- ಕಾಂಬೋಡಿಯಾ ಮೇಲೆ ಥೈಲ್ಯಾಂಡ್ ವಾಯುದಾಳಿ
- ಒರ್ವ ಥೈ ಸೈನಿಕ ಸಾವು, ಏಳು ಜನಕ್ಕೆ ಗಾಯ
- ಟ್ರಂಪ್ ಮಧ್ಯಸ್ತಿಕೆಯ ಒಪ್ಪಂದ ನೀರಿನಲ್ಲಿ ಹೋಮ
Thailand - Cambodia War : ಆಗ್ನೇಯ ಏಷ್ಯಾ ಪ್ರ್ಯಾಂತದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದದೆ. ಪರಿಣಾಮ ಸೋಮವಾರ ಥೈಲ್ಯಾಂಡ್, ಕಾಂಬೋಡಿಯಾದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಎರಡು ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ರೂಪಿಸಲಾದ ಶಾಂತಿ ಒಪ್ಪಂದವು ಕುಸಿದು ಬಿದ್ದಿದೆ. ವಾರಗಳ ಕಾಲ ಎರಡೂ ದೇಶದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೂರಿತ್ತು, ಆದರೆ ಇಂದು ಮುಂಜಾನೆ ತಮ್ಮ ಮೇಲೆ ವಿರೋಧಿ ದೇಶವು ದಾಳಿ ಮಾಡಿದೆ ಎಂದು ಉಭಯ ದೇಶಗಳು ಆರೋಪಿಸಿವೆ.
ಥೈಲ್ಯಾಂಡ್ನಿಂದ ವಾಯುದಾಳಿ
ಥೈಲ್ಯಾಂಡ್ನ ವಾಯುದಾಳಿಗಳು ಕಾಂಬೋಡಿಯನ್ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿರಿಸಿಕೊಂಡು ನಡೆದಿದೆ. ಇದರಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದಾನೆ. ತನ್ನ ಏಳು ಜನ ಸೈನಿಕರು ಗಾಯಗೊಂಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಥೈಲ್ಯಾಂಡ್ ಸೇನೆ ಹೇಳಿದೆ. ಕಾಂಬೋಡಿಯ ನಮ್ಮ ಮೇಲೆ ದಾಳಿ ಮಾಡಲು ಫಿರಂಗಿ ಮತ್ತು ಮಾರ್ಟರ್ ಲಾಂಚರ್‌ಗಳನ್ನು ಬಳಸುತ್ತಿದೆ. ಆದ್ದರಿಂದ ನಾವು ಚಾಂಗ್ ಆನ್ ಮಾ ಪಾಸ್ ಪ್ರದೇಶದಲ್ಲಿ ದಾಳಿ ನಡೆಸಲು ಸರ್ವ ಸಿದ್ಧವಾಗಿದ್ದೇವೆ ಎಂದು ಥೈಲ್ಯಾಂಡ್ ಸೇನಾ ವಕ್ತಾರ ಮೇಜರ್ ಜನರಲ್ ವಿಂಥೈ ಸುವಾರಿ ಹೇಳಿಕೆ ನೀಡಿದ್ದಾರೆ.
ಥೈಲ್ಯಾಂಡ್ ಸುಳ್ಳು ಹೇಳುತ್ತಿದೆ
ಥೈಲ್ಯಾಂಡ್ ತಮ್ಮ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದೆ ಮತ್ತು ಅದು ಮಾಡಿರುವ ದಾಳಿಗೆ ನಾವು ತಕ್ಕ ಉತ್ತರವನ್ನು ನೀಡುತ್ತೆವೆಂದು ಕಾಂಬೋಡಿಯಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ತಿಳಿಸಿದೆ. ಕಾಂಬೋಡಿಯಾ ರಕ್ಷಣಾ ವಕ್ತಾರ ಮಾಲಿ ಸೋಚಿಯಾಟಾ ಥಾಯ್ ಪಡೆಗಳು ಮನೆಗಳಿಗೆ ಸುಟ್ಟು, ಗಾಯಗಳನ್ನುಂಟು ಮಾಡಿ, ಉತ್ತರ ಪ್ರಾಂತ್ಯಗಳಾದ ಒಡ್ಡರ್ ಮೀಂಚೆ ಮತ್ತು ಪ್ರಿಯಾ ವಿಹಿಯರ್‌ನಲ್ಲಿರುವ ಗಡಿ ಹಳ್ಳಿಗಳಿಂದ ಜನರನ್ನು ಪಲಾಯನ ಮಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಟ್ರಂಪ್ ಕದನ ವಿರಾಮ ಒಪ್ಪಂದ
ಈ ವರ್ಷದ ಆರಂಭದಲ್ಲಿ ನಡೆದ ಅತ್ಯಂತ ಗಂಭೀರ ಹೋರಾಟದ ನಂತರ, ಟ್ರಂಪ್ ಜುಲೈ 28 ರಂದು ಎರಡೂ ಕಡೆಯ ನಾಯಕರೊಂದಿಗೆ ಚರ್ಚಿಸಿ ಕದನ ವಿರಾಮ ಘೋಷಣೆಗೆ ಕಾರಣವಾಗಿದ್ದರು. ನಂತರ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಅಕ್ಟೋಬರ್ ಅಂತ್ಯದಲ್ಲಿ ಕೌಲಾಲಂಪುರದಲ್ಲಿ ಟ್ರಂಪ್ ಮತ್ತು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಸಾಕ್ಷಿಯಾದ ಸಮಾರಂಭದಲ್ಲಿ ವಿಸ್ತೃತ ಕದನ ವಿರಾಮ ಘೋಷಣೆಗೆ ಸಹಿ ಹಾಕಿದ್ದರು.
ಸೋಮವಾರ ಇಬ್ರಾಹಿಂ ಅವರು ಕಾಂಬೋಡಿಯನ್ ಮತ್ತು ಥಾಯ್ ಪಡೆಗಳ ನಡುವಿನ ಸಶಸ್ತ್ರ ಘರ್ಷಣೆಗಳ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ಕದನ ವಿರಾಮ ಘೋಷಣೆಯನ್ನು ಟ್ರಂಪ್ ತನ್ನ ಪ್ರಮುಖ ರಾಜತಾಂತ್ರಿಕ ವಿಜಯವೆಂದು ಮತ್ತು ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ್ದಾನೆ ಎಂದು ಎಲ್ಲೇಡೆ ಹೇಳಿಕೊಂಡು ತಿರುಗುತ್ತದ್ದ ವೇಳೆ ಈ ದಾಳಿಯು ಅಮೆರಿಕಾ ಅಧ್ಯಕ್ಷನ ಮಾತಿಗೆ ಯಾವುದೇ ಬೆಲೆಯಿಲ್ಲ ಎನ್ನುವಂತಾಗಿದೆ. (ಏಜೆನ್ಸೀಸ್).