ಒಂದೇ ಒಂದು ಕೋಳಿ ಮೊಟ್ಟೆ ತಂದಿಟ್ಟ ಆಪತ್ತು!; ರಣರಂಗವಾದ ಜೆನೈದಾದಲ್ಲಿ ಆಗಿದ್ದೇನು..? ಬಾಂಗ್ಲಾ ಪ್ರಧಾನಿಗೆ ವಿದ್ಯಾರ್ಥಿ ಪಡೆಯಿಂದ ಧಮ್ಕಿ!
ಢಾಕಾ: ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಅಲ್ಲಿನ ರಾಜಕೀಯ ಪರಿಸ್ಥಿತಿ ಮತ್ತೆ ಉಗ್ರರೂಪಕ್ಕೆ ತಿರುಗಿದೆ. 2024ರ ಭೀಕರ ರಕ್ತಪಾತ ಮತ್ತು ಮೀಸಲಾತಿ ವಿರೋಧಿ ವಿದ್ಯಾರ್ಥಿ ದಂಗೆಯ ಮೂಲಕ ಶೇಖ್ ಹಸೀನಾ ಸರ್ಕಾರವನ್ನು ದೇಶದಿಂದಲೇ ಓಡಿಸಿದ್ದ ವಿದ್ಯಾರ್ಥಿ ನಾಯಕರ ಒಕ್ಕೂಟ, ಈಗ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ನೇರ ಯುದ್ಧದ(Jhenaidah Clash) ಎಚ್ಚರಿಕೆ ನೀಡಿದೆ. ಆಡಳಿತಾರೂಢ ಸರ್ಕಾರಕ್ಕೆ ಹಿಂಸಾಚಾರವೇ ರಾಜಕೀಯ ಅಸ್ತ್ರವಾಗಬೇಕಿದ್ದರೆ, ನೆನಪಿರಲಿ, ಹಿಂಸೆಯಲ್ಲಿ ನಮ್ಮನ್ನು ಮೀರಿಸಲು ಇಡೀ ದೇಶದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಪಕ್ಷದ ಪ್ರಮುಖ ನಾಯಕರು ಬಹಿರಂಗವಾಗಿ ಗುಡುಗಿದ್ದಾರೆ.
ಈ ಬಗ್ಗೆ ಬಾಂಗ್ಲಾದೇಶದ ಜೆನೈದಾ ನಗರದಲ್ಲಿ ಹೊಸದಾಗಿ ರಚನೆಯಾಗಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ಮುಖ್ಯಸ್ಥರ ಮೇಲೆ ನಡೆದ ಭೀಕರ ಹಲ್ಲೆಯ ನಂತರ ಇಡೀ ದೇಶಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೇನೆ ಮತ್ತು ಪೊಲೀಸರನ್ನು ಗಡಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜಮಾವಣೆ ಮಾಡಲಾಗಿದೆ.
"ಹಸೀನಾ ಮಾಡಿದ ತಪ್ಪನ್ನು ತಾರಿಕ್ ರೆಹಮಾನ್ ಮಾಡಬೇಡಿ!"
ನ್ಯಾಷನಲ್ ಸಿಟಿಜನ್ ಪಾರ್ಟಿಯ ಅಧಿಕೃತ ವಕ್ತಾರ ಮತ್ತು ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಮಾಜಿ ಸಲಹೆಗಾರ ಆಸಿಫ್ ಮಹಮೂದ್ ಶೋಜಿಬ್ ಭುಯಾನ್ ಮಾಧ್ಯಮಗಳ ಮುಂದೆ ಹೊಸ ಸರ್ಕಾರದ ವಿರುದ್ಧ ಆಕ್ರೋಶದ ಜ್ವಾಲೆ ಉಗುಳಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಎಸಗಲು ಬಂದರೆ, ಈ ಯುದ್ಧವು ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಸಿದ್ಧಾಂತದ ವಿರುದ್ಧ ನಡೆಯುವುದಿಲ್ಲ. ಬದಲಿಗೆ ಇಡೀ ಹೊಸ ತಲೆಮಾರಿನ ವಿರುದ್ಧವೇ ನಡೆಯಲಿದೆ. ಅಂದು ಶೇಖ್ ಹಸೀನಾ ಇದೇ ಯುವ ಪೀಳಿಗೆಯನ್ನು ಎದುರು ಹಾಕಿಕೊಂಡು ಮಹಾ ತಪ್ಪು ಮಾಡಿದ್ದರು ಮತ್ತು ದೇಶ ಬಿಟ್ಟು ಓಡುವಂತಾಯಿತು. ಪ್ರಧಾನಿ ತಾರಿಕ್ ರೆಹಮಾನ್ ಆ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಕೋಳಿ ಮೊಟ್ಟೆ ಎಸೆತದ ಗಲಾಟೆ: ರಣರಂಗವಾದ ಜೆನೈದಾ ನಗರ!
ಸ್ಥಳೀಯ ಮೂಲಗಳ ಪ್ರಕಾರ, ಜೆನೈದಾ ನಗರದಲ್ಲಿ ನ್ಯಾಷನಲ್ ಸಿಟಿಜನ್ ಪಾರ್ಟಿಯ ಮುಖ್ಯ ಸಂಯೋಜಕ ನಾಸಿರುದ್ದೀನ್ ಪಟ್ವಾರಿ ಅವರ ಕಾರ್ಯಕ್ರಮ ನಡೆಯುತ್ತಿದ್ದಾಗ, BNP ಬೆಂಬಲಿಗರು ಎನ್ನಲಾದ ದುಷ್ಕರ್ಮಿಗಳು ಅವರ ಮೇಲೆ ಕೋಳಿ ಮೊಟ್ಟೆಗಳನ್ನು ಎಸೆದು ದಾಳಿ ನಡೆಸಿದ್ದಾರೆ. ಇದು ನೋಡನೋಡುತ್ತಿದ್ದಂತೆಯೇ ಎರಡು ಬಣಗಳ ನಡುವೆ ಭೀಕರ ಸಶಸ್ತ್ರ ಸಂಘರ್ಷಕ್ಕೆ ಕಾರಣವಾಯಿತು. ಕಲ್ಲು ತೂರಾಟ, ಕಸಾಯಿ ಕತ್ತಿ ಮತ್ತು ಮಾರಕಾಸ್ತ್ರಗಳ ಪ್ರದರ್ಶನದಿಂದಾಗಿ ಇಡೀ ನಗರ ರಣರಂಗವಾಗಿ ಮಾರ್ಪಟ್ಟಿದೆ. ಹಲ್ಲೆಕೋರರನ್ನು ತಕ್ಷಣವೇ ಬಂಧಿಸದಿದ್ದರೆ ದೇಶಾದ್ಯಂತ ಮತ್ತೆ ದಂಗೆ ಏಳಬೇಕಾಗುತ್ತದೆ ಎಂದು ಎನ್‌ಸಿಪಿ ನಾಯಕರು ಎಚ್ಚರಿಸಿದ್ದಾರೆ.
ಚುನಾವಣಾ ಸೋಲನ್ನು ಒಪ್ಪದ 'ಕ್ರಾಂತಿಕಾರಿ' ವಿದ್ಯಾರ್ಥಿಗಳು!
2024ರ ದಂಗೆಯ ನಂತರ ಇಡೀ ದೇಶವನ್ನು 18 ತಿಂಗಳುಗಳ ಕಾಲ ಮುಹಮ್ಮದ್ ಯೂನಸ್ ಅವರ ಉಸ್ತುವಾರಿ ಸರ್ಕಾರ ಮುನ್ನಡೆಸಿತ್ತು. ಈ ಅವಧಿಯಲ್ಲಿ ಬಾಂಗ್ಲಾದೇಶದ ಬೀದಿಗಳಲ್ಲಿ ಹಿಂಸಾತ್ಮಕ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡಿದ್ದವು ಮತ್ತು ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ದಾಳಿಗಳನ್ನು ನಡೆಸಲಾಗಿತ್ತು. ಆದರೆ, ಇತ್ತೀಚೆಗೆ (2026 ರಲ್ಲಿ) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶದ ಜನತೆ ಈ ವಿದ್ಯಾರ್ಥಿ ನಾಯಕರ 'ನ್ಯಾಷನಲ್ ಸಿಟಿಜನ್ ಪಾರ್ಟಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ.
ಪ್ರಧಾನಿ ತಾರಿಕ್ ರೆಹಮಾನ್ ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ವಿರೋಧ ಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯಲು ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ವಿದ್ಯಾರ್ಥಿ ನಾಯಕರು ಸೋಲನ್ನು ಅರಗಿಸಿಕೊಳ್ಳಲಾಗದೆ ಮತ್ತೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಎನ್‌ಪಿ ನಾಯಕರು ಪ್ರತಿಯಾಗಿ ಆರೋಪಿಸಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತ್ತೆ ಹಿಂಸಾಚಾರದ ಹಾದಿ ಹಿಡಿದಿರುವ ಈ ವಿದ್ಯಾರ್ಥಿ ಪಡೆಯನ್ನು ಹತ್ತಿಕ್ಕಲು ಹೊಸ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಬಾಂಗ್ಲಾದಲ್ಲಿ ಮತ್ತೊಂದು ಅಂತರ್ಯುದ್ಧದ ಭೀತಿ ಎದುರಾಗಿದೆ,(ಏಜೆನ್ಸೀಸ್).