White House attack| ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ 
ವಿದೇಶ

ಶ್ವೇತಭವನದ ಮೇಲಿನ ದಾಳಿ; ಇದು ISIನ ಪಿತೂರಿ ಎಂದ ತಾಲಿಬಾನ್​ | White House attack

ಕಾಬೂಲ್​: ಅಮೆರಿಕದ ಶ್ವೇತಭವನದ ಮೇಲಿನ ದಾಳಿಯಲ್ಲಿ(White House attack) ಅಫ್ಘಾನ್ ಪ್ರಜೆಯ ಮೇಲೆ ಆರೋಪ ಹೊರಿಸಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ಈ ದಾಳಿಯಲ್ಲಿ ಐಎಸ್ಐ ಪಿತೂರಿ ಇದೆ ಎಂದಿದ್ದಾರೆ. ಅಲ್ಲದೆ, ಅಫ್ಘಾನಿಸ್ತಾನದ ಮೇಲೆ ಸುಳ್ಳು ಹೇರಳು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ತಾಲಿಬಾನ್‌ನ ಮೊದಲ ಪ್ರತಿಕ್ರಿಯೆ?
ಈ ಎಲ್ಲಾ ಗದ್ದಲಗಳಿಗೆ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಪ್ರತಿಕ್ರಿಯಿಸಿದ್ದು, ಇದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಪಿತೂರಿಯಾಗಿದ್ದು, ಇದು ಅಫ್ಘಾನ್ ಸರ್ಕಾರದ ಪ್ರತಿಷ್ಠೆಗೆ ಹಾನಿ ಮಾಡುವ ಗುರಿಯನ್ನು ಹೊಂದಿದೆ. ನಮ್ಮ ನೀತಿ ಸ್ಪಷ್ಟವಾಗಿದೆ. ವಿದೇಶಗಳಲ್ಲಿ ದಾಳಿ ಮಾಡಲು ನಾವು ಯಾರಿಗೂ ಅಫ್ಘಾನ್ ಮಣ್ಣನ್ನು ಬಳಸಲು ಅನುಮತಿಸುವುದಿಲ್ಲ ಎಂದು ಹೇಳುವ ಮೂಲಕ ಶಾಹೀನ್ ತಾಲಿಬಾನ್‌ನ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರೆ.
ಈ ದಾಳಿಗೆ ಕಾರಣರಾದವರನ್ನು ಗುರುತಿಸಲು ತಾಲಿಬಾನ್ ವೃತ್ತಿಪರ ನಿಷ್ಪಕ್ಷಪಾತ ತನಿಖೆಗೆ ಸಿದ್ಧವಾಗಿದೆ. ಯಾವುದೇ ನಿರ್ದಿಷ್ಟ ತೀರ್ಮಾನಗಳನ್ನು ತಲುಪಲು ತನಿಖೆ ಅಗತ್ಯವಿದೆ. ಈ ವಿಷಯವನ್ನು ಎಲ್ಲಾ ಕೋನಗಳಿಂದ ಕೂಲಂಕಷವಾಗಿ ತನಿಖೆ ಮಾಡುವುದು ಅಮೆರಿಕ ಸರ್ಕಾರಕ್ಕೆ ಬಿಟ್ಟದ್ದು ಎಂದು ಸುಹೇಲ್ ಸ್ಪಷ್ಟಪಡಿಸಿದ್ದಾರೆ.

ಐಎಸ್ಐ ಪಾತ್ರವೇನು?

ಇದಲ್ಲದೆ, ದಾಳಿಕೋರನ ಮೇಲೆ ಐಎಸ್‌ಐ ಪ್ರಭಾವ ಬೀರಿದೆಯೇ ಎಂದು ಕೇಳಿದಾಗ, ಈ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಾನು ಆ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ. ಆದರೆ ತನಿಖೆ ತೀರ್ಮಾನಕ್ಕೆ ಬರುವವರೆಗೆ ನಾನು ಸಂಪೂರ್ಣ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸುಹೇಲ್​ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸುಹೇಲ್​, ಕಾಬೂಲ್ ತನ್ನ ಜಾಗತಿಕ ಸಂಪರ್ಕವನ್ನು ಸುಧಾರಿಸುತ್ತಿರುವ ಸಮಯದಲ್ಲಿ, ಭಾರತದೊಂದಿಗೆ ಸಂವಹನ ಮಾರ್ಗಗಳನ್ನು ತೆರೆಯುತ್ತಿರುವಾಗ, ತಾಲಿಬಾನ್ ಅನ್ನು ಅಪಖ್ಯಾತಿಗೊಳಿಸಲು ಐಎಸ್ಐ ಪ್ರಯತ್ನಿಸುತ್ತಿದೆ. ನಾವು ಭಾರತ ಸೇರಿದಂತೆ ಜಗತ್ತಿಗೆ ಹತ್ತಿರವಾಗುತ್ತಿರುವುದರಿಂದ ಪಾಕಿಸ್ತಾನದ ಐಎಸ್ಐ ತಾಲಿಬಾನ್ ಅನ್ನು ಬಲೆಗೆ ಬೀಳಿಸಲು ಇದೆಲ್ಲವನ್ನೂ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಶ್ವೇತಭವನದ ಮೇಲೆ ದಾಳಿ

ವರದಿಗಳ ಪ್ರಕಾರ, ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿಯ ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ. ಇತನನ್ನು ಅಫ್ಘಾನ್ ಪ್ರಜೆ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಲಾಗಿದೆ. ಅಲ್ಲದೆ, ಟ್ರಂಪ್ ಕೋಪಗೊಂಡಿದ್ದು, ದುಷ್ಕರ್ಮಿಗಳನ್ನು ಪ್ರಾಣಿಗಳು ಎಂದು ಕರೆದಿದ್ದಾರೆ ಮತ್ತು ಬಲವಾದ ಪ್ರತಿಕ್ರಿಯೆಯನ್ನು ಭರವಸೆ ನೀಡಿದ್ದಾರೆ. 2021 ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕಕ್ಕೆ ಪ್ರವೇಶಿಸುವ ಯಾರನ್ನಾದರೂ ಮರುಪರಿಶೀಲಿಸುವಂತೆ ಟ್ರಂಪ್ ಆದೇಶಿಸಿದ್ದಾರೆ,(ಏಜೆನ್ಸೀಸ್).