ಘಟನೆಯ ಸ್ಥಳ 
ವಿದೇಶ

ಪಾಕ್​ನಲ್ಲಿ ಕರಾಚಿಯ ಸೇನಾ ನೆಲೆ ಮೇಲೆ ಉಗ್ರರ ದಾಳಿ: ವಾಹನ ಸ್ಫೋಟ: 6 ಉಗ್ರರ ಹತ್ಯೆ: ನಾಲ್ಕು ಸೈನಿಕರು ಸಾವು | Terrorists attack

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯ ಸೇನಾ ನೆಲೆ ಮೇಲೆ ಶನಿವಾರ(ಜೂ. 27) ಭಯೋತ್ಪಾದಕರ ದಾಳಿ(Terrorists attack) ನಡೆದಿದ್ದು, ಘಟನೆಯಲ್ಲಿ ಆರು ಉಗ್ರರು ಹತ್ಯೆಯಾಗಿದ್ದು, ನಾಲ್ಕು ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕರಾಚಿಯ ಗುಲಿಸ್ತಾನ್-ಇ-ಜೌಹರ್‌ನಲ್ಲಿರುವ ಅರೆಸೈನಿಕ ಪಡೆಯ ನೆಲೆಯ ಮೇಲೆ ದಾಳಿ ನಡೆದಿದೆ. ಕನಿಷ್ಠ ನಾಲ್ವರು ಸಿಂಧ್ ರೇಂಜರ್ಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೂ ಪ್ಯಾರಾಮಿಲಿಟರಿ ಪಾಕಿಸ್ತಾನ ರೇಂಜರ್ಸ್‌ನ ಪ್ರಾಂತೀಯ ಪ್ರಧಾನ ಕಚೇರಿಗೆ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದು ಭಾರೀ ಸ್ಪೋಟ ಸಂಭವಿಸಿದೆ. ಬಳಿಕ ಭದ್ರತಾ ಪಡೆಗಳು ಉಗ್ರರೊಂದಿಗೆ ತೀವ್ರ ಗುಂಡಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಡಾನ್ ಪ್ರಕಾರ, ಕ್ಷಿಪ್ರ ಪ್ರತಿಕ್ರಿಯೆ ಪಡೆ ಮತ್ತು ಪೊಲೀಸ್ ಕಮಾಂಡೋಗಳಂತಹ ವಿಶೇಷ ಘಟಕಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಕರಾಚಿಯಲ್ಲಿರುವ ಸಿಂಧ್ ರೇಂಜರ್ಸ್ ನೆಲೆಯ ಮೇಲೆ ದಾಳಿ ನಡೆಸಲು ಯತ್ನಿಸಿದ ಆರು ಭಯೋತ್ಪಾದಕರನ್ನು ಪಾಕಿಸ್ತಾನಿ ಪಡೆಗಳು ಗುಂಡಿಕ್ಕಿ ಕೊಂದಿದ್ದು, ಒಬ್ಬನನ್ನು ಜೀವಂತವಾಗಿ ಸೆರೆಹಿಡಿದಿವೆ ಎಂದು ವರದಿ ಮಾಡಿದೆ.
ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯಿಂದ​ ಬೇರ್ಪಟ್ಟ ಕ್ರೂರ ಉಗ್ರಗಾಮಿ ಗುಂಪು ಜಮಾತ್-ಉಲ್-ಅಹ್ರಾರ್(ಜೆಯುಎ), ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಖುಲಾಫಾ-ಎ-ರಷಿದ್ದೀನ್ ಇಶ್ತಿಶ್ಹಾದಿ ಬ್ರಿಗೇಡ್ ಎಂಬ ಆತ್ಮಹತ್ಯಾ ದಳ ಈ ದಾಳಿಗಳನ್ನು ನಡೆಸಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ, ಸ್ಫೋಟದ ಶಬ್ದ ಮತ್ತು ಗುಂಡಿನ ದಾಳಿಯ ವರದಿಯನ್ನು ಗಮನಿಸಿದ್ದೇನೆ. ಘಟನೆಯ ಬಗ್ಗೆ ವಿವರವಾದ ವರದಿಯನ್ನು ಕೇಳಿದ್ದೇನೆ.  ಘಟನೆಯ ಸ್ವರೂಪವನ್ನು ನಿರ್ಧರಿಸಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).