ಮಕ್ಕಳಿರಲವ್ವ ಮನೆ ತುಂಬಾ! 
ವಿದೇಶ

ಮಕ್ಕಳಿರಲವ್ವ ಮನೆ ತುಂಬಾ!

ಅಭಿವೃದ್ಧಿಯ ವಿಷಯದಲ್ಲಿ ಅಮೆರಿಕವನ್ನು ಹಿಂದಿಕ್ಕಲು ಸತತ ಪ್ರಯತ್ನ ಮಾಡುತ್ತಿರುವ ಚೀನಾ ದುಡಿಯುವ ಕೈಗಳಿಲ್ಲದೆ ಚಿಂತಾಕ್ರಾಂತವಾಗಿದೆ. 1949ರಿಂದ ಇಲ್ಲಿಯವರೆಗಿನ ಲೆಕ್ಕಾಚಾರದಲ್ಲಿ ಚೀನಾದಲ್ಲಿ ಜನನ ಪ್ರಮಾಣವು 2025ರಲ್ಲಿ ತೀವ್ರವಾಗಿ ಕುಸಿದಿದೆ. ಸದ್ಯ ಈಗ ಪ್ರತಿ ಸಾವಿರ ಜನರಿಗೆ ಜನನ ಪ್ರಮಾಣ ಶೇಕಡ 5.63ರಷ್ಟಿದೆ. ಹಾಗಾಗಿಯೇ, ಮಕ್ಕಳಿಗೆ ಜನ್ಮ ನೀಡುವುದು ‘ದೇಶಭಕ್ತಿಯ ಶ್ರೇಷ್ಠ ಕಾರ್ಯ’ ಎಂದು ಕಮ್ಯುನಿಸ್ಟ್ ಸರ್ಕಾರ ಘೋಷಿಸಿದೆ! ಕುಟುಂಬ ಹೊಂದುವ ಮಹತ್ವವನ್ನು ಮನಗಾಣಿಸಲು ನವವಿವಾಹಿತ ಜೋಡಿಗಳಿಗಾಗಿಯೇ ದೇಶಾದ್ಯಂತ ಜಾಗೃತಿ ಅಭಿಯಾನವನ್ನೂ ನಡೆಸಲಾಗಿದೆ, ಆದರೂ, ಪರಿಸ್ಥಿತಿ ಬದಲಾಗಿಲ್ಲ. ಸತತ ನಾಲ್ಕನೇ ವರ್ಷ ಜನನಕ್ಕಿಂತ ಮೃತ್ಯು ಪ್ರಮಾಣ ಹೆಚ್ಚಿದೆ. ಜನನ ದರದಲ್ಲಿ ಕುಸಿತ ಮುಂದುವರಿದಿದೆ. ವೃದ್ಧರ ಸಂಖ್ಯೆ ಹೆಚ್ಚಿದೆ. 2024ರಲ್ಲಿ 95 ಲಕ್ಷ ಶಿಶುಗಳ ಜನನವಾಗಿತ್ತು. ಆದರೆ, 2025ರಲ್ಲಿ ಈ ಸಂಖ್ಯೆ 79 ಲಕ್ಷಕ್ಕೆ ಇಳಿಕೆಯಾಗಿದೆ. 2025ರಲ್ಲಿ ಮೃತಪಟ್ಟವರ ಸಂಖ್ಯೆ 1.13 ಕೋಟಿಯಾಗಿದ್ದು, ಜನನಕ್ಕಿಂತ ಮರಣ ಪ್ರಮಾಣ ಅಧಿಕವಾಗಿರುವುದರಿಂದ ಜನಸಂಖ್ಯೆ ಅಸಮತೋಲನ ಸೃಷ್ಟಿಯಾಗಿದೆ.
ಅಂದರೆ, ಚೀನಾದ ಜನಸಂಖ್ಯೆ ಒಂದೇ ವರ್ಷದಲ್ಲಿ 30 ಲಕ್ಷದಷ್ಟು ಕಡಿಮೆಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ರಾಷ್ಟ್ರವಾಗಿದ್ದ ಚೀನಾ, ಜನಸಂಖ್ಯೆಯನ್ನು ನಿಯಂತ್ರಿಸಲು ‘ಒಂದೇ ಮಗು’ ನೀತಿಯನ್ನು ದಶಕಗಳ ಕಾಲ ಅನುಷ್ಠಾನಿಸಿತು. ಇದು ಚೀನಾದ ಕೌಟುಂಬಿಕ ವ್ಯವಸ್ಥೆಯ ಮೂಲಭೂತ ಸಂರಚನೆ ಹಾಗೂ ಚಿಂತನೆಯನ್ನೇ ಬದಲಿಸಿಬಿಟ್ಟಿತು. ಇದರ ವ್ಯತಿರಿಕ್ತ ಪರಿಣಾಮಗಳು ಅರಿವಾಗುವಷ್ಟರ ಹೊತ್ತಿಗೆ ತುಂಬ ತಡವಾಗಿ ಹೋಗಿತ್ತು. 2021ರಿಂದ ಮೂರು ಮಕ್ಕಳು ಹೊಂದಲು ಅವಕಾಶ ಕಲ್ಪಿಸಿದ್ದರೂ, ಪರಿಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ದುಡಿಯುವ ವರ್ಗದ ಪ್ರಮಾಣ ಕುಸಿದಿದ್ದು, ಆರ್ಥಿಕ ಸಂಕಷ್ಟದ ಕಾಮೋಡ ಕವಿದಿದೆ. ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಸವಾಲುಗಳನ್ನು ಎದುರಿಸಲಿದೆ. ಜಪಾನ್, ದಕ್ಷಿಣ ಕೊರಿಯಾ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜನನ ದರ ಕುಸಿಯುತ್ತಿರುವುದು ಹೌದಾದರೂ, ಚೀನಾದ ಸ್ಥಿತಿ ಗಂಭೀರವಾಗಿದೆ.
- ಚೀನಾದ ಒಟ್ಟು ಜನಸಂಖ್ಯೆಯ ಶೇಕಡ 23ರಷ್ಟು ಜನರು 60 ವರ್ಷ ಮೇಲ್ಪಟ್ಟ ವೃದ್ಧರೇ ಆಗಿದ್ದಾರೆ.
- 2035ರ ಹೊತ್ತಿಗೆ 60 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದವರ ಸಂಖ್ಯೆ 40 ಕೋಟಿಗೆ ತಲುಪಲಿದೆ.
- ವಿಶ್ವಸಂಸ್ಥೆ ವರದಿಯ ಪ್ರಕಾರ 2050ರ ಹೊತ್ತಿಗೆ ಚೀನಾದ ಜನಸಂಖ್ಯೆ 130 ಕೋಟಿಗೆ ಕುಸಿಯಲಿದೆ (ಪ್ರಸ್ತುತ ಜನಸಂಖ್ಯೆ 141 ಕೋಟಿ). ಮತ್ತು ಈ ಪೈಕಿ ಶೇಕಡ 40ರಷ್ಟು ನಾಗರಿಕರು 60 ವರ್ಷ ಮೇಲ್ಪಟ್ಟವರು ಇರಲಿದ್ದಾರೆ.

ತಜ್ಞರು ಏನಂತಾರೆ?

ಚೀನಾದ ವಿವಾಹ ಸಂಸ್ಕೃತಿ ಮತ್ತು ಕೌಟುಂಬಿಕ ವ್ಯವಸ್ಥೆಯೇ ಬದಲಾಗಿ ಹೋಗಿದೆ. ಹಾಗಾಗಿ, ಜನನ ಪ್ರಮಾಣ ದರ ಹೆಚ್ಚಿಸುವ ಪ್ರಯತ್ನಗಳು ಶೀಘ್ರದಲ್ಲೇ ಅಥವಾ ಕೆಲ ವರ್ಷಗಳಲ್ಲೇ ಪರಿಣಾಮ ನೀಡುವ ಸಾಧ್ಯತೆ ಇಲ್ಲ. ಯುವಕ-ಯುವತಿಯರು ಒಂದೆಡೆ ಅರ್ಥಿಕ ಸಂಕಷ್ಟ ಮತ್ತೊಂದೆಡೆ ಕಾರ್ಯದೊತ್ತಡ, ಉದ್ಯೋಗ ಅಸ್ಥಿರತೆ ಅನುಭವಿಸುತ್ತಿದ್ದಾರೆ. ಮಕ್ಕಳ ಪೋಷಣೆ ತುಂಬ ವೆಚ್ಚದಾಯಕ ಎಂಬ ಸಂಗತಿಯನ್ನು ಯುವ ಪಾಲಕರು ಗಾಢವಾಗಿ ನಂಬಿದ್ದಾರೆ, ಇದು ವಾಸ್ತವ ಕೂಡ ಹೌದು. ಗರ್ಭನಿರೋಧಕ ಮಾತ್ರೆಗಳ ಮೇಲೆ ತೆರಿಗೆ ಹೆಚ್ಚಿಸುವಂಥ ಅಪ್ರಾಯೋಗಿಕ ಕ್ರಮಗಳ ಬದಲು ಸರ್ಕಾರ ಯುವಸಮೂಹದ ಮಾನಸಿಕತೆ ಬದಲಿಸಲು ಒತ್ತು ನೀಡಬೇಕು. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಾಳಜಿಯನ್ನು ಸರ್ಕಾರ ವಹಿಸುವುದಾಗಿ ಹೇಳಿ, ಆ ಕುರಿತಂತೆ ಸೂಕ್ತವಾದ ಯೋಜನೆ ರೂಪಿಸಿದರೆ ಪರಿಸ್ಥಿತಿ ಬದಲಾಗಬಹುದು.

ಕಾರಣಗಳು

1. ಸರ್ಕಾರದ ನಿರಂತರ ಪ್ರಯತ್ನಗಳ ನಂತರವೂ ಜನನ ದರ ಏರಿಕೆಯಾ ಗುತ್ತಿಲ್ಲ ಏಕೆ ಎಂಬ ಪ್ರಶ್ನೆ ತಜ್ಞರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ.
2. ಸರ್ಕಾರ ಹಿಂದೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವವರಿಗೆ ಭಾರಿ ನಿರ್ಬಂಧವನ್ನು ವಿಧಿಸಿತ್ತು. 2015ರಲ್ಲಿ ಈ ನಿರ್ಧಾರ ಬದಲಿಸಿ ಎರಡು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಿತು. ಮತ್ತು ಮೂರು ಮಕ್ಕಳನ್ನು ಹೊಂದಲು 2021ರಲ್ಲಿ ಅವಕಾಶ ಕಲ್ಪಿಸಿದ್ದರೂ, ನವದಂಪತಿ ಒಂದೇ ಮಗುವನ್ನು ಹೊಂದುವುದು ಕ್ಷೇಮಕರ ಎಂಬ ಭಾವನೆಯಲ್ಲಿದ್ದಾರೆ.
3. ಚೀನಾದಲ್ಲಿ ನಿರುದ್ಯೋಗ ಪ್ರಮಾಣ ಏರುತ್ತಲೇ ಇದ್ದು, ಉದ್ಯೋಗ ಕ್ಷೇತ್ರದಲ್ಲಿ ಅಸ್ಥಿರತೆ ಇದೆ. ಇದರಿಂದ ಕುಟುಂಬ ಯೋಜನೆ ದೃಷ್ಟಿಯಿಂದ ನವದಂಪತಿ ತುಂಬ ಲೆಕ್ಕಾಚಾರ ಮಾಡುತ್ತಿದ್ದು, ಉದ್ಯೋಗ ಸ್ಥಿರತೆಯೇ ಇಲ್ಲದಿರುವಾಗ ಹೆಚ್ಚು ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ.
4. ಬೆಲೆಯೇರಿಕೆ ಸಾಮಾನ್ಯ ಜನರ ಜೀವನವನ್ನು ದುಸ್ತರವಾಗಿಸಿದೆ. ಇದು ಕೌಟುಂಬಿಕ ಬಜೆಟ್​ನ್ನೇ ತಲೆಕೆಳಗು ಮಾಡಿದ್ದು, ಆರ್ಥಿಕ ಸಂಕಷ್ಟವನ್ನು ಹೆಚ್ಚಿಸಿದೆ. ಹೆಚ್ಚು ಮಕ್ಕಳನ್ನು ಹೆರುವ ನಿರ್ಧಾರದಿಂದ ಹಿಂದೆ ಸರಿಯಲು ಇದು ಕೂಡ ಪ್ರಮುಖ ಕಾರಣ.
5. ಆರ್ಥಿಕ ಸಂಕಷ್ಟ, ನಿರುದ್ಯೋಗದ ಕಾರಣ ಯುವಕ-ಯುವತಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದು, ಒಂಟಿಯಾಗಿ ಅಥವಾ ಲಿವ್ ಇನ್​ನಲ್ಲಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಮದುವೆ ಸಂಸ್ಕೃತಿಗೆ ಧಕ್ಕೆಯಾಗಿದೆ.

ಅಧಿಕಾರಿಗಳಿಗೆ ಟಾಸ್ಕ್ ನೀಡಿದ ಜಿನ್​ಪಿಂಗ್

ಜನನ ದರ ವೃದ್ಧಿಗೊಳಿಸಲು ಅಧ್ಯಕ್ಷ ಷಿ ಜಿನ್​ಪಿಂಗ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ, ಪ್ರಯೋಜನವಾಗಿಲ್ಲ. ಹಾಗಾಗಿ, ಈಗ ಅಧಿಕಾರಿಗಳಿಗೆ ಟಾಸ್ಕ್ ನೀಡಿರುವ ಜಿನ್​ಪಿಂಗ್ ವಿವಾಹ ಸಂಸ್ಕೃತಿ ಉತ್ತೇಜಿಸಲು ಹಾಗೂ ಜನನ ಪ್ರಮಾಣದರ ಹೆಚ್ಚಿಸಲು ಪೂರಕವಾಗುವಂಥ ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ಸರ್ಕಾರ ಆರ್ಥಿಕ ಸಹಾಯ ಸೇರಿದಂತೆ ಎಲ್ಲ ಬಗೆಯ ನೆರವು ನೀಡಲಿದೆ ಎಂದಿದ್ದಾರೆ. ಆದರೆ, ಅಧಿಕಾರಿಗಳು ಅಪ್ರಾಯೋಗಿಕ ಮತ್ತು ಪ್ರೋತ್ಸಾಹವಲ್ಲದ ಯೋಜನೆಗಳನ್ನು ರೂಪಿಸಿದ್ದು, ಅದು ಯುವಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಜನವರಿ 1ರಿಂದ ಗರ್ಭನಿರೋಧಕ ಮಾತ್ರೆ ಮತ್ತು ಕಾಂಡೋಮ್ ಮೇಲೆ 13% ಸುಂಕ ಹೇರಲಾಗಿದೆ. ‘ಮಕ್ಕಳ ಪೋಷಣೆ ಹೆಚ್ಚು ವೆಚ್ಚದಾಯಕವಾಗುತ್ತಿರುವ ದಿನಗಳಲ್ಲಿ ಹೆಚ್ಚು ಮಕ್ಕಳನ್ನು ಹೊಂದುವುದು ಹೇಗೆ? ಶೈಕ್ಷಣಿಕ, ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ಹೇಗೆ? ಎಂಬ ಯುವಸಮೂಹದ ಪ್ರಶ್ನೆಗೆ ಸರ್ಕಾರದ ಬಳಿ ನಿಖರ ಉತ್ತರವಿಲ್ಲ. ಸರ್ಕಾರಿ ಸೇವೆ ಮತ್ತು ಖಾಸಗಿ ರಂಗದಲ್ಲೂ ನಿವೃತ್ತಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಆ ಜಾಗಕ್ಕೆ ಕೆಲಸ ಮಾಡುವವರ ಕೊರತೆ ಇದೆ. ಇದೇ ಸ್ಥಿತಿ ಮುಂದುವರಿದರೆ 2035ರ ಹೊತ್ತಿಗೆ ಚೀನಾ ‘ವೃದ್ಧ ರಾಷ್ಟ್ರ’ವಾಗಲಿದೆ ಮತ್ತು ತನ್ನ ಅಗತ್ಯಗಳಿಗೆ ಹೊರರಾಷ್ಟ್ರಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ತಜ್ಞರು.

ಹೆಚ್ಚು ಮಕ್ಕಳಿರುವವರಿಗೆ ಹಲವು ಸೌಲಭ್ಯ

ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದೆಯಾದರೂ, ಜನರು ಹೆಚ್ಚು ಮಕ್ಕಳನ್ನು ಹೊಂದಲು ಆಸಕ್ತಿ ತೋರುತ್ತಿಲ್ಲ. ?ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗೆ ತೆರಿಗೆ ವಿನಾಯಿತಿ. ?ಮೂರು ವರ್ಷದೊಳಗಿನ ಮಗು ಅಥವಾ ಮಕ್ಕಳು ಹೊಂದಿರುವ ದಂಪತಿಗೆ ವಾರ್ಷಿಕವಾಗಿ 500 ಡಾಲರ್ ಆರ್ಥಿಕ ನೆರವು. ?ಸರ್ಕಾರದಿಂದಲೇ ರಿಯಾಯಿತಿ ದರದಲ್ಲಿ ಮನೆ. ?ಮದುವೆ ಮಾಡಿಸುವ ಮಧ್ಯವರ್ತಿಗೆ ಹೇರಲಾಗುತ್ತಿದ್ದ ತೆರಿಗೆ ಮೇಲೆ ಕಡಿತ. ?ಮಕ್ಕಳನ್ನು ನೋಡಿಕೊಳ್ಳುವ ಆರೈಕೆ ಕೇಂದ್ರಗಳ ಮೇಲಿನ ತೆರಿಗೆ ಕಡಿತ. ?ಮದುವೆ ನೋಂದಣಿ ಪ್ರಕ್ರಿಯೆಯನ್ನು ಸರಳ ಹಾಗೂ ಕ್ಷಿಪ್ರಗೊಳಿಸಲಾಗಿದೆ. ?ಉಚಿತ ಶಿಕ್ಷಣ ಒದಗಿಸುವ ಪ್ರಿ-ಸ್ಕೂಲ್​ಗಳನ್ನು ಸರ್ಕಾರದಿಂದಲೇ ಆರಂಭಿಸಲಾಗುತ್ತಿದೆ. ?ಹೆರಿಗೆ ರಜೆಯ ಅವಧಿಯನ್ನು ಹೆಚ್ಚಿಸಲಾಗಿದೆ.

ಹಲವು ರಾಷ್ಟ್ರಗಳಲ್ಲಿ ಇದೇ ಸ್ಥಿತಿ

ವಿಶ್ವದ ಹಲವು ರಾಷ್ಟ್ರಗಳು ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ಅನುಸರಿಸಿದ ಕಠಿಣ ಕ್ರಮಗಳಿಂದ ಪ್ರಸ್ತುತ ಜನಸಂಖ್ಯೆಯ ಅಸಮತೋಲನ ಎದುರಿಸುತ್ತಿವೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಫಲವತ್ತತೆ ದರ ಕುಸಿದಿರುವುದು, ಜನನ ಪ್ರಮಾಣ ಇಳಿಕೆಗೆ ಕಾರಣವಾಗಿದೆ. ತೈವಾನ್, ದಕ್ಷಿಣ ಕೊರಿಯಾ, ಜಪಾನ್, ಹಾಂಗ್​ಕಾಂಗ್, ಮಕಾವು, ಸಿಂಗಾಪುರ, ಇಟಲಿ, ಸ್ಪೇನ್, ಗ್ರೀಸ್, ಪೋಲೆಂಡ್, ಪೋರ್ಚುಗಲ್, ಲಿಥುವೇನಿಯಾ, ಕೆನಡಾ, ಆಸ್ಟ್ರೇಲಿಯಾ, ಲ್ಯಾಟಿನ್ ಅಮೆರಿಕ, ಬ್ರೆಜಿಲ್, ಮೆಕ್ಸಿಕೋದಲ್ಲಿ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಧ್ಯಯನ ವರದಿಗಳ ಪ್ರಕಾರ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿವೆ.