ಸಾಂದರ್ಭಿಕ ಚಿತ್ರ  
ವಿದೇಶ

ಒಂದು ವಾರಕ್ಕೆ 1 ಗ್ರಾಂ... ಬದುಕು ಕಟ್ಟಿಕೊಳ್ಳಲು ಇಲ್ಲಿನ ಆಘ್ಫಾನಿಗರಿಗೆ ಕಾಣ್ತಿಲ್ಲ ಬೇರೆ ದಾರಿ!

ಪ್ರಮುಖ ಮುಖ್ಯಾಂಶಗಳು

  • ಚಿನ್ನಕ್ಕಾಗಿ ಬೇಟೆಯಾಡುತ್ತಿರುವ ಆಫ್ಘಾನಿಸ್ತಾನ ನಾಗರಿಕರು
  • ವಾರಕ್ಕೆ ಒಂದು ಗ್ರಾಂ ಸಿಕ್ಕರೆ ಅದೇ ಖುಷಿ
  • ಕುನಾರ್ ನದಿಯೇ ಇಲ್ಲಿನ ಜನರ ಜೀವಾಳ
Gold Hunt: ಪೂರ್ವ ಅಫ್ಘಾನಿಸ್ತಾನದಲ್ಲಿರುವ ಹಿಂದೂ ಕುಶ್ ಪರ್ವತ ಶ್ರೇಣಿ ಬಹಳ ಸುಂದರ ಮತ್ತು ಭವ್ಯವಾವಾಗಿದೆ. ಆದರೆ, ಆ ಪರ್ವತಗಳ ನೆರಳಿನಲ್ಲಿ ಬದುಕುತ್ತಿರುವ ಜನರ ಜೀವನ ಮಾತ್ರ ನಿಜಕ್ಕೂ ಹೇಳತೀರದು. ಆ ಮಟ್ಟಿಗಿನ ಕಷ್ಟಕರ ಬದುಕು ಇಲ್ಲಿನ ಜನರದ್ದಾಗಿದೆ.
ದೇಶದಲ್ಲಿ ದಶಕಗಳ ಕಾಲದ ಯುದ್ಧಗಳು ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ, ಉದ್ಯೋಗಾವಕಾಶಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಬೆಲೆ ಏರಿಕೆ, ಹಣದುಬ್ಬರ ಮತ್ತು ಕಡಿಮೆ ವೇತನದಿಂದಾಗಿ ಸಾಮಾನ್ಯ ಜನರು ತಮ್ಮ ಜೀವನವನ್ನು ಸರಿದೂಗಿಸಲು ತೀರ ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಸಮಯದಲ್ಲಿ, ಪ್ರಕೃತಿಯು ಗ್ರಾಮಸ್ಥರಿಗೆ ಉಡುಗೊರೆಯಾಗಿ ನೀಡಿರುವ ಕುನಾರ್ ನದಿ ಹಲವರಿಗೆ ಬದುಕಿನ ಭರವಸೆಯಾಗಿದೆ.
ನದಿಯ ದಡದಲ್ಲಿ ಕಂಡುಬರುವ ಸಣ್ಣ ಚಿನ್ನದ ಕಣಗಳು ಈಗ ನೂರಾರು ಕುಟುಂಬಗಳಿಗೆ ಜೀವನಾಡಿ ಆಗಿರುವುದು ಅಚ್ಚರಿಯ ಬೆಳವಣಿಗೆ. ಯಾವುದೇ ಆಧುನಿಕ ಯಂತ್ರೋಪಕರಣಗಳಿಲ್ಲದೆ, ಆವಿಷ್ಕಾರಗಳ ಅರಿವಿಲ್ಲದೆ, ಕೇವಲ ತಮ್ಮ ದೇಹದ ಶಕ್ತಿಯ ಮೇಲೆ ಮಾತ್ರ ಅವಲಂಬಿಸಿ ಮಾಡುತ್ತಿರುವ ಕೆಲಸ ಅವರ ದಿನನಿತ್ಯದ ಹಸಿವನ್ನು ನೀಗಿಸುತ್ತಿದೆ.
ಕುನಾರ್ ಪ್ರಾಂತ್ಯದ ಖಾರ್ವಾಲ್ ಗ್ರಾಮದಲ್ಲಿನ ಸದ್ಯದ ಪರಿಸ್ಥರಿತಿ ನಿಜಕ್ಕೂ ಉಸಿರುಕಟ್ಟುವಂತಿದೆ. ದೇಶದಲ್ಲಿ ಉದ್ಯೋಗ ಕೊರತೆ ಹೆಚ್ಚಾಗಿರುವುದರಿಂದ ಮುಂದೇನು ಮಾಡಬೇಕೆಂದು ಇಲ್ಲಿನ ಜನರಿಗೆ ತಿಳಿಯುತ್ತಿಲ್ಲ, ಮಕ್ಕಳಿರುವ ಕುಟುಂಬ, ಹಸಿವಿನ ಸಂಕಟ, ಇದೆಲ್ಲವನ್ನೂ ನೀಗಿಸಲು ಏನು ಮಾಡೋದು ಎಂದು ಹೆಣಗಾಡುತ್ತಿದ್ದ ಒಂದಷ್ಟು ಜನರಿಗೆ, ಈಗ ಕುನಾರ್​ ನದಿಯೇ ಜೀವಾಳವಾಗಿ ಮಾರ್ಪಟ್ಟಿದೆ.
ಇಲ್ಲಿ ಕಂಡುಬರುವ ಚಿನ್ನದ ಗಟ್ಟಿಗಳು ಗೋಧಿಯ ಕಾಳಿಗಿಂತ ಚಿಕ್ಕದಾಗಿದೆ. ಅವುಗಳನ್ನು ಸಾಕಷ್ಟು ಜನಗಳ ಪೈಪೋಟಿಯ ನಡುವೆ ಸಂಗ್ರಹಿಸುವುದು ಒಂದು ದೊಡ್ಡ ಸಾಹಸವಾಗಿದೆ. ನದಿಯ ಸಲಿಕೆಗಳಿಂದ ಮಣ್ಣನ್ನು ಅಗೆದು, ಶೋಧಿಸಿ, ನದಿ ನೀರಿನಿಂದ ಪದೇ ಪದೇ ತೊಳೆದರೂ, ಹಲವೊಮ್ಮೆ ಆ ಹೊಳೆಯುವ ಕಣಗಳು ಸಿಗುವುದಿಲ್ಲ. ಕೆಲವರು ಬಂಡೆಗಳನ್ನು ಒಡೆದು ಚೀಲಗಳಲ್ಲಿ ಮಣ್ಣನ್ನು ಹೊತ್ತುಕೊಂಡು ಶೋಧಿಸುವ ಮೂಲಕ ಚಿನ್ನವನ್ನು ಸಂಗ್ರಹಿಸುತ್ತಾರೆ.
35 ವರ್ಷದ ಗುಲ್ ಅಹ್ಮದ್ ಜಾನ್ ಹೇಳಿಕೆ ಪ್ರಕಾರ, ಒಂದು ವಾರ ನಿರಂತರವಾಗಿ ಶ್ರಮಿಸಿದ ಬಳಿಕ, ಸುಮಾರು ಒಂದು ಗ್ರಾಂ ಚಿನ್ನವನ್ನು ನಾವು ನೋಡಬಹುದು. ಇದು ಸುಮಾರು 8,000 ಅಫ್ಘಾನಿಗಳು (ಸುಮಾರು 125 ಡಾಲರ್​) ಮೌಲ್ಯದ್ದಾಗಿದೆ. ದೇಶದ ಇತರ ಉದ್ಯೋಗಗಳಿಗೆ ಹೋಲಿಸಿದರೆ ಇದು ಉತ್ತಮ ಆದಾಯವಾಗಿದೆ. ಆದರೆ, ಎಲ್ಲ ಸಮಯದಲ್ಲೂ ಅಷ್ಟೇ ಪ್ರಮಾಣದಲ್ಲಿ ಸಿಗುವುದಿಲ್ಲ ಎನ್ನುತ್ತಾರೆ,(ಏಜೆನ್ಸೀಸ್).