20 ಮಹಿಳೆಯರ ಜತೆ ಸರಸ, ಲೈಂಗಿಕ ಕಾಯಿಲೆ, ಆ್ಯಂಟಿಬಯೋಟಿಕ್ಸ್... ಕೊನೆಗೂ ಸತ್ಯ ಒಪ್ಪಿಕೊಂಡ ಬಿಲ್ ಗೇಟ್ಸ್! Bill Gates  
ವಿದೇಶ

20 ಮಹಿಳೆಯರ ಜತೆ ಸರಸ, ಲೈಂಗಿಕ ಕಾಯಿಲೆ, ಆ್ಯಂಟಿಬಯೋಟಿಕ್ಸ್... ಕೊನೆಗೂ ಸತ್ಯ ಒಪ್ಪಿಕೊಂಡ ಬಿಲ್ ಗೇಟ್ಸ್! Bill Gates

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ಜೆಫ್ರಿ ಎಪ್​ಸ್ಟೀನ್​​ ಫೈಲ್ಸ್​
  • ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್​ಸ್ಟೀನ್​ ಜತೆ ಕೇಳಿಬರುತ್ತಿವೆ
  • ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಹೆಸರು ಸಹ ತಳುಕು ಹಾಕಿಕೊಂಡಿದೆ
  • ಮಹಿಳೆಯರ ಜತೆಗಿದ್ದ ತಮ್ಮ ಸಂಬಂಧವನ್ನು ಸ್ವತಃ ಬಿಲ್​ ಗೇಟ್ಸ್​ ಅವರೇ ಒಪ್ಪಿಕೊಂಡಿದ್ದಾರೆ
Bill Gates : ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್​​ಸ್ಟೀನ್ ( Jeffrey Epstein )​ ನಡುವಿನ ಸಂಬಂಧದ ಕುರಿತಾದ ವಿವಾದಗಳು ತಣ್ಣಗಾಗುವ ಮುನ್ನವೇ, ಮತ್ತೊಂದು ಆಘಾತಕಾರಿ ಸಂಗತಿ ಇದೀಗ ಹೊರಬಿದ್ದಿದೆ.
ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಅವರ ವಿಚ್ಛೇದನದ ಸಮಯದಲ್ಲಿ ಬಿಲ್ ಗೇಟ್ಸ್ ವಿರುದ್ಧ ಮಾಡಲಾದ ಗಂಭೀರ ಆರೋಪಗಳು ಇದೀಗ ಮುಂಚೂಣಿಗೆ ಬಂದಿದ್ದು, ಈ ಕುರಿತು ಪ್ರಖ್ಯಾತ ಮಾಧ್ಯಮ ಸಂಸ್ಥೆಯಾದ 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಬಿಲಿಯನೇರ್ ಬಿಲ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್ ನೌಕರರೊಂದಿಗೆ ನಡೆಸಿದ ಅತ್ಯಂತ ರಹಸ್ಯವಾದ ಟೌನ್ ಹಾಲ್ ಸಭೆಯಲ್ಲಿ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಜೆಫ್ರಿ ಎಪ್​​ಸ್ಟೀನ್ ಫೈಲ್‌ಗಳಲ್ಲಿ ಉಲ್ಲೇಖಿಸಲಾಗಿದ್ದ ಇಬ್ಬರು ರಷ್ಯಾದ ಮಹಿಳೆಯರೊಂದಿಗೆ ತಮಗಿದ್ದ ಸಂಬಂಧವನ್ನು ಬಿಲ್ ಗೇಟ್ಸ್ ಸ್ವತಃ ಈ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಅವರು 27 ವರ್ಷಗಳ ದಾಂಪತ್ಯ ಜೀವನದ ನಂತರ 2021 ರಲ್ಲಿ ವಿಚ್ಛೇದನ ಪಡೆದಿದರು. ಆ ಸಮಯದಲ್ಲಿ, ಬಿಲ್ ಗೇಟ್ಸ್ ಅವರಿಗೆ 20ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸಂಬಂಧವಿತ್ತು ಎಂದು ಮೆಲಿಂಡಾ ಅವರ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಸಮಯದಲ್ಲಿ ಇದು ಭಾರಿ ಸುದ್ದಿಯಾಗಿತ್ತು.
ಮತ್ತೊಂದೆಡೆ, ಈ ಸರಣಿ ವಿವಾದಗಳಿಂದಾಗಿ ತೀವ್ರ ಧಕ್ಕೆಗೊಳಗಾಗಿದ್ದ ತಮ್ಮ ಸಾರ್ವಜನಿಕ ಇಮೇಜ್ ಮತ್ತು ಘನತೆಯನ್ನು ಮರಳಿ ಪಡೆಯಲು ಬಿಲ್ ಗೇಟ್ಸ್ ಅವರು ಪಿಆರ್​ಗಳ ಮೊರೆ ಹೋಗಿದ್ದರು ಎಂಬ ವಿಷಯವೂ ವರದಿಗಳಿಂದ ಬೆಳಕಿಗೆ ಬಂದಿದೆ. ತಮ್ಮ ಮೇಲಿನ ಆರೋಪಗಳ ಕರೆಯನ್ನು ತೊಳೆದು, ಸಮಾಜದಲ್ಲಿ ಮತ್ತೆ ಪಾಸಿಟಿವ್​ ಚಿತ್ರಣವನ್ನು ಮೂಡಿಸಲು ಅವರು ವ್ಯವಸ್ಥಿತವಾಗಿ ಪಿಆರ್ ತಂತ್ರಗಳನ್ನು ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ.
ಜನವರಿ 2026 ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಜೆಫ್ರಿ ಎಪ್​​ಸ್ಟೀನ್ ಫೈಲ್‌ಗಳಲ್ಲಿ ಬಿಲ್ ಗೇಟ್ಸ್ ಅವರ ಹೆಸರು ಮೊದಲ ಬಾರಿಗೆ ಮುಂಚೂಣಿಗೆ ಬಂದಿತು. ಬಿಲ್ ಗೇಟ್ಸ್ ಅವರಿಗೆ ರಷ್ಯಾದ ಮಹಿಳೆಯರೊಂದಿಗೆ ಸಂಬಂಧವಿತ್ತು ಮತ್ತು ಅವರಿಂದ ಅವರು ಲೈಂಗಿಕವಾಗಿ ಹರಡುವ ಕಾಯಿಲೆಗಳಿಗೆ ತುತ್ತಾಗಿದ್ದರು ಎಂದು ಎಪ್​ಸ್ಟೀನ್​ ಅವರ ಇಮೇಲ್‌ಗಳಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲದೆ, ಈ ಸೋಂಕಿನ ಹಿನ್ನೆಲೆಯಲ್ಲಿ ಬಿಲ್ ಗೇಟ್ಸ್ ಅವರು ತಮ್ಮ ಆಗಿನ ಪತ್ನಿ ಮೆಲಿಂಡಾ ಅವರಿಗೆ ರಹಸ್ಯವಾಗಿ ಆ್ಯಂಟಿಬಯೋಟಿಕ್ಸ್ ನೀಡಲು ಯೋಜಿಸಿದ್ದರು ಎಂಬ ಆಘಾತಕಾರಿ ವಿಷಯವೂ ಈ ಇಮೇಲ್‌ಗಳ ಮೂಲಕ ಬಹಿರಂಗವಾಗಿತ್ತು.
ಆರಂಭದಲ್ಲಿ ಈ ಎಲ್ಲಾ ಗಂಭೀರ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಬಿಲ್ ಗೇಟ್ಸ್, ನಂತರದ ದಿನಗಳಲ್ಲಿ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ಗೇಟ್ಸ್ ಫೌಂಡೇಶನ್‌ನ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ, ರಷ್ಯಾದ ಮಹಿಳೆಯರೊಂದಿಗೆ ತಮಗಿದ್ದ ಸಂಬಂಧದ ಕುರಿತಾದ ಸತ್ಯಾಂಶವನ್ನು ಅವರು ಸ್ವತಃ ಖಚಿತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಂದಹಾಗೆ, ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಫ್​ಸ್ಟೀನ್​ಗೆ ಸಂಬಂಧಿಸಿದ ಕಡತಗಳು ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದೆ. ಎರಡ್ಮೂರು ತಿಂಗಳ ಹಿಂದೆ ಈ ಫೈಲ್​ ಸಂಬಂಧ ನೂರಾರು ಸುದ್ದಿಗಳು ಪ್ರಕಟವಾಗುತ್ತಲೇ ಇತ್ತು. ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಫ್​ಸ್ಟೀನ್​ ಜತೆ ಕೇಳಿಬಂದಿವೆ. ಅವರಲ್ಲಿ ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಹಾಗೂ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಹೆಸರು ಸಹ ತಳುಕು ಹಾಕಿಕೊಂಡಿದೆ. ಅಲ್ಲದೆ, ಯುವತಿಯರ ಜತೆ ಬಿಲ್​ ಗೇಟ್ಸ್​ ಇರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

ಯಾರು ಈ ಜೆಫ್ರಿ ಎಪ್​ಸ್ಟೀನ್​?

ಜೆಫ್ರಿ ಎಡ್ವರ್ಡ್ ಎಪ್​ಸ್ಟೀಸ್​ (1953-2019) ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿ ಮತ್ತು ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ಕಳ್ಳಸಾಗಾಣೆ ಮಾಡಿದ ಆರೋಪ ಆತನ ಮೇಲಿದೆ. 2008ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಮತ್ತು 2019ರಲ್ಲಿ ಮತ್ತೆ ಬಂಧನಕ್ಕೊಳಗಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು. ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಈ ಎಪ್​ಸ್ಟೀನ್​ ಸಂಪರ್ಕ ಹೊಂದಿದ್ದ ಆದರೆ, ಅವರ ಮೇಲೆ ಯಾವುದೇ ನೇರ ಆರೋಪಗಳಿಲ್ಲ, (ಏಜೆನ್ಸೀಸ್​).