ಮಿನ್ನೇಸೋಟದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಕನ್ನಡಿಗರ ತಂಡ
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಿನ್ನೇಸೋಟದ ಸೇಂಟ್ ಪಾಲ್‌ನ ಐತಿಹಾಸಿಕ ಕ್ಯಾಪಿಟಲ್ ಬಿಲ್ಡಿಂಗ್ ಆವರಣದಲ್ಲಿ ಹಮ್ಮಿಕೊಂಡಿದ್ದ ಐಎಮ್ ಫೇಸ್ಟ್ 2026 ಸಂಗೀತ ಕನ್ನಡ ಕೂಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಎಸ್ ಕೆ ಕೆ ವತಿಯಿಂದ ಭಾರತದ ವಿವಿಧ ರಾಜ್ಯಗಳು, ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ದೃಷ್ಠಿಯಿಂದ ಐಎಮ್ಫೆಸ್ಟ್ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಅಲ್ಲಿಗೆ ಆಗಮಿಸಿದ ವಿವಿಧ ಸಮುದಾಯಗಳ ಜನರಿಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಕನ್ನಡ ಭಾಷೆ, ಪರಂಪರೆ ಮತ್ತು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದವರು ಕನ್ನಡದ ಸಂಸ್ಕೃತಿ ಮತ್ತು ಕರ್ನಾಟಕದ ವೈವಿಧ್ಯತೆಯ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಕನ್ನಡಿಗರನ್ನು ಒಂದೆಡೆ ಸೇರಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದನ್ನು ಚರ್ಚಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಸಂಗೀತ ಕನ್ನಡ ಕೂಟದ ಸದಸ್ಯರು, ಸ್ವಯಂಸೇವಕರು ಮತ್ತು ಕುಟುಂಬಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕನ್ನಡದ ಹಳದಿಕೆಂಪು ಬಾವುಟಗಳೊಂದಿಗೆ, ಭಾರತ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಭಾಗವಹಿಸಿದ ಖಓಓ ತಂಡವು ಎಲ್ಲರ ಗಮನ ಸೆಳೆಯಿತು. ದೇಶಭಕ್ತಿಯ ವಾತಾವರಣದಲ್ಲಿ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಕನ್ನಡದ ಧ್ವಜಗಳು ರಾರಾಜಿಸಿದ್ದು ವಿಶೇಷ ಮೆರುಗು ತಂದಿತು.
ಮಿನ್ನೇಸೋಟದ ವಿವಿಧ ಭಾಗಗಳಿಂದ ಆಗಮಿಸಿದ್ದ ಕನ್ನಡಿಗರು ಒಗ್ಗಟ್ಟಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಮುದಾಯದ ಏಕತೆ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದರು. ವಿಶೇಷವಾಗಿ ಮಕ್ಕಳು ಮತ್ತು ಯುವಕರು ಪರೇಡ್‌ನಲ್ಲಿ ಭಾಗವಹಿಸಿರುವುದು ಮುಂದಿನ ಪೀಳಿಗೆಯಲ್ಲಿಯೂ ನಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತಿತ್ತು.
ಅಮೆರಿಕದ ನೆಲದಲ್ಲಿ ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸುವ ಈ ವಿಶೇಷ ಸಂದರ್ಭದಲ್ಲಿ, ವೈವಿಧ್ಯತೆಯಲ್ಲಿ ಏಕತೆ ಎಂಬ ಭಾರತದ ಸಂದೇಶವನ್ನು ಸಾರುತ್ತಾ, ಕನ್ನಡದ ನಾಡುನುಡಿಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಸಂಗೀತ ಕನ್ನಡ ಕೂಟದ ಈ ಭಾಗವಹಿಸುವಿಕೆ ನಿಜಕ್ಕೂ ಸ್ಮರಣೀಯವಾಗಿತ್ತು.
ತಂಡದ ಸದಸ್ಯ ಗೌತಮ್ ಹಂಜಾಗಿಮಠ