ಡ್ರಗ್ ಡೀಲರ್ ಹಿಡಿಯಲು 'ಸ್ಟೇಜ್ ಡಾನ್ಸರ್ಸ್' ಆದ ಪೊಲೀಸರು: ಭಾರಿ ಸದ್ದು ಮಾಡಿದ ಥಾಯ್ಲೆಂಡ್ ಅಂಡರ್‌ಕವರ್ ಆಪರೇಷನ್! Thailand Cops
- ಮಾದಕ ದ್ರವ್ಯ ದಂಧೆಕೋರನೊಬ್ಬನನ್ನು ಸೆರೆಹಿಡಿಯಲು ಥಾಯ್ಲೆಂಡ್ ಪೊಲೀಸರು ನಡೆಸಿದ ದಾಳಿ ಭಾರಿ ವೈರಲ್
- ಡ್ರಗ್ ಡೀಲರ್‌ನನ್ನು ಹಾದಿ ತಪ್ಪಿಸಲು ಮಹಿಳಾ ಸ್ಟೇಜ್ ಡಾನ್ಸರ್‌ಗಳ ವೇಷ ಧರಿಸಿದ ಪೊಲೀಸ್ ಅಧಿಕಾರಿಗಳು
- ಈ ವಿಚಿತ್ರ ಕಾರ್ಯಾಚರಣೆಯು ಥಾಯ್ಲೆಂಡ್ನ ‘ಥಾ ಲುಯಾಂಗ್’ ಎಂಬಲ್ಲಿ ನಡೆದಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ
- ಈ ಜಾಣ್ಮೆಯ ಕಾರ್ಯಾಚರಣೆಯಲ್ಲಿ ‘ಮೇಖಾ ಫಾ-ವಾಪ್-ವಾಪ್’ ಎಂಬ ಶಂಕಿತ ಮಾದಕ ದ್ರವ್ಯ ದಂಧೆಕೋರ ಅರೆಸ್ಟ್
Thailand Cops : ಥಾಯ್ಲೆಂಡ್ನಲ್ಲಿ ಮಾದಕ ದ್ರವ್ಯ ದಂಧೆಕೋರನೊಬ್ಬನನ್ನು ಸೆರೆಹಿಡಿಯಲು ಪೊಲೀಸರು ನಡೆಸಿದ ದಾಳಿಯೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಡ್ರಗ್ ಡೀಲರ್‌ನನ್ನು ಹಾದಿ ತಪ್ಪಿಸಲು ಅಂಡರ್‌ಕವರ್ ಪೊಲೀಸ್ ಅಧಿಕಾರಿಗಳು ಯಾರಿಗೂ ಸಂಶಯ ಬಾರದಂತೆ ಮಹಿಳಾ ಸ್ಟೇಜ್ ಡಾನ್ಸರ್‌ಗಳ (ರಂಗಭೂಮಿ ನರ್ತಕಿಯರು) ತರಹ ವೇಷ ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಶೈಲಿಯ ಈ ರೋಚಕ ಹಾಗೂ ಅಷ್ಟೇ ಹಾಸ್ಯಾಸ್ಪದ ದಾಳಿಯ ವಿಡಿಯೋ ಮತ್ತು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿವೆ.
ಈ ವಿಚಿತ್ರ ಕಾರ್ಯಾಚರಣೆಯು ಥಾಯ್ಲೆಂಡ್ನ ‘ಥಾ ಲುಯಾಂಗ್’ ಎಂಬಲ್ಲಿ ನಡೆದಿದ್ದು, ಅಲ್ಲಿನ ಪೊಲೀಸ್ ಅಧಿಕಾರಿಗಳು ಯೂನಿಫಾರ್ಮ್ ಧರಿಸಿ ಹೋಗುವ ಬದಲು ಸ್ಥಳೀಯರಾಗಿ ಸುಲಭವಾಗಿ ಬೆರೆತುಹೋಗಲು ಈ ವಿಚಿತ್ರ ವೇಷಭೂಷಣ ಧರಿಸಿದ್ದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದಾಳಿಯ ಫೋಟೋಗಳನ್ನು ನೋಡುತ್ತಿರುವ ನೆಟ್ಟಿಗರು, ಅಲ್ಲಿ ನಡೆದಿರುವ ಡ್ರಗ್ ದಂಧೆಕೋರನ ಬಂಧನಕ್ಕಿಂತ ಹೆಚ್ಚಾಗಿ ಪೊಲೀಸ್ ಅಧಿಕಾರಿಗಳ ಸೀರೆ ಹಾಗೂ ಮೇಕಪ್‌ನಂತಹ ವೇಷಗಳ ಮೇಲೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಕೊನೆಗೂ ಪೊಲೀಸರು ನಡೆಸಿದ ಈ ಜಾಣ್ಮೆಯ ಕಾರ್ಯಾಚರಣೆಯಲ್ಲಿ ‘ಮೇಖಾ ಫಾ-ವಾಪ್-ವಾಪ್’ ಎಂಬ ಶಂಕಿತ ಮಾದಕ ದ್ರವ್ಯ ದಂಧೆಕೋರನನ್ನು ಯಶಸ್ವಿಯಾಗಿ ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 53 ಮೆಥಾಂಫೆಟಮೈನ್ ಮಾತ್ರೆಗಳು (ಮಾದಕ ದ್ರವ್ಯ), ಡ್ರಗ್ಸ್ ವಿತರಣೆಗೆ ಬಳಸಲಾಗುತ್ತಿದ್ದ ನೂರಾರು ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇಂಟರ್ನೆಟ್‌ನಲ್ಲಿ ಮಾತ್ರ ನೆಟ್ಟಿಗರೆಲ್ಲರು ಅಷ್ಟಕ್ಕೂ ಇವರನ್ನು ಅದು ಹೇಗೆ ಯಾರೂ ಗುರುತಿಸಲಿಲ್ಲ? ಎಂಬ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾ ತಮಾಷೆ ಮಾಡುತ್ತಿದ್ದಾರೆ.
ವೈರಲ್ ಫೋಟೋಗಳಲ್ಲಿ ಕಾಣುವಂತೆ, ಈ ಅಂಡರ್‌ಕವರ್ ಪೊಲೀಸರು ತಮ್ಮ ಪಾತ್ರಕ್ಕೆ ತಕ್ಕಂತೆ ಸಂಪೂರ್ಣವಾಗಿ ಸಿದ್ಧರಾಗಿದ್ದರು. ಕಣ್ಣು ಕೋರೈಸುವ ಜಗಮಗಿಸುವ ರಂಗಭೂಮಿ ಶೈಲಿಯ ಉಡುಪುಗಳು, ದಟ್ಟವಾದ ಮೇಕಪ್, ಆಕರ್ಷಕ ವಿಗ್‌ಗಳು ಮತ್ತು ವೈವಿಧ್ಯಮಯ ಆಭರಣಗಳನ್ನು ಧರಿಸಿದ್ದ ಇವರು, ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳಿಗಿಂತ ಹೆಚ್ಚಾಗಿ ನೃತ್ಯ ಪ್ರದರ್ಶನ ನೀಡುವ ಸ್ಟೇಜ್ ಡಾನ್ಸರ್‌ಗಳಂತೆ ಕಾಣುತ್ತಿದ್ದರು. ಪೊಲೀಸರ ಈ ಅನಿರೀಕ್ಷಿತ ಹಾಗೂ ನಾಟಕೀಯ ರೂಪಾಂತರವೇ ಈ ಇಡೀ ಕಾರ್ಯಾಚರಣೆ ಇಂಟರ್ನೆಟ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಮುಖ ಕಾರಣವಾಗಿದೆ.
ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಅಧಿಕಾರಿಗಳು ಮೊದಲು ಯಾವುದೋ ಡಾನ್ಸ್ ಶೋಗೆ ರೆಡಿಯಾದಂತೆ ಕಾಣಿಸಿ, ನಂತರ ಇದ್ದಕ್ಕಿದ್ದಂತೆ 'ಡ್ರಗ್ ರೈಡ್ ಮೋಡ್'ಗೆ ಬದಲಾದರು ಎಂದು ಬಳಕೆದಾರರು ತಮಾಷೆ ಮಾಡುತ್ತಿದ್ದಾರೆ. ಕೆಲವರು ಪೊಲೀಸರ ಈ ಕಾಯಕ ನಿಷ್ಠೆ ಮತ್ತು ಸಮರ್ಪಣಾ ಭಾವವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಈ ಇಡೀ ಕಾರ್ಯಾಚರಣೆ ಒಂದು ಆಕ್ಷನ್-ಕಾಮಿಡಿ ಸಿನಿಮಾದ ದೃಶ್ಯದಂತೆ ಕಾಣಿಸುತ್ತಿದೆ ಎಂದು ಬಣ್ಣಿಸಿದ್ದಾರೆ.
ವಿಶೇಷವೆಂದರೆ, ಥಾಯ್ ಪೊಲೀಸರು ತಮ್ಮ ಅಂಡರ್‌ಕವರ್ ಮಿಷನ್‌ಗಳಿಗಾಗಿ ಇಂತಹ ವಿಚಿತ್ರ ಮತ್ತು ವಿಭಿನ್ನ ವೇಷಭೂಷಣಗಳನ್ನು ಧರಿಸಿರುವುದು ಇದೇ ಮೊದಲೇನಲ್ಲ. ಆದರೆ ಈ ಹಿಂದಿನ ಪ್ರಯತ್ನಗಳಿಗಿಂತ ಈ ಬಾರಿಯ ಕಾರ್ಯಾಚರಣೆ ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಮೂಡಿಸಲು ಕಾರಣ, ಇವರ ರೂಪಾಂತರ ಅತ್ಯಂತ ನಾಟಕೀಯ ಹಾಗೂ ರೋಚಕವಾಗಿತ್ತು. ಇಷ್ಟೆಲ್ಲಾ ಕಸರತ್ತಿನ ನಡುವೆಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಅತ್ಯಂತ ಗಂಭೀರವಾಗಿ ನಿಭಾಯಿಸಿರುವುದು ಜನರಿಗೆ ಮತ್ತಷ್ಟು ನಗು ತರಿಸಿದೆ. ಇದನ್ನು ನೋಡಿ ನೆಟ್ಟಿಗರೊಬ್ಬರು, "ಇದು ಒಂದು ಅದ್ಭುತ ಸಿನಿಮಾ ಸ್ಕ್ರಿಪ್ಟ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ" ಎಂದು ಬರೆದರೆ, ಮತ್ತೊಬ್ಬರು "ಎಲ್ಲಾ ಅಭಿಪ್ರಾಯಗಳಿಗಿಂತ ಮಿಗಿಲಾಗಿ ಗೌರವದಿಂದ ಕರ್ತವ್ಯ ನಿಭಾಯಿಸುವುದು ಅಂದರೆ ಇದೇ" ಎಂದು ಕೊಂಡಾಡಿದ್ದಾರೆ, (ಏಜೆನ್ಸೀಸ್).