ಬಾಂಬ್ ಇಲ್ಲದಿದ್ದರೂ ಬೂದಿಯಾಗುತ್ತಾ ಜಾಗತಿಕ ಆರ್ಥಿಕತೆ? ರಷ್ಯಾ ಕಣ್ಣಿಗೆ ಕಂಡ ಇರಾನ್‌ನ ಆ ಪರಮಾಣು ಶಕ್ತಿ ಯಾವುದು!
ಮಾಸ್ಕೋ: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ 14 ದಿನಗಳ ತಾತ್ಕಾಲಿಕ ಕದನ ವಿರಾಮವು ಜಾಗತಿಕ ಮಟ್ಟದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ್ದರೆ, ರಷ್ಯಾ(Russia) ಮಾತ್ರ ಈ ಒಪ್ಪಂದವನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದೆ. ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಇರಾನ್‌ನ ಶಕ್ತಿಯ ಬಗ್ಗೆ ಮಾತನಾಡುತ್ತಾ, ಇರಾನ್ ಈಗಾಗಲೇ ತನ್ನ ಪರಮಾಣು ಅಸ್ತ್ರವನ್ನು ಪರೀಕ್ಷಿಸಿದೆ, ಅದರ ಹೆಸರೇ ಹೋರ್ಮುಜ್ ಜಲಸಂಧಿ ಎಂದು ಹೇಳುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ್ದಾರೆ.
ಮೆಡ್ವೆಡೆವ್ ಅವರ ವಿಶ್ಲೇಷಣೆ: ತೈಲ ಯುದ್ಧದ ಸುಳಿವು..?
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಮೆಡ್ವೆಡೆವ್, ಅಮೆರಿಕ ಮತ್ತು ಇರಾನ್ ನಡುವಿನ ಈ ಕದನ ವಿರಾಮವು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಒಂದು ವಿಷಯ ಮಾತ್ರ ಖಚಿತ, ಇರಾನ್ ತನ್ನ ಪರಮಾಣು ಅಸ್ತ್ರದ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ಇರಾನ್ ಜಾಗತಿಕ ಆರ್ಥಿಕತೆಯ ಮೇಲೆ ನಡೆಸಿದ ದಾಳಿ ಯಾವುದೇ ಪರಮಾಣು ಬಾಂಬ್‌ಗಿಂತ ಕಡಿಮೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು ಮಾತನಾಡಿರುವ ಮೆಡ್ವೆಡೆವ್, ಈ ಜಲಸಂಧಿಯ ಸಾಮರ್ಥ್ಯವು ಅಕ್ಷಯವಾಗಿದ್ದು, ಇದನ್ನು ನಿಯಂತ್ರಿಸುವ ಮೂಲಕ ಇರಾನ್ ಇಡೀ ವಿಶ್ವದ ಇಂಧನ ಮಾರುಕಟ್ಟೆಯನ್ನು ತನ್ನ ಕೈಗೊಂಬೆ ಮಾಡಿಕೊಳ್ಳಬಲ್ಲದು ಎಂದು ಹೇಳಿದ್ದಾರೆ.
39 ದಿನಗಳ ಭೀಕರ ಯುದ್ಧ ಮತ್ತು ಕದನ ವಿರಾಮ
ಫೆಬ್ರವರಿ 28 ರಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಭೀಕರ ದಾಳಿಯು ಸುಮಾರು 39 ದಿನಗಳ ಕಾಲ ಮುಂದುವರಿದಿತ್ತು. ಈ ಸಂಘರ್ಷದಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಸೇರಿದಂತೆ 1,400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲಿದ್ದ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.
ಆದರೆ, ಕಳೆದ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ 10 ಅಂಶಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡು ಎರಡು ವಾರಗಳ ಕದನ ವಿರಾಮ ಘೋಷಿಸಿದರು. ಈ ಗಡುವು ಮುಗಿಯುವ ಎರಡು ಗಂಟೆಗಳ ಮೊದಲು ಇರಾನ್ ಹೋರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿದೆ ಎನ್ನಲಾಗಿದೆ.
ರಷ್ಯಾದ 'ಡೆಡ್ಲಿ' ಎಚ್ಚರಿಕೆ: ಇನ್ನು ಅಗ್ಗದ ತೈಲ ಸಿಗದು
ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಸ್ವಾಗತಾರ್ಹವಾದರೂ, ಇನ್ನು ಮುಂದೆ ಜಗತ್ತಿಗೆ ಅಗ್ಗದ ದರದಲ್ಲಿ ತೈಲ ಸಿಗುವುದಿಲ್ಲ ಎಂದು ಮೆಡ್ವೆಡೆವ್ ಎಚ್ಚರಿಸಿದ್ದಾರೆ. ಇರಾನ್ ಈ ಯುದ್ಧದ ಮೂಲಕ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ ಮತ್ತು ಜಾಗತಿಕ ತೈಲ ಪೂರೈಕೆಯ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ ಎಂದು ರಷ್ಯಾ ವಾದಿಸುತ್ತಿದೆ.
ಅತ್ತ ಇರಾನ್ ಪರಮಾಣು ಬಾಂಬ್ ತಯಾರಿಸಲು ತನ್ನ ಶಕ್ತಿಯನ್ನೆಲ್ಲಾ ವಿನಿಯೋಗಿಸುತ್ತಿದೆ ಎಂದು ಮೆಡ್ವೆಡೆವ್ ಈ ಮೊದಲೇ ಹೇಳಿದ್ದರು. ಈಗ ಜಲಸಂಧಿಯನ್ನೇ ಪರಮಾಣು ಅಸ್ತ್ರಕ್ಕೆ ಹೋಲಿಸಿರುವುದು ಇರಾನ್‌ನ ರಾಜತಾಂತ್ರಿಕ ಜಯವನ್ನು ಎತ್ತಿ ತೋರಿಸುತ್ತಿದೆ.
ಬರುವ ವಾರಾಂತ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದಲ್ಲಿ ಶಾಶ್ವತ ಕದನ ವಿರಾಮದ ಕುರಿತು ಮಾತುಕತೆ ನಡೆಯಲಿದೆ. ಅತ್ತ ಟ್ರಂಪ್ ಅವರು ಯುಕ್ರೇನ್ ಮತ್ತು ರಷ್ಯಾ ನಡುವಿನ ಸಂಧಾನಕ್ಕೂ ಮುಂದಾಗುವ ನಿರೀಕ್ಷೆಯಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಆಶಾವಾದ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).