ಬರ್ತಿದೆ ಗಾಡ್ಜಿಲ್ಲಾ ಎಲ್ ನಿನೊ...ಈವರೆಗೂ ಜಗತ್ತು ನೋಡಿರದ ಅತಿ ಭಯಾನಕ ವಿದ್ಯಾಮಾನ, ವಿಶ್ವಕ್ಕೆ ಮಹಾಕಂಟಕ! Godzilla El Nino  
ವಿದೇಶ

ಬರ್ತಿದೆ ಗಾಡ್ಜಿಲ್ಲಾ ಎಲ್ ನಿನೊ...ಈವರೆಗೂ ಜಗತ್ತು ನೋಡಿರದ ಅತಿ ಭಯಾನಕ ವಿದ್ಯಾಮಾನ, ವಿಶ್ವಕ್ಕೆ ಮಹಾಕಂಟಕ! Godzilla El Nino

ಪ್ರಮುಖ ಮುಖ್ಯಾಂಶಗಳು

  • ಪೆಸಿಫಿಕ್ ಮಹಾಸಾಗರದಲ್ಲಿ ಭೀಕರ ಹವಾಮಾನ ಬದಲಾವಣೆಯೊಂದು ಅತ್ಯಂತ ವೇಗವಾಗಿ ರೂಪುಗೊಳ್ಳುತ್ತಿದೆ
  • ಈ ಅಪರೂಪದ ಹವಾಮಾನ ಬಲಾವಣೆಯನ್ನು ಕಂಡು ವಿಜ್ಞಾನಿಗಳು ತುಂಬಾ ಆತಂಕಗೊಂಡಿದ್ದಾರೆ
  • ವಿಜ್ಞಾನಿಗಳಿಂದ "ಗಾಡ್ಜಿಲ್ಲಾ ಎಲ್ ನಿನೊ" ಎಂದು ಕರೆಯಲ್ಪಡುತ್ತಿರುವ ಈ ದೈತ್ಯ
  • ಜಾಗತಿಕ ತಾಪಮಾನವನ್ನು ಇದುವರೆಗಿನ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಕೊಂಡೊಯ್ಯಲಿದೆ ಎಲ್​ ನಿನೊ
Godzilla El Nino : ಪೆಸಿಫಿಕ್ ಮಹಾಸಾಗರದಲ್ಲಿ ಭೀಕರ ಹವಾಮಾನ ಬದಲಾವಣೆಯೊಂದು ಅತ್ಯಂತ ವೇಗವಾಗಿ ರೂಪುಗೊಳ್ಳುತ್ತಿದ್ದು, ಇದನ್ನು ಕಂಡು ಹವಾಮಾನ ವಿಜ್ಞಾನಿಗಳೇ ಆತಂಕಗೊಂಡಿದ್ದಾರೆ! ವಿಜ್ಞಾನಿಗಳಿಂದ ಈಗಾಗಲೇ "ಗಾಡ್ಜಿಲ್ಲಾ ಎಲ್ ನಿನೊ" (Godzilla El Niño) ಎಂದು ಕರೆಯಲ್ಪಡುತ್ತಿರುವ ಈ ದೈತ್ಯ ಹವಾಮಾನ ವೈಪರೀತ್ಯವು, ಈ ವರ್ಷದ ಅಂತ್ಯದಿಂದ ಹಿಡಿದು 2027ರ ಅವಧಿಯಲ್ಲಿ ಜಾಗತಿಕ ತಾಪಮಾನವನ್ನು ಇದುವರೆಗಿನ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಭಯಾನಕ ಮುನ್ಸೂಚನೆ ನೀಡಲಾಗಿದೆ. ಭೂಮಿಯ ಒಟ್ಟಾರೆ ಹವಾಮಾನದ ಮೇಲೆಯೇ ತೀವ್ರ ಪರಿಣಾಮ ಬೀರಲಿರುವ ಈ ಪ್ರಕೃತಿಯ ಮಹಾ ಆಪತ್ತಿನ ಆರಂಭಿಕ ಮುನ್ಸೂಚನೆಗಳು ಈಗ ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಹವಾಮಾನ ವಿಜ್ಞಾನದ ಅತ್ಯುನ್ನತ ಸಂಸ್ಥೆಗಳು ಮತ್ತು ಪ್ರಖ್ಯಾತ ತಜ್ಞರಿಂದಲೇ ಈ ಆತಂಕಕಾರಿ ಎಚ್ಚರಿಕೆಗಳು ಹೊರಬೀಳುತ್ತಿವೆ. ಇದರ ಭೀಕರ ಪರಿಣಾಮಗಳು ಕೇವಲ ತಾಪಮಾನದ ಏರಿಕೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಒಟ್ಟಾರೆ ಜಾಗತಿಕ ಪರಿಸರ ವ್ಯವಸ್ಥೆ, ಕೃಷಿ, ಆಹಾರ ಭದ್ರತೆ ಮತ್ತು ಮಾನವನ ದೈನಂದಿನ ಜೀವನದ ಮೇಲೆಯೇ ಊಹಿಸಲಾಗದಷ್ಟು ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸುತ್ತಿದ್ದಾರೆ.
ಏನಿದು ಎಲ್ ನಿನೊ? ಮತ್ತು ಏಕಿಷ್ಟು ಆತಂಕ?
ಎಲ್ ನಿನೊ (El Niño) ಎಂಬುದು ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಉಷ್ಣವಲಯದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವುದರಿಂದ ಉಂಟಾಗುವ ಒಂದು ನೈಸರ್ಗಿಕ ಹವಾಮಾನ ವಿದ್ಯಮಾನವಾಗಿದೆ. 'ಎಲ್ ನಿನೊ ಸದರ್ನ್ ಆಸಿಲೇಶನ್' (ENSO) ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಇದು, ಸಾಮಾನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಅವಧಿಯಲ್ಲಿ ಜಾಗತಿಕ ವಾಣಿಜ್ಯ ಮಾರುತಗಳು (Trade winds) ದುರ್ಬಲಗೊಳ್ಳುವುದರಿಂದ, ಸಾಗರದ ಆಳದಲ್ಲಿನ ಬೆಚ್ಚಗಿನ ನೀರು ಪೂರ್ವದ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಸಾಗರದ ಅಗಾಧ ಶಾಖವು ವಾತಾವರಣಕ್ಕೆ ವರ್ಗಾವಣೆಗೊಂಡು, ಪೆಸಿಫಿಕ್ ಮಹಾಸಾಗರದ ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವಂತೆ ಮಾಡುತ್ತದೆ.

ಗಾಡ್ಜಿಲ್ಲ ಎಂದು ಕರೆಯುವುದೇಕೆ?
ಮುನ್ಸೂಚನೆ ನೀಡಲಾಗಿರುವ ಈ ಹವಾಮಾನ ವೈಪರೀತ್ಯದ ದೈತ್ಯ ಸ್ವರೂಪಕ್ಕೆ ತಕ್ಕಂತೆಯೇ ಇದಕ್ಕೆ "ಗಾಡ್ಜಿಲ್ಲಾ" ಎಂಬ ಹೆಸರನ್ನು ಇಡಲಾಗಿದೆ. ವಿಶ್ವಸಂಸ್ಥೆಯ 'ವಿಶ್ವ ಹವಾಮಾನ ಸಂಸ್ಥೆ' (WMO) ನೀಡಿರುವ ವರದಿಯ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಈ ಭೀಕರ ಎಲ್ ನಿನೊ ಪರಿಸ್ಥಿತಿ ಸೃಷ್ಟಿಯಾಗಲು ಶೇ. 90 ರಷ್ಟು ಸಾಧ್ಯತೆಗಳಿವೆ. ಇನ್ನು ಕೆಲವು ಹವಾಮಾನ ತಜ್ಞರ ಪ್ರಕಾರ, ಮುಂಬರುವ ಈ ಹವಾಮಾನ ವಿದ್ಯಮಾನವು ಇತಿಹಾಸದಲ್ಲೇ ಇದುವರೆಗೆ ದಾಖಲಾದ ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಎಲ್ ನಿನೊ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರ ಪರಿಣಾಮ ಭೀಕರವಾಗಿರುವುದರಿಂದ ಗಾಡ್ಜಿಲ್ಲಾ ಹೆಸರು ಇಡಲಾಗಿದೆ.

ವಿಶ್ವದ ಯಾವ ಭಾಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ?
ಈ ಭೀಕರ ಹವಾಮಾನ ಬದಲಾವಣೆಯಿಂದಾಗಿ ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಮಧ್ಯ ಆಫ್ರಿಕಾ ಮತ್ತು ಭಾರತದ ಹಲವು ಭಾಗಗಳು ತೀವ್ರ ಬರಗಾಲ ಹಾಗೂ ಒಣ ಹವಾಮಾನದ ಹೊಡೆತಕ್ಕೆ ಸಿಲುಕಲಿವೆ. ಇದೇ ಸಮಯದಲ್ಲಿ, ಇಕ್ವೆಡಾರ್ ಮತ್ತು ಪೆರುವಿನ ಕರಾವಳಿ ಪ್ರದೇಶಗಳು ಸೇರಿದಂತೆ ಯುನೈಟೆಡ್ ಸ್ಟೇಟ್ಸ್ (ಯುಎಸ್) ಹಾಗೂ ಮೆಕ್ಸಿಕೋದ ಕೆಲವು ಭಾಗಗಳಲ್ಲಿ ವಿನಾಶಕಾರಿ ಪ್ರವಾಹದ ತೀವ್ರತೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನದ ಪ್ರಾಧ್ಯಾಪಕ ತಿಮೋತಿ ಆಸ್ಬೋರ್ನ್ ಅವರು ಮಾಹಿತಿ ನೀಡಿದ್ದು, ಅತ್ಯಂತ ಪ್ರಬಲವಾಗಿ ರೂಪುಗೊಳ್ಳುತ್ತಿರುವ ಈ 'ಎಲ್ ನಿನೋ' ಜಾಗತಿಕವಾಗಿ ಸರಣಿ ಆಪತ್ತುಗಳನ್ನು ತರಲಿದೆ ಎಂದು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ ಕಾಡ್ಗಿಚ್ಚಿನ ಅಪಾಯ ಗಣನೀಯವಾಗಿ ಹೆಚ್ಚಲಿದ್ದು, ಗಾಳಿಯ ಗುಣಮಟ್ಟ ತೀವ್ರವಾಗಿ ಹಾಳಾಗಲಿದೆ ಮತ್ತು ಕೃಷಿ ವಲಯದ ಮೇಲೆ ಭಾರಿ ಹೊಡೆತ ಬಿದ್ದು ಬೆಳೆಗಳ ಇಳುವರಿ ಕುಂಠಿತಗೊಳ್ಳಲಿದೆ ಎಂದು 'ಫಸ್ಟ್‌ಪೋಸ್ಟ್‌' ವರದಿ ಮಾಡಿದೆ.

ಆಹಾರ ಸರಪಳಿ ಮೇಲೆ ಪರಿಣಾಮ ಬೀರುತ್ತಾ?

ಇದರ ಪರಿಣಾಮವಾಗಿ ಜಾಗತಿಕ ಕೃಷಿ ವಲಯವು ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಏಕಕಾಲದಲ್ಲಿ ಸಂಭವಿಸಲಿರುವ ಭೀಕರ ಬರಗಾಲ ಮತ್ತು ಪ್ರವಾಹಗಳು ಜಗತ್ತಿನ ಹಲವು ಖಂಡಗಳಲ್ಲಿ ಬೆಳೆಗಳ ಚಕ್ರವನ್ನೇ ಏರುಪೇರು ಮಾಡಲಿವೆ. ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಲಿದ್ದು, ಈಗಾಗಲೇ ಜಾಗತಿಕವಾಗಿ ಇರುವ ಪೂರೈಕೆ ಸರಪಳಿಯ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳಲಿವೆ. ಅಷ್ಟೇ ಅಲ್ಲದೆ, ಸಾಗರದ ತಾಪಮಾನವು ಅತಿಯಾಗಿ ಹೆಚ್ಚಾಗುವುದರಿಂದ ಜಲಚರಗಳು ಹಾಗೂ ಮೀನುಗಳ ಸಂತತಿಗೆ ಭಾರಿ ಕಂಟಕ ಎದುರಾಗಲಿದ್ದು, ಕರಾವಳಿ ಪ್ರದೇಶದ ಸಮುದಾಯಗಳ ಆಹಾರ ಭದ್ರತೆಗೆ ಇದು ದೊಡ್ಡ ಆಪತ್ತಾಗಿ ಪರಿಣಮಿಸಲಿದೆ.
ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, ಈ 'ಎಲ್ ನಿನೊ' ಪ್ರಭಾವವು ಭಾರತೀಯ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುವ ಮೂಲಕ ಉಪಖಂಡದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸುತ್ತದೆ. ಮುಂಗಾರು ಮಳೆ ಕೈಕೊಟ್ಟರೆ ಅದು ದಕ್ಷಿಣ ಏಷ್ಯಾದಾದ್ಯಂತದ ಕೃಷಿ ಉತ್ಪಾದನೆ, ಕುಡಿಯುವ ನೀರಿನ ಲಭ್ಯತೆ ಮತ್ತು ಗ್ರಾಮೀಣ ಭಾಗದ ಕೋಟ್ಯಂತರ ಜನರ ಜೀವನೋಪಾಯದ ಮೇಲೆ ನೇರ ಹಾಗೂ ಅತ್ಯಂತ ಭೀಕರ ಪರಿಣಾಮ ಬೀರಲಿದೆ.
"ಗಾಡ್ಜಿಲ್ಲಾ ಎಲ್ ನಿನೊ" ಪ್ರಭಾವಕ್ಕೆ ಪೂರಕವಾಗಿ ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗಲಿರುವ 'ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್' (Positive Indian Ocean Dipole) ಎಂಬ ಮತ್ತೊಂದು ಹವಾಮಾನ ವಿದ್ಯಮಾನವು ಇದಕ್ಕೆ ಇನ್ನಷ್ಟು ತುಪ್ಪ ಸುರಿಯಲಿದೆ. ಈ ಎರಡೂ ಜಾಗತಿಕ ಹವಾಮಾನ ವೈಪರೀತ್ಯಗಳು ಒಟ್ಟಿಗೆ ಸೇರುವುದರಿಂದ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿಯನ್ನು ಮತ್ತಷ್ಟು ವಿಸ್ತರಿಸಲಿವೆ. ಕೇವಲ 'ಎಲ್ ನಿನೋ' ತರಬಹುದಾದ ನಷ್ಟಕ್ಕಿಂತಲೂ ಮಿಗಿಲಾದ ಭೀಕರ ಬರ ಹಾಗೂ ವಿನಾಶಕಾರಿ ಕಾಡ್ಗಿಚ್ಚಿನ ಅಪಾಯಗಳನ್ನು ಇವೆರಡರ ಜುಗಲ್‌ಬಂದಿ ಸೃಷ್ಟಿಸಲಿದೆ ಎಂದು ಹವಾಮಾನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್​ ನಿನೊ ಹೆಸರು ಬಂದಿದ್ದು ಹೇಗೆ?
'ಎಲ್ ನಿನೊ' ಎಂಬುದು ಸ್ಪ್ಯಾನಿಷ್ ಭಾಷೆಯ ಪದವಾಗಿದ್ದು, ಇದರ ಅರ್ಥ "ಚಿಕ್ಕ ಹುಡುಗ" ಅಥವಾ "ಬಾಲ ಯೇಸು" ಎಂದಾಗುತ್ತದೆ. ದಕ್ಷಿಣ ಅಮೆರಿಕಾದ ಪೆಸಿಫಿಕ್ ಕರಾವಳಿಯಲ್ಲಿರುವ ಪೆರು ಮತ್ತು ಈಕ್ವೆಡಾರ್ ದೇಶದ ಮೀನುಗಾರರು 1600ರ ದಶಕದಲ್ಲೇ ಈ ವಿದ್ಯಮಾನವನ್ನು ಮೊದಲ ಬಾರಿಗೆ ಗುರುತಿಸಿದ್ದರು. ಸಾಗರದ ನೀರು ಅಸಹಜವಾಗಿ ಬಿಸಿಯಾಗುವ ಈ ಪ್ರಕ್ರಿಯೆಯು ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ, ಅಂದರೆ ಕ್ರಿಸ್‌ಮಸ್ ಹಬ್ಬದ ಆಸುಪಾಸಿನಲ್ಲಿ ಗರಿಷ್ಠ ಮಟ್ಟ ತಲುಪುತ್ತಿತ್ತು. ಕ್ರಿಸ್‌ಮಸ್ ಜೀಸಸ್ ಕ್ರೈಸ್ಟ್‌ ಅವರ ಜನ್ಮದಿನವಾಗಿರುವುದರಿಂದ, ಅಲ್ಲಿನ ಸ್ಥಳೀಯ ಮೀನುಗಾರರು ಸಾಗರದಲ್ಲಿ ಕಂಡುಬರುತ್ತಿದ್ದ ಈ ವಿಶಿಷ್ಟ ಬದಲಾವಣೆಗೆ ಯೇಸುಕ್ರಿಸ್ತನ ಸ್ಮರಣಾರ್ಥವಾಗಿ 'ಎಲ್ ನಿನೊ' (ಬಾಲ ಯೇಸು) ಎಂದು ಹೆಸರಿಟ್ಟರು, (ಏಜೆನ್ಸೀಸ್​).