ಮೆಕ್ಸಿಕೋ 
ವಿದೇಶ

ಮೆಕ್ಸಿಕೋ ಎಂಬ ಡ್ರಗ್ಸ್ ಸಾಮ್ರಾಜ್ಯ; ಮಾದಕದ್ರವ್ಯ ಮಾಫಿಯಾಕ್ಕೆ ಡಾನ್​ ಹತ್ಯೆಯ ಶಾಕ್​

ನವದೆಹಲಿ: ಮಾದಕದ್ರವ್ಯ ಮಾಫಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ಮೆಕ್ಸಿಕೋ ಮಹತ್ವದ ಮುನ್ನಡೆ ಸಾಧಿಸಿದ್ದರೂ, ದೇಶ ಹಿಂಸಾಚಾರದಿಂದ ನಲುಗುತ್ತಿದೆ. ‘ಡ್ರಗ್ಸ್ ಡಾನ್’ ಎಂದೇ ಕುಖ್ಯಾತನಾದ ನೆಮೆಸಿಯೋ ಒಸೆಗುಯೆರಾ ಸೆರ್ವಾಂಟೆಸ್ ಅಲಿಯಾಸ್ ಎಲ್ ಮೆಂಚೊನನ್ನು ಸೇನೆ ಭಾನುವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ. ಅಮೆರಿಕ ಮೆಂಚೊ ತಲೆಗೆ 136 ಕೋಟಿ ರೂ.ಬಹುಮಾನ ಘೋಷಿಸಿತ್ತು. ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಮೆಕ್ಸಿಕೋ ಡ್ರಗ್ಸ್ ಭಸ್ಮಾಸುರನಂತೆ ಕಾಡುತ್ತಿದ್ದು, ಮೆಂಚೊ ಸಾಮ್ರಾಜ್ಯ ಈಗ ಪತನವಾಗಿದೆ. ಆದರೆ, ಮೆಂಚೊ ಹತ್ಯೆ ಬೆನ್ನಲ್ಲೇ ಹಿಂಸೆ ಭುಗಿಲೆದ್ದಿದ್ದು, ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಮೆಕ್ಸಿಕೋದಲ್ಲಿ ಮಾದಕದ್ರವ್ಯ ಜಾಲ ಇಷ್ಟು ತೀವ್ರವಾಗಿ ಬೆಳೆದಿದ್ದು ಹೇಗೆ? ಅದರಲ್ಲಿ ಈ ಮೆಂಚೊ ಪಾತ್ರವೇನು? ಈ ಎಲ್ಲ ಅಂಶಗಳ ಮಾಹಿತಿ ಇಲ್ಲಿದೆ. ಮೆಕ್ಸಿಕೋದಲ್ಲಿ ದಶಕಗಳಿಂದ ನಡೆಯುತ್ತಿರುವ ‘ಡ್ರಗ್ ವಾರ್’ ಕೇವಲ ಪೊಲೀಸರು ಮತ್ತು ಅಪರಾಧಿಗಳ ನಡುವಿನ ಕಾಳಗವಲ್ಲ. ಇದು ಇಡೀ ದೇಶದ ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ನಡುಗಿಸಿರುವ ಸುದೀರ್ಘ ಸಂಘರ್ಷ. ಮೆಕ್ಸಿಕೋ ಸರ್ಕಾರವು ಮಾದಕದ್ರವ್ಯ ಜಾಲಗಳ ವಿರುದ್ಧ ಅಧಿಕೃತವಾಗಿ ಯುದ್ಧ ಸಾರಿದ್ದು 2006ರಲ್ಲಿ. ಆಗಿನ ಅಧ್ಯಕ್ಷ ಫೆಲಿಪೆ ಕಾಲ್ಡೆರಾನ್ ಅವರು ಡ್ರಗ್ ಕಾರ್ಟೆಲ್​ಗಳನ್ನು ಹತ್ತಿಕ್ಕಲು ಸಾವಿರಾರು ಸೈನಿಕರನ್ನು ಬೀದಿಗಿಳಿಸಿದರು. ಅಲ್ಲಿಯವರೆಗೆ ಕೇವಲ ಪೊಲೀಸ್ ಕಾರ್ಯಾಚರಣೆಯಾಗಿದ್ದ ಇದು, ಸೈನ್ಯದ ಪ್ರವೇಶದೊಂದಿಗೆ ಭೀಕರ ಯುದ್ಧವಾಗಿ ಮಾರ್ಪಟ್ಟಿತು.

ಈ ಯುದ್ಧದಲ್ಲಿ ಮುಖ್ಯವಾಗಿ ಎರಡು ಬಗೆಯ ಸಂಘರ್ಷಗಳಿವೆ

  • ಸರ್ಕಾರ ವರ್ಸಸ್ ಕಾರ್ಟೆಲ್​ಗಳು: ಸೈನ್ಯವು ಮಾದಕದ್ರವ್ಯದ ಅಡ್ಡೆಗಳನ್ನು ಧ್ವಂಸ ಮಾಡುತ್ತದೆ.
  • ಕಾರ್ಟೆಲ್ ವರ್ಸಸ್ ಕಾರ್ಟೆಲ್: ಪ್ರದೇಶಗಳ ಮೇಲೆ ಹತೋಟಿ ಸಾಧಿಸಲು ವಿವಿಧ ಗುಂಪುಗಳ ನಡುವೆ ನಡೆಯುವ ಗ್ಯಾಂಗ್ ವಾರ್.

ಪ್ರಮುಖ ಗುಂಪುಗಳು

  • ನಾಲೋವಾ ಕಾರ್ಟೆಲ್: ಹಿಂದೆ ಎಲ್ ಚಾಪೊ ಇದರ ನಾಯಕನಾಗಿದ್ದನು.
  • ಸಾಲಿಸ್ಕೊ ನ್ಯೂ ಜನರೇಷನ್: ಪ್ರಸ್ತುತ ಅತ್ಯಂತ ಹಿಂಸಾತ್ಮಕ ಗುಂಪಾಗಿದೆ. ಎಲ್ ಮೆಂಚೊ ಹತ್ಯೆಯ ಬಳಿಕ ಈ ಸಂಘಟನೆಯ ಶಕ್ತಿ ಕ್ಷೀಣಿಸಲಿದೆಯೇ ಕಾದು ನೋಡಬೇಕು.
  • ಗಲ್ಪ್ ಕಾರ್ಟೆಲ್ ಮತ್ತು ಲಾಸ್ ಜೇಟಾಸ್: ಇವು ಹಳೆಯ ಮತ್ತು ಕ್ರೂರ ಗುಂಪುಗಳಾಗಿವೆ.

ರಕ್ತಪಾತದ ಕರಾಳ ಚರಿತ್ರೆ

ಮೆಕ್ಸಿಕೋದ ಅತ್ಯಂತ ಕ್ರೂರ ಮತ್ತು ಶಕ್ತಿಶಾಲಿ ಮಾದಕದ್ರವ್ಯ ಜಾಲಗಳಲ್ಲಿ ಒಂದಾದ ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. 2009-2010ರ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆ, ‘ಮಿಲಿನಿಯೋ ಕಾರ್ಟೆಲ್’ ಎಂಬ ಹಳೆಯ ಗುಂಪು ಒಡೆದಾಗ ಅದರ ಒಂದು ಭಾಗವಾಗಿ ಹೊರಹೊಮ್ಮಿತು. ನೆಮೆಸಿಯೊ ಒಸೆಗುಯೆರಾ ಸೆರ್ವಾಂಟೆಸ್ ಅಲಿಯಾಸ್ ಎಲ್ ಮೆಂಚೊನೇ ಇದರ ಮುಖ್ಯಸ್ಥನಾಗಿದ್ದ. ಆರಂಭದಲ್ಲಿ ಇದು ‘ಸಿನಾಲೋವಾ ಕಾರ್ಟೆಲ್’ನ ಸಣ್ಣ ಗುಂಪಾಗಿ ಕೆಲಸ ಮಾಡುತ್ತಿತ್ತು. ಆದರೆ ಅತೀ ಕಡಿಮೆ ಅವಧಿಯಲ್ಲಿ ತನ್ನದೇ ಆದ ಕುಖ್ಯಾತ ಸಾಮ್ರಾಜ್ಯವನ್ನು ಕಟ್ಟಿ, ಮೆಕ್ಸಿಕೋದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರಿದೆ. ಫೆಂಟಾನಿಲ್, ಮೆಥಾಂಫೆಟಮೈನ್, ಕೊಕೇನ್ ಮತ್ತು ಹೆರಾಯಿನ್ ಅನ್ನು ಅಮೆರಿಕ, ಯುರೋಪ್ ಮತ್ತು ಏಷ್ಯಾಕ್ಕೆ ದೊಡ್ಡ ಮಟ್ಟದಲ್ಲಿ ಸಾಗಿಸುತ್ತದೆ. ಮಾತ್ರವಲ್ಲ, ಎದುರಾಳಿ ಗುಂಪುಗಳನ್ನು ಅಥವಾ ಸರ್ಕಾರಿ ಅಧಿಕಾರಿಗಳನ್ನು ಕೊಂದು ಅವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಮೂಡಿಸುತ್ತದೆ.

ಚುನಾವಣೆಗಳ ಸಮಯದಲ್ಲಿ ತಮಗೆ ಬೇಡದ ಅಭ್ಯರ್ಥಿಗಳನ್ನು ಕೊಲ್ಲುವುದು ಅಥವಾ ಬೆದರಿಸುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇತರ ಕಾರ್ಟೆಲ್​ಗಳಿಗಿಂತ ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಭಿನ್ನವಾಗಿರುವುದು ಅದರ ಪ್ರಚಾರ ತಂತ್ರದಿಂದ. ಇವರು ಸೈನಿಕರಂತೆ ಸಮವಸ್ತ್ರ ಧರಿಸಿ, ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಪರೇಡ್ ಮಾಡುವ ವಿಡಿಯೋಗಳನ್ನು ಬಿಡುಗಡೆ ಮಾಡಿ ಸರ್ಕಾರದ ಸವಾಲಿಗೆ ಪ್ರತಿರೋಧ ಒಡ್ಡುತ್ತಾರೆ.

ಸುಲಿಗೆ ಮತ್ತು ತೈಲ ಕಳ್ಳತನ: ಮಾದಕದ್ರವ್ಯ ಮಾತ್ರವಲ್ಲದೆ, ಸ್ಥಳೀಯ ಉದ್ಯಮಿಗಳಿಂದ ಹಣ ವಸೂಲಿ ಮಾಡುವುದು ಮತ್ತು ಸರ್ಕಾರದ ತೈಲ ಪೈಪ್​ಲೈನ್​ಗಳಿಂದ ತೈಲ ಕಳ್ಳತನದಲ್ಲಿಯೂ ಈ ಸಂಘಟನೆ ಕುಖ್ಯಾತವಾಗಿದೆ. ಮೆಕ್ಸಿಕೋದಲ್ಲಿ ನಡೆಯುವ ಸಾವಿರಾರು ಕೊಲೆಗಳಿಗೆ ಈ ಸಂಘಟನೆಯೇ ನೇರ ಕಾರಣ. ಇದರಿಂದಾಗಿ ಮೆಕ್ಸಿಕೋದ ಹಲವು ನಗರಗಳು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳಗಳಾಗಿ ಮಾರ್ಪಟ್ಟಿವೆ.

ಪರ್ಯಾಯ ಸರ್ಕಾರವನ್ನೇ ನಡೆಸುತ್ತಿದ್ದ!

ಮೆಕ್ಸಿಕೋದ ಅತ್ಯಂತ ಕ್ರೂರ ಡ್ರಗ್ ಮಾಫಿಯಾ ಎನಿಸಿಕೊಂಡಿದ್ದ ನೆಮೆಸಿಯೊ ಒಸೆಗುಯೆರಾ ಸೆರ್ವಾಂಟೆಸ್ ಅಲಿಯಾಸ್ ಎಲ್ ಮೆಂಚೊ ಕ್ರೌರ್ಯದ ಪರಾಕಾಷ್ಠೆಯನ್ನೇ ತಲುಪಿದ್ದ. ಡ್ರೋನ್ ಬಾಂಬ್​ಗಳು, ರಾಕೆಟ್ ಲಾಂಚರ್ಸ್ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಕ ಈತನ ಕಾರ್ಟೆಲ್ ಮೆಕ್ಸಿಕೋದ 32 ರಾಜ್ಯಗಳಿಗೆ ಹರಡಿತು.

15ನೇ ವಯಸ್ಸಿಗೇ ಮಾದಕ ಜಗತ್ತಿಗೆ ಪ್ರವೇಶ: ಮೆಕ್ಸಿಕೋದ ಮಿಚೋವಾಕನ್​ನ ಬಡ ಕುಟುಂಬದಲ್ಲಿ ಜನಿಸಿದ ಈತ, ಬಾಲ್ಯದಲ್ಲಿ ಬಡತನದಿಂದಾಗಿ ಶಾಲೆ ಬಿಟ್ಟು ಅಡಿಕೆ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ. 1980ರ ದಶಕದಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಿ, ಅಲ್ಲಿ ಸಣ್ಣಪುಟ್ಟ ಡ್ರಗ್ ಡೀಲಿಂಗ್ ಮಾಡುವಾಗ ಸಿಕ್ಕಿಬಿದ್ದು, ಜೈಲು ಶಿಕ್ಷೆ ಅನುಭವಿಸಿ ನಂತರ ಮೆಕ್ಸಿಕೋಗೆ ಗಡಿಪಾರು ಮಾಡಲ್ಪಟ್ಟನು.

ಪೊಲೀಸ್ ಅಧಿಕಾರಿಯಾಗಿದ್ದ!: ಆಶ್ಚರ್ಯವೆಂದರೆ, ಮೆಕ್ಸಿಕೋಗೆ ಮರಳಿದ ನಂತರ ಈತ ಕೆಲವು ಕಾಲ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದ! ಆದರೆ ಶೀಘ್ರದಲ್ಲೇ ಆ ಕೆಲಸ ಬಿಟ್ಟು ಸಂಪೂರ್ಣವಾಗಿ ಅಪರಾಧ ಲೋಕಕ್ಕೆ ಇಳಿದ. 2010ರಲ್ಲಿ ಮೆಂಚೊ ತನ್ನದೇ ಆದ ‘ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್’ (ಇಒಘಎ) ಸ್ಥಾಪಿಸಿದ. ಎದುರಾಳಿ ಗುಂಪುಗಳನ್ನು ಮಟ್ಟಹಾಕಲು ಈತ ಅತ್ಯಂತ ಭೀಕರ ಹತ್ಯೆಗಳನ್ನು ಮಾಡಿ ಅವುಗಳ ವಿಡಿಯೋ ಹಂಚಿಕೊಳ್ಳುತ್ತಿದ್ದ. ಇದರಿಂದ ಇತರ ಗ್ಯಾಂಗ್​ಗಳಲ್ಲಿ ಭಯ ಹುಟ್ಟಿಸಿದ. ಮಾತ್ರವಲ್ಲ, ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದ ಅಧಿಕಾರಿಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದ. ಒಮ್ಮೆ ಈತನ ಗ್ಯಾಂಗ್ ಮೆಕ್ಸಿಕನ್ ಸೇನೆಯ ಹೆಲಿಕಾಪ್ಟರ್ ಅನ್ನೇ ರಾಕೆಟ್ ಲಾಂಚರ್ ಬಳಸಿ ಹೊಡೆದುರುಳಿಸಿತ್ತು.

ಮೆಕ್ಸಿಕೋದ ಸ್ಥಿತಿ ಏನಾಗಿದೆ?

ಎಲ್ ಮೆಂಚೊ ಹತನಾದ ಬೆನ್ನಲ್ಲೇ, ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಒಳಗೆ ಆತನ ಉತ್ತರಾಧಿಕಾರಿಯಾಗಲು ವಿವಿಧ ಬಣಗಳ ನಡುವೆ ರಕ್ತಪಾತ ನಡೆಯುತ್ತಿದೆ. ಮೆಂಚೊ ಹತನಾದ ಬೆನ್ನಲ್ಲೇ ಆತನ ಹಳೆಯ ಎದುರಾಳಿ ‘ಸಿನಾಲೋವಾ ಕಾರ್ಟೆಲ್’ (ಎಲ್ ಚಾಪೊನ ಗುಂಪು) ತನ್ನ ಕಳೆದುಹೋದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ದಾಳಿ ಮಾಡುತ್ತಿದೆ.

ಫೆಂಟಾನಿಲ್ ಹಾವಳಿ: ನಾಯಕ ಯಾರೇ ಇರಲಿ, ಡ್ರಗ್ಸ್ ಸಾಗಾಟ ಮಾತ್ರ ನಿಂತಿಲ್ಲ. ಚೀನಾದಿಂದ ಬರುವ ರಾಸಾಯನಿಕಗಳನ್ನು ಬಳಸಿ ಫೆಂಟಾನಿಲ್ ತಯಾರಿಸಿ ಅಮೆರಿಕಕ್ಕೆ ಕಳುಹಿಸುವ ವ್ಯವಹಾರ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಎಲ್ ಮೆಂಚೊ ಇಲ್ಲದಿದ್ದರೂ ಆತ ಕಟ್ಟಿದ ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್​ಎಂಬ ರಾಕ್ಷಸ ಸಂಘಟನೆ ಇಂದಿಗೂ ಮೆಕ್ಸಿಕೋ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಡ್ರಗ್ ವಾರ್​ನ ಭೀಕರ ಪರಿಣಾಮಗಳು

ಮೆಕ್ಸಿಕೋದಲ್ಲಿ 2006ರಿಂದ ಈವರೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಈ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಮತ್ತು 1 ಲಕ್ಷಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕಾರ್ಟೆಲ್​ಗಳ ವಿರುದ್ಧ ದನಿ ಎತ್ತುವ ಪತ್ರಕರ್ತರು ಮತ್ತು ಅವರ ಮಾತು ಕೇಳದ ರಾಜಕಾರಣಿಗಳನ್ನು ಗುರಿಯಾಗಿಸಿ ಕೊಲ್ಲಲಾಗುತ್ತದೆ. ಮೆಕ್ಸಿಕೋದಿಂದ ಅಮೆರಿಕಕ್ಕೆ ಸಾಗಣೆಯಾಗುವ ಫೆಂಟಾನಿಲ್ ಮಾದಕದ್ರವ್ಯವು ಅಮೆರಿಕದಲ್ಲಿ ಪ್ರತಿವರ್ಷ ಸಾವಿರಾರು ಯುವಕರ ಸಾವಿಗೆ ಕಾರಣವಾಗುತ್ತಿದೆ. ಅಮೆರಿಕವು ಮಾದಕದ್ರವ್ಯದ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅಲ್ಲಿ ಬೇಡಿಕೆ ಇರುವವರೆಗೆ ಇಲ್ಲಿ ಉತ್ಪಾದನೆ ಮತ್ತು ಸಾಗಾಣಿಕೆ ನಿಲ್ಲುವುದಿಲ್ಲ. ಮೆಕ್ಸಿಕೋದ ಕಾರ್ಟೆಲ್​ಗಳಿಗೆ ಬೇಕಾದ ಶಸ್ತ್ರಾಸ್ತ್ರಗಳಲ್ಲಿ ಶೇಕಡ 70ಕ್ಕಿಂತ ಹೆಚ್ಚು ಅಮೆರಿಕದಿಂದಲೇ ಅಕ್ರಮವಾಗಿ ಪೂರೈಕೆಯಾಗುತ್ತವೆ.

ಈ ಯುದ್ಧ ನಿಲ್ಲುತ್ತಿಲ್ಲವೇಕೆ?

ಕಾರ್ಟೆಲ್​ಗಳು ಸರ್ಕಾರಿ ಅಧಿಕಾರಿಗಳು, ಪೊಲೀಸರು ಮತ್ತು ಸೈನ್ಯದ ಉನ್ನತ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿ ತಮ್ಮ ಕಡೆಗೆ ಮಾಡಿಕೊಂಡಿರುತ್ತಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಎಲ್ ಮೆಂಚೊನ ಪತ್ತೆ ಮತ್ತು ಆತನ ಗೆಳತಿಯ ಮೂಲಕ ನಡೆದ ಈ ಕಾರ್ಯಾಚರಣೆಯ ವಿವರಗಳು ನಿಜಕ್ಕೂ ಯಾವುದೇ ರೋಚಕ ಸಿನಿಮಾಗಿಂತ ಕಡಿಮೆ ಇಲ್ಲ. ಮೆಕ್ಸಿಕನ್ ಸೇನೆ ಎಲ್ ಮೆಂಚೊನನ್ನು ನೇರವಾಗಿ ಪತ್ತೆಹಚ್ಚುವ ಬದಲು, ಆತನ ನಿಕಟವರ್ತಿಗಳ ಮೇಲೆ ಕಣ್ಣಿಟ್ಟಿತ್ತು. ಈ ವೇಳೆ ಆತನ ರೋಮ್ಯಾಂಟಿಕ್ ಪಾಟರ್°ರ್ (ಗೆಳತಿ) ಒಬ್ಬಳ ವಿಶ್ವಾಸಾರ್ಹ ಸಹಚರನನ್ನು ಅಧಿಕಾರಿಗಳು ಗುರುತಿಸಿದರು. ಈ ಸಹಚರನೇ ಆಕೆಯನ್ನು ಎಲ್ ಮೆಂಚೊ ಅಡಗಿದ್ದ ಸ್ಥಳಕ್ಕೆ ಕರೆದೊಯ್ಯುವ ಜವಾಬ್ದಾರಿ ಹೊತ್ತಿದ್ದ. ಫೆಬ್ರವರಿ 20ರಂದು, ಆ ಸಹಚರ ಎಲ್ ಮೆಂಚೊನ ಗೆಳತಿಯನ್ನು ಜಲಿಸ್ಕೋ ರಾಜ್ಯದ ಪರ್ವತ ಪ್ರದೇಶವಾದ ಟಪಲ್ಪಾಗೆ ಕರೆದುಕೊಂಡು ಹೋದ. ಅಲ್ಲಿನ ದಟ್ಟ ಕಾಡಿನ ಮಧ್ಯೆ ಇದ್ದ ಐಷಾರಾಮಿ ಕ್ಯಾಬಿನ್​ವೊಂದರಲ್ಲಿ ಎಲ್ ಮೆಂಚೊ ಅಡಗಿದ್ದ.

ಗೆಳತಿ ಫೆ.21ರವರೆಗೂ ಆತನ ಜತೆಗಿದ್ದಳು. ಆಕೆ ಆ ಸ್ಥಳದಿಂದ ಹೊರಬಂದ ತಕ್ಷಣವೇ, ಆ ಸ್ಥಳದಲ್ಲಿ ಎಲ್ ಮೆಂಚೊ ಇರುವುದು ಮತ್ತು ಆತನ ಜತೆ ಸುಮಾರು 10-12 ಮಂದಿ ಸಶಸ್ತ್ರ ಅಂಗರಕ್ಷಕರು ಮಾತ್ರ ಇರುವುದು ಗುಪ್ತಚರ ದಳಕ್ಕೆ ಖಚಿತವಾಯಿತು. ಅಮೆರಿಕದ ಗುಪ್ತಚರ ಸಂಸ್ಥೆಗಳು ಕೂಡ ಈ ಮಾಹಿತಿಯನ್ನು ಪುಷ್ಟೀಕರಿಸಿದವು. ಶನಿವಾರ ರಾತ್ರಿ ಮತ್ತು ಭಾನುವಾರದ ಮುಂಜಾನೆ ಮೆಕ್ಸಿಕನ್ ವಿಶೇಷ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ದಾಳಿ ವೇಳೆ ಎಲ್ ಮೆಂಚೊ ತಪ್ಪಿಸಿಕೊಳ್ಳಲು ಕಾಡಿನ ದಟ್ಟ ಪೊದೆಗಳ ನಡುವೆ ಅಡಗಿಕೊಳ್ಳಲು ಪ್ರಯತ್ನಿಸಿದ. ಆದರೆ ಸೇನೆ ಆತನನ್ನು ಸುತ್ತುವರಿಯಿತು. ಭೀಕರ ಗುಂಡಿನ ಚಕಮಕಿಯಲ್ಲಿ ಎಲ್ ಮೆಂಚೊ ತೀವ್ರವಾಗಿ ಗಾಯಗೊಂಡ. ಆತನನ್ನು ಬಂಧಿಸಿ ಹೆಲಿಕಾಪ್ಟರ್ ಮೂಲಕ ಮೆಕ್ಸಿಕೋ ಸಿಟಿಗೆ ಕರೆದೊಯ್ಯುವಾಗ ಆತ ಸಾವನ್ನಪ್ಪಿದ.