ಖಮೇನಿ ಅಂತಿಮ ದರ್ಶನದಲ್ಲಿ ಭಾವುಕ ದೃಶ್ಯ: ಸರ್ವೋಚ್ಚ ನಾಯಕನ ಮೊಮ್ಮಗಳ ಶವಪೆಟ್ಟಿಗೆ ಕಂಡು ಮರುಗಿದ ಜಗತ್ತು! Ayatollah Ali Khamenei  
ವಿದೇಶ

ಖಮೇನಿ ಅಂತಿಮ ದರ್ಶನದಲ್ಲಿ ಭಾವುಕ ದೃಶ್ಯ: ಸರ್ವೋಚ್ಚ ನಾಯಕನ ಮೊಮ್ಮಗಳ ಶವಪೆಟ್ಟಿಗೆ ಕಂಡು ಮರುಗಿದ ಜಗತ್ತು! Ayatollah Ali Khamenei

ಪ್ರಮುಖ ಮುಖ್ಯಾಂಶಗಳು

  • ಆಯತೊಲ್ಲಾ ಅಲಿ ಖಮೇನಿ ಅಂತ್ಯಸಂಸ್ಕಾರದಲ್ಲಿ ಕಣ್ಣೀರು ತರಿಸಿದ ದೃಶ್ಯ
  • ಸರ್ವೋಚ್ಚ ನಾಯಕನ ಪಕ್ಕದಲ್ಲೇ ಇರಿಸಲಾಗಿತ್ತು 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ
  • ಹಸುಗೂಸಿನ ಶವಪೆಟ್ಟಿಗೆ ಕಂಡು ಕರಗಿದ ನೆರೆದಿದ್ದವರ ಹೃದಯ
  • ಇರಾನ್ ಸರ್ವೋಚ್ಚ ನಾಯಕನ ಅಂತಿಮ ಯಾತ್ರೆಯಲ್ಲಿ ತೇವಗೊಂಡ ಕಣ್ಣಾಲಿಗಳು
ಟೆಹರಾನ್: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ( Ayatollah Ali Khamenei ) ಅವರ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರದ ವಿಧಿವಿಧಾನಗಳಲ್ಲಿ ಭಾಗಿಯಾಗಲು ನಿನ್ನೆಯಿಂದಲೇ ಸಾವಿರಾರು ಜನರು ಟೆಹರಾನ್‌ಗೆ ಹರಿದುಬರುತ್ತಿದ್ದಾರೆ. ಈ ಅಂತಿಮ ದರ್ಶನದ ವೇಳೆ ಖಮೇನಿ ಹಾಗೂ ಅವರ ಕುಟುಂಬಸ್ಥರ ಮೃತದೇಹಗಳ ಪಕ್ಕದಲ್ಲೇ ಇರಿಸಲಾಗಿದ್ದ ಒಂದು ಪುಟ್ಟ ಮಗುವಿನ ಶವಪೆಟ್ಟಿಗೆಯು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ. ದಾಳಿಗೆ ಬಲಿಯಾದ ಖಮೇನಿ ಅವರ ಕೇವಲ 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೊಲ್ಪಾಯೆಗಾನಿ ಅವರ ಪುಟ್ಟ ಶವಪೆಟ್ಟಿಗೆಯು ಅಂತಿಮ ನಮನ ಸಲ್ಲಿಸಲು ಬಂದ ಸಾರ್ವಜನಿಕರ ಹೃದಯವನ್ನು ಹಿಂಡುವಂತಿತ್ತು.
ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಾನ್‌ನ ಇಮಾಮ್ ಖಮೇನಿ ಗ್ರ್ಯಾಂಡ್ ಮಸೀದಿಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಫೆಬ್ರವರಿ 28ರಂದು ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾದ ಆಯತೊಲ್ಲಾ ಅಲಿ ಖಮೇನಿ ಹಾಗೂ ಅವರ ಕುಟುಂಬಸ್ಥರ ಶವಪೆಟ್ಟಿಗೆಗಳನ್ನು ಇರಾನ್‌ನ ರಾಷ್ಟ್ರಧ್ವಜದಿಂದ ಹೊದಿಸಿ ಅಂತಿಮ ದರ್ಶನದ ವೇದಿಕೆಗೆ ತರಲಾಯಿತು. ದಾಳಿಗೆ ಬಲಿಯಾದ ಖಮೇನಿ ಅವರ ಪುಟ್ಟ ಮೊಮ್ಮಗಳು ಜಹ್ರಾ ಅವರ ಸುಂದರವಾದ ಭಾವಚಿತ್ರವನ್ನು ಆಕೆಯ ಶವಪೆಟ್ಟಿಗೆಯ ಪಕ್ಕದಲ್ಲೇ ಇರಿಸಲಾಗಿತ್ತು. ಈ ದೃಶ್ಯವು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಸಾವಿರಾರು ಸಾರ್ವಜನಿಕರ ಕಣ್ಣುಗಳನ್ನು ತೇವಗೊಳಿಸಿತು.
ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯೂ ಸಹ ಆ ಪುಟ್ಟ ಮಗುವಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದು, "ಹುತಾತ್ಮ ಜಹ್ರಾ ಮೊಹಮ್ಮದಿ ಗೊಲ್ಪಾಯೆಗಾನಿ, ಇಸ್ಲಾಮಿಕ್ ಕ್ರಾಂತಿಯ ಹುತಾತ್ಮ ನಾಯಕ ಆಯತೊಲ್ಲಾ ಖಮೇನಿ ಅವರ ಕಿರಿಯ ಮೊಮ್ಮಗಳಾದ ಈಕೆಗೆ ಅವರೊಂದಿಗೇ ವೀರಮರಣ ಹೊಂದುವ ಸೌಭಾಗ್ಯ ಸಿಕ್ಕಿದೆ ಎಂದು ಕಂಬನಿ ಮಿಡಿದಿದೆ.
ಆಯತೊಲ್ಲಾ ಅಲಿ ಖಮೇನಿ ಅವರ ರಾಷ್ಟ್ರಧ್ವಜ ಹೊದಿಸಿದ ಶವಪೆಟ್ಟಿಗೆಯನ್ನು ಟೆಹರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಇರಾನ್‌ನ ಹಿರಿಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ವಿದೇಶಿ ಗಣ್ಯರು ಬಂದು ಅಂತಿಮ ಗೌರವ ಸಲ್ಲಿಸಿದರು. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಕಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇರಾನ್ ಸರ್ಕಾರಿ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಕಪ್ಪು ವಸ್ತ್ರ ಧರಿಸಿದ ಸಹಸ್ರಾರು ಶೋಕತಪ್ತರು ಪ್ರಾರ್ಥನೆಗಾಗಿ ನೆರೆದಿರುವುದು ಕಂಡುಬಂದಿದ್ದು, ಅಲ್ಲಿನ ಸಾಂಪ್ರದಾಯಿಕ ನಂಬಿಕೆಯಂತೆ ಪುಣ್ಯ ಅಥವಾ ಆಶೀರ್ವಾದ ಪಡೆಯುವ ಸಲುವಾಗಿ ಅನೇಕರು ತಮ್ಮ ಸ್ಕಾರ್ಫ್‌ಗಳು ಹಾಗೂ ವೈಯಕ್ತಿಕ ವಸ್ತುಗಳನ್ನು ಶವಪೆಟ್ಟಿಗೆಗೆ ಮುಟ್ಟಿಸಿ ತರುವಂತೆ ಅಲ್ಲಿನ ಸೇವಕರತ್ತ ಎಸೆಯುತ್ತಿದ್ದರು.
ಇದಾದ ನಂತರ, ಶವಪೆಟ್ಟಿಗೆಯ ಮೇಲೆ ಇರಾಕ್‌ನ ಕರ್ಬಲಾದಲ್ಲಿರುವ ಇಮಾಮ್ ಹುಸೇನ್ ದರ್ಗಾದಿಂದ ತರಲಾದ "ಯಾ ಹುಸೇನ್" ಎಂದು ಬರೆಯಲಾದ ಕೆಂಪು ಧ್ವಜವನ್ನು ಹೊದಿಸಲಾಯಿತು. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ವೀರಮರಣವನ್ನು ಸ್ಮರಿಸುವ ಈ ಶಿಯಾ ಸಂಪ್ರದಾಯದ ಧ್ವಜವು, ಅನ್ಯಾಯವಾಗಿ ಕೊಲ್ಲಲ್ಪಟ್ಟವರ ರಕ್ತದ ಸಂಕೇತ ಹಾಗೂ ಶಿಯಾ ಸಂಪ್ರದಾಯದಲ್ಲಿ ಪ್ರತಿಕಾರ ಅಥವಾ ಸೇಡಿನ ಕರೆಯ ಸಂಕೇತವಾಗಿದೆ.
ಖಮೇನಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯಲಿದ್ದು, ಪಾರ್ಥಿವ ಶರೀರವನ್ನು ಇರಾನ್ ಹಾಗೂ ನೆರೆಯ ಇರಾಕ್‌ನ ವಿವಿಧ ನಗರಗಳಿಗೆ ಕೊಂಡೊಯ್ಯಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಸಹಸ್ರಾರು ಶೋಕತಪ್ತರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದರಿಂದ ಟೆಹರಾನ್‌ನಾದ್ಯಂತ ವ್ಯಾಪಕ ರಸ್ತೆ ಬಂದ್ ಹಾಗೂ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ, ತಮ್ಮ ತಂದೆಯ ನಿಧನದ ನಂತರ ಇರಾನ್‌ನ ನೂತನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿರುವ ಆಯತೊಲ್ಲಾ ಮುಜ್ತಬಾ ಖಮೇನಿ ಅವರು ಭದ್ರತಾ ಕಾರಣಗಳಿಗಾಗಿ ಈ ಅಂತ್ಯಸಂಸ್ಕಾರದ ಕಾರ್ಯಕ್ರಮಗಳಿಂದ ದೂರ ಉಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇರಾನ್ ಸಾರ್ವಜನಿಕರಿಗೆ ತಮ್ಮ ನಾಯಕನಿಗೆ ಅಂತಿಮ ಗೌರವ ಸಲ್ಲಿಸಲು ಇಂದಿನಿಂದ ಎರಡು ದಿನಗಳ ಕಾಲ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಸೋಮವಾರದಂದು ಟೆಹರಾನ್‌ನಲ್ಲಿ ಬೃಹತ್ ಶೋಕ ಮೆರವಣಿಗೆ ನಡೆದ ನಂತರ, ಖಮೇನಿ ಅವರ ಪಾರ್ಥಿವ ಶರೀರವನ್ನು ನೆರೆಯ ದೇಶವಾದ ಇರಾಕ್‌ನ ಐದು ಪ್ರಮುಖ ನಗರಗಳಿಗೆ ಕೊಂಡೊಯ್ಯಲಾಗುವುದು. ತದನಂತರ ಗುರುವಾರದಂದು ಅವರ ಸ್ವಗ್ರಾಮವಾದ ಮಶ್ಹದ್‌ನಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಸಂಸ್ಕಾರದ ವಿಧಿವಿಧಾನಗಳು ನೆರವೇರಲಿವೆ, (ಏಜೆನ್ಸೀಸ್​).