ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಪ್ರಜೆಗಳಿಂದ ಸಂಘಟಿತ ಭಿಕ್ಷಾಟನೆ ನಡೆಯುತ್ತಿರುವ ಬಗ್ಗೆ ಪಾಕ್ಗೆ ಸೌದಿ ಸರ್ಕಾರ ಎಚ್ಚರಿಕೆ ನೀಡಿದ್ದು, ಸಾವಿರಾರು ಭಿಕ್ಷುಕರನ್ನು ಗಡಿಪಾರು ಮಾಡುತ್ತಿದೆ. ಪಾಕಿಸ್ತಾನದಿಂದ ಪ್ರಯಾಣಿಸುವ ಅನೇಕ ಜನರು ಭಿಕ್ಷಾಟನೆ ಮತ್ತಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಪಶ್ಚಿಮ ಏಷ್ಯಾದ ಅನೇಕ ದೇಶಗಳು ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ಅವುಗಳು ವೀಸಾ ನಿಯಮಗಳನ್ನು ಬಿಗಿಗೊಳಿಸಿ ಪಾಕ್ ಪ್ರವಾಸಿಗರ ತಪಾಸಣೆಯನ್ನು ಹೆಚ್ಚಿಸಿವೆ. ಸಂಘಟಿತ ಭಿಕ್ಷಾಟನೆಯಲ್ಲಿ ಒಳಗೊಂಡ ಸುಮಾರು 56,000 ಪಾಕ್ ಪ್ರಜೆಗಳನ್ನು ಸೌದಿ ಅರೇಬಿಯಾ ಗಡಿಪಾರು ಮಾಡಿದೆ. ಯುಎಇಯಲ್ಲೂ ಪಾಕ್ ಭಿಕ್ಷುಕರ ಹಾವಳಿ ಮಿತಿ ಮೀರಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ, ಹಲವು ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಕಂಡಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರಿ ಮುಜುಗರಕ್ಕೆ ಒಳಗಾಗಿದೆ. ಸೌದಿ ಅರೇಬಿಯಾ ತನ್ನಲ್ಲಿದ್ದ ಪಾಕ್ ಮೂಲದ 56 ಸಾವಿರ ಭಿಕ್ಷುಕರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿದೆ. ಆದರೆ, ಈ ಸಮಸ್ಯೆ ಬರೀ ಸೌದಿಗೆ ಸೀಮಿತವಾಗಿಲ್ಲ. ಗಲ್ಪ್ ರಾಷ್ಟ್ರಗಳಲ್ಲಿನ ಶೇಕಡ 90ರಷ್ಟು ಭಿಕ್ಷುಕರು ಪಾಕಿಸ್ತಾನಿಯರೇ. ಈಗ ಎಚ್ಚೆತ್ತುಕೊಂಡಿರುವ ಹಲವು ದೇಶಗಳು ಪಾಕ್ ಭಿಕ್ಷುಕರು ದೇಶ ಪ್ರವೇಶಿಸುವುದನ್ನು ತಡೆಯುತ್ತಿವೆ ಮತ್ತು ಈಗಾಗಲೇ ನೆಲೆಸಿರುವವರನ್ನು ಮುಲಾಜಿಲ್ಲದೆ ಹೊರಹಾಕುತ್ತಿವೆ.
ಏಕೆ ಈ ಸ್ಥಿತಿ?: ಪಾಕಿಸ್ತಾನದಲ್ಲಿನ ಸಾಮಾಜಿಕ-ಆರ್ಥಿಕ ಸಮಸ್ಯೆಗಳೇ ಈ ಸ್ಥಿತಿಗೆ ಪ್ರಮುಖ ಕಾರಣ. ಪಾಕಿಸ್ತಾನದಲ್ಲಿ ಬಡತನ ಮತ್ತು ನಿರುದ್ಯೋಗದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಬಡವರಿಗೆ ನೆರವಾಗುವಂಥ ಸರ್ಕಾರಿ ಯೋಜನೆಗಳಾಗಲಿ, ಕಾರ್ಯಕ್ರಮಗಳಾಗಲಿ ಇಲ್ಲ. ಅಲ್ಲದೆ, ಸಾಮಾಜಿಕ ಭದ್ರತೆಯ ಕೊರತೆ ಜನರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಹೀಗಾಗಿ ಪಾಕ್ನ ಅದೆಷ್ಟೋ ಬಡವರು ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಭಿಕ್ಷಾಟನೆಯನ್ನು ಆಯ್ದುಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲ ಜಾಲಗಳು ಭಿಕ್ಷಾಟನೆಯ ಮೂಲಕ ಲಾಭ ಮಾಡಿಕೊಳ್ಳುತ್ತಿವೆ. ಜಾಲಗಳೂ ಸಕ್ರಿಯ: ಜನರ ಈ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಭಿಕ್ಷಾಟನೆಗೆ ತಳ್ಳುವ ಸಂಘಟಿತ ಜಾಲಗಳು ಪಾಕ್ ನೆಲದಿಂದ ಕಾರ್ಯನಿರ್ವಹಿಸುತ್ತಿವೆ.
ಪಾಕ್ನ ಬೇರೆ ಬೇರೆ ಪ್ರಾಂತ್ಯಗಳಿಗೆ ಮಾತ್ರವಲ್ಲದೆ, ವಿದೇಶಗಳಿಗೆ ಕಳುಹಿಸಿ ಇವರನ್ನು ಭಿಕ್ಷಾಟನೆಗೆ ತೊಡಗಿಸಲಾಗುತ್ತದೆ. ಆದರೆ, ಭಿಕ್ಷಾಟನೆಯ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಕ್ ಸರ್ಕಾರ ವಿಫಲವಾಗಿದೆ. ಈ ಜಾಲಗಳ ಏಜೆಂಟರು ಭಿಕ್ಷಾಟನೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ವೀಸಾ, ಟಿಕೆಟ್, ವಸತಿ ಮತ್ತು ಇತರ ಅಗತ್ಯ ವ್ಯವಸ್ಥೆ ಮಾಡುತ್ತಾರೆ. ಕೆಲವೊಮ್ಮೆ ಧಾರ್ವಿುಕ ಪ್ರವಾಸದ ನೆಪದಲ್ಲಿ, ಮಗದೊಮ್ಮೆ ವಿದೇಶಗಳಲ್ಲಿ ಕಾರ್ವಿುಕರ ಅಗತ್ಯವಿದೆ ಎಂದು ಪುಸಲಾಯಿಸಿ ಕರೆದುಕೊಂಡು ಹೋಗಲಾಗುತ್ತದೆ. ಇನ್ನು ಕೆಲ ಜಾಲಗಳಂತೂ, ‘ದಿನದ ಇಷ್ಟು ಹೊತ್ತು ಭಿಕ್ಷೆ ಯಾಚಿಸುವುದಷ್ಟೇ ನಿಮ್ಮ ಕೆಲಸ’ ಎಂದು ಸ್ಪಷ್ಟವಾಗಿ ಹೇಳಿ, ಅದಕ್ಕಾಗಿ ತಾವು ನೀಡುತ್ತಿರುವ ಸೌಲಭ್ಯಗಳನ್ನು ವಿವರಿಸಿ ಗಲ್ಪ್ ರಾಷ್ಟ್ರಗಳಿಗೆ ಕಳುಹಿಸುತ್ತವೆ. ಸಮೀಕ್ಷಾ ವರದಿಯೊಂದರ ಪ್ರಕಾರ, ಈ ಭಿಕ್ಷಾಟನಾ ಜಾಲಗಳು ಒಬ್ಬ ಭಿಕ್ಷುಕನ ಮೇಲೆ ತಲಾ 10 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿವೆ ಮತ್ತು ಲಾಭದಲ್ಲಿ ದೊಡ್ಡ ಭಾಗವನ್ನು ಪಡೆದುಕೊಳ್ಳುತ್ತಿವೆ.
ಭಿಕ್ಷಾಟನೆ ಅಥವಾ ಇತರ ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಪಾಕ್ ಮೂಲದ ಪ್ರಜೆಗಳು ಇದ್ದಕ್ಕಿದಂತೆ ನಾಪತ್ತೆಯಾಗುತ್ತಾರೆ. ಇವರನ್ನು ಪತ್ತೆ ಹಚ್ಚಲು ತನಿಖಾ ಏಜೆನ್ಸಿಗಳು ನಡೆಸಿರುವ ಪ್ರಯತ್ನಗಳು ವಿಫಲವಾಗಿವೆ. ಉದಾಹರಣೆಗೆ, 2025ರಲ್ಲಿ 24 ಸಾವಿರ ಪಾಕಿಸ್ತಾನಿಯರು ಕಾಂಬೋಡಿಯಾಕ್ಕೆ ಹೋಗಿದ್ದಾರೆ. ಈ ಪೈಕಿ 12 ಸಾವಿರ ಜನರು ಪಾಕ್ಗೆ ಮರಳಿಲ್ಲ ಮತ್ತು ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆಯೂ ಯಾವುದೇ ಸುಳಿವಿಲ್ಲ. ಇದೇ ರೀತಿ ಮ್ಯಾನ್ಮಾರ್ಗೆ ತೆರಳಿದ 4 ಸಾವಿರ ಪಾಕಿಸ್ತಾನಿಯರ ಪೈಕಿ 2500 ಜನರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಈ ಪೈಕಿ ಹಲವು ಜನರು ಮಾನವ ಕಳ್ಳಸಾಗಾಣಿಕೆ, ಭಿಕ್ಷಾಟನೆ ಮತ್ತು ಸೈಬರ್ ಅಪರಾಧ ಜಾಲಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಪಾಕ್ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾ ಮತ್ತು ಯುಎಇನಂತಹ ದೇಶಗಳಲ್ಲಿ ಧಾರ್ವಿುಕ ಯಾತ್ರೆಯ ವೀಸಾಗಳು (ಉದಾಹರಣೆಗೆ, ಉಮ್ರಾ ವೀಸಾ) ಸುಲಭವಾಗಿ ಮತ್ತು ಕಡಿಮೆ ದಾಖಲೆಗಳನ್ನು ಆಧರಿಸಿ ಸಿಗುವುದರಿಂದ ವೀಸಾ ದುರ್ಬಳಕೆ ಹೆಚ್ಚಾಗಿದೆ. ಇರಾನ್ನಿಂದ ಸೌದಿ ಅರೇಬಿಯಾವರೆಗೆ ಭಿಕ್ಷಾಟನಾ ಜಾಲಗಳು ವಿಸ್ತರಿಸಿವೆ. ಗಲ್ಪ್ ರಾಷ್ಟ್ರಗಳಲ್ಲಿ ಶ್ರೀಮಂತರು ಧಾರಾಳ ಮನೋಭಾವದವರಾಗಿರುತ್ತಾರೆ ಮತ್ತು ಧಾರ್ವಿುಕ ಸ್ಥಳಗಳಲ್ಲಿ ಕೈಬಿಚ್ಚಿ ದಾನ ಮಾಡುತ್ತಾರೆ. ಭಿಕ್ಷಾಟನಾ ಜಾಲಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಧಾರ್ವಿುಕ ಸ್ಥಳಗಳಲ್ಲಿ ಭಿಕ್ಷುಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿವೆ.
ಅಂತಾರಾಷ್ಟ್ರೀಯ ವಲಯದಿಂದ ಸೃಷ್ಟಿಯಾಗಿರುವ ಒತ್ತಡ ಪಾಕಿಸ್ತಾನವನ್ನು ಪೇಚಿಗೆ ಸಿಲುಕಿಸಿದೆ. ಭಿಕ್ಷಾಟನೆಯಲ್ಲಿ ತೊಡಗಿದ್ದ ಪಾಕ್ ಪ್ರಜೆಗಳನ್ನು ರೆಡ್ ಹ್ಯಾಂಡಾಗಿ ಹಿಡಿದು, ಅವರನ್ನು ಗಡಿಪಾರು ಮಾಡಿರುವುದರಿಂದ ಅದು ಒಂದಿಷ್ಟು ಕ್ರಮಗಳನ್ನು ಅನಿವಾರ್ಯತೆಯಿಂದಾದರೂ ಕೈಗೊಂಡಿದೆ. ಭಿಕ್ಷಾಟನೆಗೆ ವಿದೇಶಕ್ಕೆ ತೆರಳುತ್ತಿದ್ದ 66,000 ಜನರನ್ನು ವಿಮಾನ ಹತ್ತದಂತೆ ಇದೇ ವರ್ಷ ತಡೆದಿದೆ. 2,500 ಸಾವಿರ ಜನರ ಪಾಸ್ಪೋರ್ಟ್ಗಳನ್ನು ರದ್ದು ಮಾಡಿದೆ. ಇನ್ನು 7 ಸಾವಿರ ಪಾಸ್ಪೋರ್ಟ್ಗಳ ತಪಾಸಣೆ ನಡೆಸುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (ಎಐ) ನೆರವು ಪಡೆದು, ಸಂಭಾವ್ಯ ಭಿಕ್ಷುಕರನ್ನು ಗುರುತಿಸಿ, ವಿಚಾರಣೆಗೆ ಒಳಪಡಿಸುತ್ತಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆಯುತ್ತಿದೆ. ಇತ್ತೀಚೆಗೆ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ 24 ಜನರನ್ನು ವಶಕ್ಕೆ ಪಡೆದಿದೆ. ವಿದೇಶಗಳಿಂದ ಗಡಿಪಾರು ಆದ ಪಾಕಿಸ್ತಾನಿಯರನ್ನು ಎಕ್ಸಿಟ್ ಕಂಟ್ರೋಲ್ ಲಿಸ್ಟ್ಗೆ ಸೇರಿಸಿ ಅವರು ಮತ್ತೆ ವಿದೇಶ ಪ್ರಯಾಣ ಕೈಗೊಳ್ಳದಂತೆ ನಿಗಾ ವಹಿಸುತ್ತಿದೆ. ಭಿಕ್ಷಾಟನೆ ವಿರುದ್ಧ ಕಾನೂನು (3 ವರ್ಷಗಳ ಜೈಲು ಶಿಕ್ಷೆ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
ಸೌದಿ ಅರೇಬಿಯಾ
2025ರಲ್ಲಿ ಸುಮಾರು 56,000 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿದೆ ಮತ್ತು ಇಂಥ ವರ್ತನೆ ಮರುಕಳಿಸದಂತೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ರಂಜಾನ್ ಸಮಯದಲ್ಲಿ 90 ಮಹಿಳೆಯರು ಸೇರಿ 202 ಜನರನ್ನು ಬಂಧಿಸಿ ಗಡಿಪಾರು ಮಾಡಿದೆ. ಉಮ್ರಾ ವೀಸಾ ದುರ್ಬಳಕೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.
ಯುಎಇ:
ರಂಜಾನ್ನ ಮೊದಲ ಎರಡು ವಾರಗಳಲ್ಲಿ 500ಕ್ಕೂ ಹೆಚ್ಚು ಸೇರಿದಂತೆ 2025ರಲ್ಲಿ 6000 ಭಿಕ್ಷುಕರನ್ನು ಬಂಧಿಸಿ, ಭಾರಿ ದಂಡ ವಿಧಿಸಿ ಗಡಿಪಾರು ಮಾಡಿದೆ. ಮಾತ್ರವಲ್ಲ, ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡುವುದನ್ನು ಸೀಮಿತಗೊಳಿಸಿದೆ. ವೀಸಾ ನೀಡಿಕೆಯ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಜರ್ಬೈಜಾನ್ ಕೂಡ 2,500 ಪಾಕ್ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದೆ.
ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳು ಪಾಕಿಸ್ತಾನ ಮೂಲದ ಸಂಘಟಿತ ಭಿಕ್ಷಾಟನಾ ಜಾಲಗಳ ಬಗ್ಗೆ ತನಿಖೆ ನಡೆಸಿದ್ದು, ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.