ಸಿಡ್ನಿ ಉಗ್ರರ ದಾಳಿಯ ಚಿತ್ರಗಳು
- ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ತಂದೆ-ಮಗನ ಗುಂಡಿನ ದಾಳಿ
- ಓರ್ವ ಆರೋಪಿ ಸಾವು, ಮತ್ತೊಬ್ಬ ಆಸ್ಪತ್ರೆ ಪಾಲು
- ಆರೋಪಿ ಪುತ್ರನನ್ನು ನೆನೆದು ತಾಯಿ ಕಣ್ಣೀರು
- ಗುಂಡಿನ ದಾಳಿಯಲ್ಲಿ 16 ಮಂದಿ ಸಾವು
ಆಸ್ಟ್ರೇಲಿಯಾ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇದುವರೆಗೆ ಒಟ್ಟು 16 ಮಂದಿ ಮೃತಪಟ್ಟಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 29ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗುಂಡು ಹಾರಿಸಿದ ಇಬ್ಬರು ಉಗ್ರರ ಪೈಕಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ. ಪಾಕಿಸ್ತಾನಿ ಮೂಲದ ಇಬ್ಬರು ಉಗ್ರರ ಗುರುತನ್ನು ಪತ್ತೆಹಚ್ಚಿರುವ ಸಿಡ್ನಿ ಪೊಲೀಸರು, ಅವರ ಹಿಂದಿರುವ ಇಂಚಿಂಚೂ ಮಾಹಿತಿಯನ್ನು ಬಟಾಬಯಲು ಮಾಡಲು ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಪುತ್ರನ ನೆನೆದು ತಾಯಿ ಭಾವುಕ
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಹತ್ಯಾಕಾಂಡ ನಡೆಸಿದ ಆರೋಪಿಗಳನ್ನು ತಂದೆ-ಮಗ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಪೈಕಿ ತಂದೆ ಮೃತಪಟ್ಟಿದ್ದರೆ, ನವೀದ್ ಅಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗನ ಬಂಧನದ ಬೆನ್ನಲ್ಲೇ 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪತ್ರಿಕೆಗೆ ಪ್ರತಿಕ್ರಿಯಿಸಿರುವ ನವೀದ್ ತಾಯಿ ವೆರೀನಾ, "ನನ್ನಂತಹ ಮಗನನ್ನು ಪಡೆಯಲು ಇತರೆ ತಾಯಂದಿರು ಬಯಸುತ್ತಾರೆ. ಅಷ್ಟು ಒಳ್ಳೆಯ ಪುತ್ರ ಅವನು. ಆದರೆ, ಈ ವಿಷಯ ಕೇಳಿ ತುಂಬ ನೋವಾಗಿದೆ. ನನ್ನಿಂದ ಇದನ್ನು ನಂಬಲು ಕಷ್ಟಸಾಧ್ಯ" ಎಂದಿದ್ದಾರೆ.
"ಈ ದಾಳಿಗೆ ಕೆಲವು ಗಂಟೆಗಳ ಮೊದಲು ಅವನು ನನ್ನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದ. ಈಜಲು ಹೋಗಿದ್ದೆ, ಸ್ಕೂಬಾ ಡೈವಿಂಗ್ ಮಾಡಿದೆ. ಈಗ ತಿಂಡಿಗೆ ಹೋಗ್ತಿದ್ದೀವಿ ಅಂತೆಲ್ಲ ಹೇಳಿದ್ದ. ಅವನಿಗೆ ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು, ಕೆಟ್ಟ ಜಾಗಗಳಿಗೆ ಹೋಗುವ ಅಭ್ಯಾಸವಿಲ್ಲ. ಕೆಲಸ ಮುಗಿದ ತಕ್ಷಣ ಮನೆಗೆ ಬಂದು ಸೇರುತ್ತಿದ್ದೆ. ಮಗ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಸಂಗತಿ ನಿಜಕ್ಕೂ ಅರಗಿಸಿಕೊಳ್ಳಲಾಗುತ್ತಿಲ್ಲ" ಎಂದು ವೆರೀನಾ ದುಃಖ ತೋಡಿಕೊಂಡಿದ್ದಾರೆ.
ಯಾರೀ ನವೀದ್ ಅಕ್ರಮ್?
ಬಹು ವರದಿಗಳ ಪ್ರಕಾರ, ನವೀದ್ ಅಕ್ರಮ್ ಸಿಡ್ನಿಯ ಅಲ್-ಮುರಾದ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿ. ಗುಂಡಿನ ದಾಳಿಯಲ್ಲಿ ಭಾಗಿಯಾದ ಇಬ್ಬರು ಶೂಟರ್ಗಳ ಪೈಕಿ ಈತನೂ ಒಬ್ಬ. ಇವರ ಹಿಂದಿರುವ ಕಾಣದ ಕೈಗಳು ಯಾವುದು? ಯಾರೆಲ್ಲ ಇದ್ದಾರೆ? ಏನೆಲ್ಲ ಸಂಚು ಇತ್ತು? ಎಂಬುದರ ಸಂಪೂರ್ಣ ತನಿಖೆಗೆ ಇದೀಗ ಸಿಡ್ನಿ ಪೊಲೀಸರು ಮುಂದಾಗಿದ್ದಾರೆ(ಏಜೆನ್ಸೀಸ್).