- ಕಾಂಬೋಡಿಯಾದಲ್ಲಿರುವ ವಿಷ್ಣುವಿನ ಪ್ರತಿಮೆಯನ್ನು ಕೆಡವಿದ ಥಾಯ್ ಸೈನ್ಯ
- ಈ ಘಟನೆಗೆ ಕಳವಳ ವ್ಯಕ್ತ ಪಡಿಸಿದ ಭಾರತೀಯ ವಿದೇಶಾಂಗ ಇಲಾಖೆ
- ಆರು ತಿಂಗಳಿಂದ ನಿರಂತರ ಸಂಘರ್ಷದಲ್ಲಿರುವ ಕಾಂಬೋಡಿಯಾ ಮತ್ತು ಥೈಲ್ಯಾಂಡ್
ಕಾಂಬೋಡಿಯಾ: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಇತ್ತೀಚಿನ ದಿನಗಳಲ್ಲಿ ಗಡಿ ಸಂಘರ್ಷ ತಾರಕಕ್ಕೇರುತ್ತಿದ್ದು. ಡಿ. 22 ರಂದು ಥಾಯ್ ಸೈನ್ಯವು ಕಾಂಬೋಡಿಯಾದಲ್ಲಿರುವ ವಿಷ್ಣುವಿನ ಪ್ರತಿಮೆ (Lord Vishnu Statue) ಯನ್ನು ನಾಶಪಡಿಸಿದೆ ಎಂದು ವರದಿಯಾಗಿದೆ. ಕೆಡವಲಾದ ಪ್ರತಿಮೆ 30 ಅಡಿ ಎತ್ತರವಿದೆ ಎಂದು ಹೇಳಲಾಗಿದೆ.
ತನ್ನ ಆಡಳಿತವಿರುವ ಪ್ರದೇಶದಲ್ಲಿ ನೆಲೆಗೊಂಡಿದ್ದ ಪ್ರತಿಮೆಯನ್ನು ಥೈಲ್ಯಾಂಡ್ ಅಕ್ರಮವಾಗಿ ಕೆಡವಿದೆ ಎಂದು ಕಾಂಬೋಡಿಯಾ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಘಟನೆಗೆ ಭಾರತ ಕಳವಳ ವ್ಯಕ್ತಪಡಿಸುತ್ತಾ, ಪ್ರತಿಮೆಯ ನಾಶವು ಪ್ರಪಂಚದಾದ್ಯಂತದ ಇರುವ ವಿಷ್ಣು ಭಕ್ತರ ಭಾವನೆಗಳನ್ನು ನೋಯಿಸಿದಂತಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಆರು ತಿಂಗಳಿಂದ ನಿರಂತರ ಸಂಘರ್ಷ
ಪ್ರಿಯಾ ವಿಹಾರ್ ದೇವಾಲಯ ಪ್ರದೇಶದ ವಿವಾದದಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಕಳೆದ ಆರು ತಿಂಗಳಿನಿಂದ ಸಿಲುಕಿಕೊಂಡಿದ್ದು, ಜೂನ್‌ನಲ್ಲಿ ಎರಡೂ ದೇಶಗಳ ನಡುವೆ ಘರ್ಷಣೆ ಪ್ರಾರಂಭವಾಯಿತು. ನಂತರ ಟ್ರಂಪ್ ಅವರ ಮಧ್ಯಸ್ಥಿಕೆಯ ನಂತರ ಕದನ ವಿರಾಮವನ್ನು ಘೋಷಿಸಿದ್ದವು. ಆದರೆ ಡಿಸೆಂಬರ್‌ನಲ್ಲಿ ಸಂಘರ್ಷ ಮತ್ತೆ ಭುಗಿಲೆದ್ದಿತು. ಇಲ್ಲಿಯವರೆಗೆ, ಸಂಘರ್ಷವು 40 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಯುದ್ಧ ಏಕೆ ಪ್ರಾರಂಭವಾಯಿತು ?
ಮೇ 28 ರಂದು, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಲಾವೋಸ್ ಗಡಿಗಳು ಸಂಧಿಸುವ ಸ್ಥಳವಾದ ಎಮರಾಲ್ಡ್ ತ್ರಿಕೋನದಲ್ಲಿ ಎರಡು ದೇಶಗಳ ಸೈನ್ಯಗಳ ನಡುವಿನ ಘರ್ಷಣೆಯಲ್ಲಿ ಕಾಂಬೋಡಿಯನ್ ಸೈನಿಕನೊಬ್ಬ ಸಾವನ್ನಪ್ಪಿದನು. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಎರಡೂ ಈ ಪ್ರದೇಶವನ್ನು ತಮ್ಮದಾಗಿಸಿಕೊಂಡವು.
ಕಾಂಬೋಡಿಯನ್ ಮಿಲಿಟರಿಯ ಪ್ರಕಾರ, ಥಾಯ್ ಪಡೆಗಳು ಗಡಿ ಪ್ರದೇಶದ ಬಳಿಯಿರುವ ಟಾ ಮುಯೆನ್ ಥಾಮ್ ದೇವಾಲಯವನ್ನು ಸುತ್ತುವರೆದು ಅದರ ಸುತ್ತಲೂ ಮುಳ್ಳುತಂತಿಯನ್ನು ನಿರ್ಮಿಸಿದವು. ನಂತರ ಅವರು ಡ್ರೋನ್‌ಗಳನ್ನು ಹಾರಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಹೇಳುತ್ತವೆ.
ಥಾಯ್ ಮಿಲಿಟರಿಯ ಪ್ರಕಾರ, ಕಾಂಬೋಡಿಯನ್ ಪಡೆಗಳು ಮೊದಲು ಸಂಘರ್ಷವನ್ನು ಪ್ರಾರಂಭಿಸಿದವು. ಮಾತುಕತೆಗಳ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಥೈಲ್ಯಾಂಡ್ ಪ್ರಯತ್ನಿಸಿತು, ಆದರೆ ಅದು ವಿಫಲವಾದಾಗ, ಗುಂಡಿನ ಚಕಮಕಿ ನಡೆಸಬೇಕಾಯಿತು ಎನ್ನುವುದು ಇವರ ವಾದವಾಗಿದೆ,(ಏಜನ್ಸೀಸ್).