ಟೆಹ್ರಾನ್: ಮಧ್ಯ ಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ದು, ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಎರಡನೇ ದಿನವೂ, ಟೆಹ್ರಾನ್ನ 10 ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ (US attacks) ಎಂದು ಭಾನುವಾರ(ಜೂ. 28) ಅಮೆರಿಕ ಸೇನಾ ಹೇಳಿಕೊಂಡಿದೆ. ಮತ್ತು ದಾಳಿಯ ವಿಡಿಯೋಗಳನ್ನು ಹಂಚಿಕೊಂಡಿದೆ.
ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅಮೆರಿಕ ಸೇನೆಯ ಸೆಂಟ್‌ಕಾಮ್ ಪ್ರಕಾರ, ಎಂ/ಟಿ ಕಿಕು ಮೇಲೆ ಇರಾನ್‌ನ ಡ್ರೋನ್ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯಲ್ಲಿ ಮತ್ತು ಸಮೀಪದ 10 ಇರಾನಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಂದು ರಾತ್ರಿ ಯುಎಸ್ ನೌಕಾಪಡೆ ಮತ್ತು ವಾಯುಪಡೆಯ ಯುದ್ಧವಿಮಾನಗಳು ದಾಳಿ ನಡೆಸಿವೆ ಎಂದು ಹೇಳಿದೆ.
ಇರಾನ್ ಪನಾಮ ಧ್ವಜವನ್ನು ಹೊಂದಿರುವ ತೈಲ ಟ್ಯಾಂಕರ್ M/T ಕಿಕು ಮೇಲೆ ಬೆಳಿಗ್ಗೆ 4:30 ET ಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವನ್ನು ಸಾಗಿಸುತ್ತಿದ್ದಾಗ ಡ್ರೋನ್ ಮೂಲಕ ಅದರ ಮೇಲೆ ದಾಳಿ ಮಾಡಿದೆ. ಮತ್ತು ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಅಮೆರಿಕದ ಪಡೆಗಳು ಹೆಚ್ಚುವರಿ ದಾಳಿಗಳನ್ನು ನಡೆಸಿವೆ ಎಂದು ತಿಳಿಸಿದೆ.
ಪ್ರತೀಕಾರದ ಕಾರ್ಯಾಚರಣೆಯು ಇರಾನಿನ ಮಿಲಿಟರಿ ಕಣ್ಗಾವಲು ಮೂಲಸೌಕರ್ಯ, ಸಂವಹನ ವ್ಯವಸ್ಥೆಗಳು, ವಾಯು ರಕ್ಷಣಾ ತಾಣಗಳು, ಡ್ರೋನ್ ಸಂಗ್ರಹಣಾ ಸೌಲಭ್ಯಗಳು ಮತ್ತು ಮೈನ್‌ಲೇಯರ್ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡಿವೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಇರಾನ್ ಮೇಲಿನ ದಾಳಿಯನ್ನು ದೃಢಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕವು ಇರಾನಿನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ಸ್ಥಳಗಳು ಮತ್ತು ಕರಾವಳಿ ರಾಡಾರ್ ತಾಣಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಇರಾನ್ ತನ್ನ ಕ್ರಮಗಳನ್ನು ಹೀಗೆ ಮುಂದುವರಿಸಿದರೆ ಅಮೆರಿಕ ತನ್ನ ಅಂತಿಮ ಮಿಲಿಟರಿ ಕೆಲಸವನ್ನು ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಸಾಗಾಣೆಯ ಪ್ರಮುಖ ಮಾರ್ಗವಾಗಿದೆ. ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಅಂತಿಮಗೊಂಡ ಬಳಿಕ ಮತ್ತೆ ಸಂಘರ್ಷ ಭುಗಿಲೆದ್ದಿರುವುದು ಜಾಗತಿಕ ತೈಲ ಸಾಗಾಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).