No Direct Talks with US) ಅಮೆರಿಕದೊಂದಿಗಿನ ಎಲ್ಲಾ ನೇರ ರಾಜತಾಂತ್ರಿಕ ಸಂಪರ್ಕಗಳನ್ನು ಕಡಿದುಕೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಇರಾನ್ ಈ ನಿರ್ಧಾರದ ಮೂಲಕ ಅಮೆರಿಕದ ಆಕ್ರಮಣಕಾರಿ ಧೋರಣೆಗೆ ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ.
ನೇರ ಮಾತುಕತೆ ಬಂದ್: ಪರೋಕ್ಷ ಸಂಧಾನವಷ್ಟೇ ಬಾಕಿ!
ಟ್ರಂಪ್ ಅವರ ಡೆಡ್‌ಲೈನ್ ಮುಗಿಯಲು ಕೇವಲ ಕೆಲವೇ ಗಂಟೆಗಳು ಬಾಕಿ ಇರುವಾಗ ಇರಾನ್ ತೆಗೆದುಕೊಂಡ ಈ ನಿರ್ಧಾರವು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯದ ಅಧಿಕಾರಿಗಳ ಪ್ರಕಾರ, ಇರಾನ್ ಅಮೆರಿಕದೊಂದಿಗೆ ನೇರವಾಗಿ ಮಾತನಾಡುವುದನ್ನು ನಿಲ್ಲಿಸಿದೆ. ಆದರೆ, ಕದನ ವಿರಾಮಕ್ಕಾಗಿ ಪ್ರಯತ್ನಿಸುತ್ತಿರುವ ಮಧ್ಯಸ್ಥಗಾರರ ಮೂಲಕ ಪರೋಕ್ಷ ಮಾತುಕತೆಗಳು ಇನ್ನು ಮುಂದುವರಿದಿವೆ. ಟ್ರಂಪ್ ಅವರ ಉಗ್ರ ರೂಪದ ಎಚ್ಚರಿಕೆಗೆ ಟೆಹ್ರಾನ್ ನೀಡಿದ ಮೊದಲ ದೊಡ್ಡ ಡಿಪ್ಲೊಮ್ಯಾಟಿಕ್ ಏಟು ಇದಾಗಿದೆ.
ಟ್ರಂಪ್ ನೀಡಿದ ಆ ಅಂತಿಮ ಎಚ್ಚರಿಕೆ ಏನು?
ಡೊನಾಲ್ಡ್ ಟ್ರಂಪ್ ಅವರು ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳನ್ನು ಬಳಸಿದ್ದರು. ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಇರಾನ್‌ನ ಇಡೀ ನಾಗರಿಕತೆಯೇ ಇಂದು ರಾತ್ರಿ ಅಂತ್ಯವಾಗಲಿದೆ. ಅದು ಮತ್ತೆಂದೂ ಮರಳಿ ಬರುವುದಿಲ್ಲ ಎಂದು ಎಚ್ಚರಿಸಿದ್ದರು. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಗುರಿಯಾಗಿಸಿಕೊಂಡು ಬೃಹತ್ ಬಾಂಬ್ ದಾಳಿ ನಡೆಸುವ ಸಂಚನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ. ಇದು ವಿಶ್ವ ಇತಿಹಾಸದ ಅತ್ಯಂತ ಪ್ರಮುಖ ತಿರುವು ಎಂದು ಬಣ್ಣಿಸಿದ್ದಾರೆ.
ಐಆರ್‌ಜಿಸಿ ಪ್ರತಿ-ಎಚ್ಚರಿಕೆ: ನಮ್ಮ ಶಕ್ತಿಯನ್ನು ಅರಿಯಿರಿ
ಇರಾನ್‌ನ ಕ್ರಾಂತಿಕಾರಿ ಸೈನ್ಯ (IRGC) ಅಮೆರಿಕದ ಈ ಬೆದರಿಕೆಗೆ ಮಣಿಯುವ ಸೂಚನೆ ನೀಡಿಲ್ಲ. ಒಂದು ವೇಳೆ ಅಮೆರಿಕವು ನಮ್ಮ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ನಾವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ತೈಲ ಮತ್ತು ಅನಿಲ ಕೇಂದ್ರಗಳ ಮೇಲೆ ಭೀಕರ ದಾಳಿ ನಡೆಸುತ್ತೇವೆ ಎಂದು ಐಆರ್‌ಜಿಸಿ ಎಚ್ಚರಿಸಿದೆ. ಅಮೆರಿಕದ ನಾಯಕತ್ವವು ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕಡೆಗಣಿಸುತ್ತಿದೆ ಎಂದು ಹೇಳಿರುವ ಐಆರ್‌ಜಿಸಿ, ಈ ಯುದ್ಧವು ದೀರ್ಘಾವಧಿಯ ಪರಿಣಾಮಗಳನ್ನು ಬೀರಲಿದೆ ಎಂದು ಎಚ್ಚರಿಸಿದೆ.
ಖಾರ್ಗ್ ದ್ವೀಪದ ಮೇಲೆ ದಾಳಿಯ ನೆರಳು
ಈಗಾಗಲೇ ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪದ ಬಳಿ ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಮತ್ತು ಯುದ್ಧ ವಿಮಾನಗಳು ಹಾರಾಟ ನಡೆಸಿರುವ ವರದಿಗಳಿವೆ. ಆಪರೇಷನ್ ಎಪಿಕ್ ಫ್ಯೂರಿ ಭಾಗವಾಗಿ ಅಮೆರಿಕ ತನ್ನ ವಾಯುಪಡೆಯನ್ನು ಸನ್ನದ್ಧಗೊಳಿಸಿದೆ. ಇರಾನ್‌ನ ಸಾರಿಗೆ ಮತ್ತು ಸಂವಹನ ವ್ಯವಸ್ಥೆಯನ್ನು ಕತ್ತರಿಸಲು ಸೇತುವೆಗಳ ಮೇಲೆ ಈಗಾಗಲೇ ಕೆಲವು ಕ್ಷಿಪಣಿ ದಾಳಿಗಳು ನಡೆದಿವೆ ಎನ್ನಲಾಗುತ್ತಿದೆ.
ಸಂಧಾನದ ಹಾದಿ ಮುಚ್ಚಿದೆಯೇ..?
ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ದೇಶಗಳು ಸಂಧಾನಕ್ಕೆ ಪ್ರಯತ್ನಿಸುತ್ತಿದ್ದರೂ, ಟ್ರಂಪ್ ಅವರ ಸರ್ವನಾಶದ ಎಚ್ಚರಿಕೆಯು ಇರಾನ್ ಅನ್ನು ಕೆರಳಿಸಿದೆ. ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರು 1.4 ಕೋಟಿ ಜನರು ಬಲಿದಾನಕ್ಕೆ ಸಿದ್ಧರಿದ್ದಾರೆ ಎಂದು ಹೇಳುವ ಮೂಲಕ ಯುದ್ಧಕ್ಕೆ ತಯಾರಾಗಿರುವ ಸಂದೇಶ ನೀಡಿದ್ದಾರೆ. ನೇರ ಮಾತುಕತೆ ಸ್ಥಗಿತಗೊಂಡಿರುವುದು ಯುದ್ಧವನ್ನು ತಡೆಯುವ ಕೊನೆಯ ಅವಕಾಶಗಳೂ ಕೈತಪ್ಪುತ್ತಿವೆ ಎಂಬುದನ್ನು ಸೂಚಿಸುತ್ತಿದೆ.
ವಿಶ್ವದ ಕಣ್ಣು ಡೆಡ್‌ಲೈನ್ ಮೇಲೆ!
ವಾಷಿಂಗ್‌ಟನ್ ಕಾಲಮಾನ ರಾತ್ರಿ 8 ಗಂಟೆ ಇಡೀ ಜಗತ್ತಿಗೆ ನಿರ್ಣಾಯಕವಾಗಲಿದೆ. ಇರಾನ್ ತನ್ನ ಪಟ್ಟು ಸಡಿಲಿಸುತ್ತದೆಯೇ ಅಥವಾ ಟ್ರಂಪ್ ಹೇಳಿದಂತೆ ಇಂದು ರಾತ್ರಿ ಒಂದು ಪುರಾತನ ನಾಗರಿಕತೆ ಇತಿಹಾಸದ ಪುಟ ಸೇರುತ್ತದೆಯೇ ಎಂಬ ಭಯಾನಕ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ,(ಏಜೆನ್ಸೀಸ್).