ಘೋರ ದುರಂತ: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಪಿಕ್‌ಅಪ್ ಟ್ರಕ್ ಹರಿದು 9 ಬೌದ್ಧ ಸನ್ಯಾಸಿಗಳ ದಾರುಣ ಸಾವು! Buddhist monks 
ವಿದೇಶ

ಘೋರ ದುರಂತ: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಪಿಕ್‌ಅಪ್ ಟ್ರಕ್ ಹರಿದು 9 ಬೌದ್ಧ ಸನ್ಯಾಸಿಗಳ ದಾರುಣ ಸಾವು! Buddhist monks

ಪ್ರಮುಖ ಮುಖ್ಯಾಂಶಗಳು

  • ಪಾದಯಾತ್ರೆ ಹೊರಟಿದ್ದ ಸನ್ಯಾಸಿಗಳ ಮೇಲೆ ನುಗ್ಗಿದ ಪಿಕ್‌ಅಪ್ ಟ್ರಕ್
  • 9 ಮಂದಿ ಬೌದ್ಧ ಸನ್ಯಾಸಿ ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ
  • ಪ್ರವಾಸಿಗರ ಸ್ವರ್ಗ ಥಾಯ್ಲೆಂಡ್‌ನಲ್ಲಿ ನಡೆದ ಘೋರ ದುರಂತ
  • ಮನೆಯವರ ಕಣ್ತಪ್ಪಿಸಿ ಪಿಕ್‌ಅಪ್ ಟ್ರಕ್ ತಂದಿದ್ದ 11ರ ಬಾಲಕ
ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಭೀಕರ ಹಾಗೂ ಅತ್ಯಂತ ಆಘಾತಕಾರಿ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕೇವಲ 11 ವರ್ಷದ ಬಾಲಕನೊಬ್ಬ ಚಲಾಯಿಸುತ್ತಿದ್ದ ಪಿಕ್‌ಅಪ್ ಟ್ರಕ್ ಹರಿದು ಒಂಬತ್ತು ಮಂದಿ ಬೌದ್ಧ ಸನ್ಯಾಸಿಗಳು ( Buddhist monks ) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದುರಂತದಲ್ಲಿ 20ಕ್ಕೂ ಹೆಚ್ಚು ಭಕ್ತರು ಹಾಗೂ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಲ್ಲಿನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಕರಳು ಹಿಂಡುವಂತಿರುವ ಈ ದುರ್ಘಟನೆ ಇಡೀ ಥಾಯ್ಲೆಂಡ್ ದೇಶವನ್ನೇ ಬೆಚ್ಚಿಬೀಳಿಸಿದೆ.
ಈ ಭೀಕರ ದುರಂತವು ಈಶಾನ್ಯ ಥಾಯ್ಲೆಂಡ್‌ನ ಮುಕ್ದಾಹನ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಲಭ್ಯವಿರುವ ಮಾಹಿತಿ ಪ್ರಕಾರ, 35 ಬೌದ್ಧ ಸನ್ಯಾಸಿಗಳು ಹಾಗೂ ಐದು ಮಂದಿ ಅನುಯಾಯಿಗಳನ್ನೊಳಗೊಂಡ ತಂಡವೊಂದು ನೆರೆಯ ಉಬೋನ್ ರಾಚಥಾನಿ ಪ್ರಾಂತ್ಯದ ದೇವಸ್ಥಾನವೊಂದಕ್ಕೆ ಪಾದಯಾತ್ರೆ ಕೈಗೊಂಡಿತ್ತು. ಆದರೆ, ಪಾದಯಾತ್ರೆ ಆರಂಭವಾದ ಕೇವಲ ಅರ್ಧ ಗಂಟೆಯಲ್ಲೇ ಈ ಕರಳು ಹಿಂಡುವ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯ ಬದಿಯಲ್ಲಿ ಸನ್ಯಾಸಿಗಳು ಸಾಲಾಗಿ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಪಿಕ್‌ಅಪ್ ಟ್ರಕ್ ಇವರ ಮೇಲೆ ದಿಢೀರನೆ ಹರಿದಿದೆ. ಭೀಕರ ಅಪಘಾತದ ತೀವ್ರತೆಗೆ ಐದು ಮಂದಿ ಬೌದ್ಧ ಸನ್ಯಾಸಿಗಳು ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಸದ್ಯ ಅಪಘಾತದಲ್ಲಿ ಒಟ್ಟು 22 ಸನ್ಯಾಸಿಗಳು ಹಾಗೂ ಓರ್ವ ಅನುಯಾಯಿ ಗಾಯಗೊಂಡಿದ್ದು, ಇವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, 11 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯವರ ಅನುಮತಿ ಇಲ್ಲದೆ ರಹಸ್ಯವಾಗಿ ಪಿಕ್‌ಅಪ್ ಟ್ರಕ್ ಕೀ ತಗೆದುಕೊಂಡು ವಾಹನ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಮನೆಯಿಂದ ಸುಮಾರು 10 ಕಿಲೋಮೀಟರ್ ದೂರದವರೆಗೆ ವಾಹನ ಚಲಾಯಿಸಿಕೊಂಡು ಬಂದ ಆತ, ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಸನ್ಯಾಸಿಗಳ ಗುಂಪಿಗೆ ಡಿಕ್ಕಿ ಹೊಡೆದಿದ್ದಾನೆ.
ಸದ್ಯ ಘಟನೆಗೆ ಸಂಬಂಧಿಸಿದ ಸಿಸಿಟಿವಿ (CCTV) ದೃಶ್ಯಾವಳಿಗಳು ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಇದರಲ್ಲಿ ಸನ್ಯಾಸಿಗಳು ರಸ್ತೆ ಬದಿಯಲ್ಲಿ ಶಿಸ್ತಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಟ್ರಕ್ ಅವರಿಗೆ ಗುದ್ದಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ಘಟನೆ ನಡೆದ ತಕ್ಷಣ ಬಾಲಕ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವುದರಿಂದ ಪೊಲೀಸರಿಗೆ ಆತನನ್ನು ತಕ್ಷಣವೇ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಬಾಲಕನನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಅವರ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).