ಪಾಕಿಸ್ತಾನದ ನಕ್ಷೆಯನ್ನೇ ಬದಲಿಸುತ್ತಾ ತಾಲಿಬಾನ್? ಅಫ್ಘಾನ್ ರಕ್ಷಣಾ ಸಚಿವಾಲಯದ ಶಾಕಿಂಗ್ ವಿಡಿಯೋ, ಬೆಚ್ಚಿಬಿದ್ದ ಜಗತ್ತು!  
ವಿದೇಶ

ಪಾಕಿಸ್ತಾನದ ನಕ್ಷೆಯನ್ನೇ ಬದಲಿಸುತ್ತಾ ತಾಲಿಬಾನ್? ಅಫ್ಘಾನ್ ರಕ್ಷಣಾ ಸಚಿವಾಲಯದ ಶಾಕಿಂಗ್ ವಿಡಿಯೋ, ಬೆಚ್ಚಿಬಿದ್ದ ಜಗತ್ತು! Taliban Airstrike

ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ(Taliban Airstrike) ನಡುವಿನ ದಶಕಗಳ ವೈಷಮ್ಯ ಈಗ ಪೂರ್ಣ ಪ್ರಮಾಣದ ಓಪನ್ ವಾರ್​ಗೆ ನಾಂದಿ ಹಾಡಿದೆ. ಪಾಕಿಸ್ತಾನದ ವಾಯುದಾಳಿಗೆ ಪ್ರತಿಯಾಗಿ ತಾಲಿಬಾನ್ ಸರ್ಕಾರವು ಪಾಕ್​ನ ಭೂಭಾಗದ ಮೇಲೆ ಭೀಕರ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಅದರ ಅಧಿಕೃತ ವಿಡಿಯೋಗಳನ್ನು ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ.

ಡ್ರೋನ್ ಮತ್ತು ಮಿಸೈಲ್ ದಾಳಿಯ ವಿಡಿಯೋ ಸ್ಫೋಟಕ..!

ಅಫ್ಘಾನಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪಾಕಿಸ್ತಾನದ ಸೇನಾ ನೆಲೆಗಳು ಮತ್ತು ಮದ್ದುಗುಂಡುಗಳ ಮಳಿಗೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ಗುರುವಾರ ಮತ್ತು ಶುಕ್ರವಾರದಂದು ಈ ದಾಳಿಗಳು ನಡೆದಿದ್ದು, ಇಸ್ಲಾಮಾಬಾದ್ ಸಮೀಪದ ಫೈಜಾಬಾದ್ ಮಿಲಿಟರಿ ಕ್ಯಾಂಪ್, ನೌಶೆರಾದ ಸೇನಾ ಪ್ರಧಾನ ಕಚೇರಿ ಮತ್ತು ಅಬೋಟಾಬಾದ್‌ನಲ್ಲಿರುವ ಆಯಕಟ್ಟಿನ ಕೇಂದ್ರಗಳನ್ನು ತಾಲಿಬಾನ್ ಪಡೆಗಳು ಧ್ವಂಸಗೊಳಿಸಿವೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರರು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನದ ಘೋಷಣೆ: ಇದು ಇನ್ನು ಮುಂದೆ ಗುಪ್ತ ಯುದ್ಧವಲ್ಲ
ಈ ಸರಣಿ ದಾಳಿಗಳಿಂದ ಕೆರಳಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಫ್ಘಾನಿಸ್ತಾನದ ವಿರುದ್ಧ ಅಧಿಕೃತವಾಗಿ ಮುಕ್ತ ಯುದ್ಧ ಘೋಷಿಸಿದ್ದಾರೆ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಅಫ್ಘಾನ್​ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಮತ್ತು ಈಗ ನೇರ ಯುದ್ಧಕ್ಕೆ ಪ್ರಚೋದನೆ ನೀಡಿದೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಕೂಡ ಯಾವುದೇ ಆಕ್ರಮಣವನ್ನು ಹತ್ತಿಕ್ಕುವ ಶಕ್ತಿ ನಮ್ಮ ಸೇನೆಗಿದೆ ಎಂದು ಎಚ್ಚರಿಸಿದ್ದಾರೆ.

ಡುರಾಂಡ್ ಲೈನ್‌ ಉದ್ದಕ್ಕೂ ಸ್ಮಶಾನ ಸದೃಶ ಮೌನ

ಗಡಿ ಭಾಗದಲ್ಲಿ ಉಭಯ ದೇಶಗಳ ಸೇನೆಗಳು ಜಮಾಯಿಸಿದ್ದು, ಸನ್ನದ್ಧ ಸ್ಥಿತಿಯಲ್ಲಿವೆ. ಪಾಕಿಸ್ತಾನವು ಶುಕ್ರವಾರ ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ನಡೆಸಿದ ಪ್ರತಿದಾಳಿಯಲ್ಲಿ ಸುಮಾರು 274 ತಾಲಿಬಾನ್ ಅಧಿಕಾರಿಗಳು ಮತ್ತು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಾಬಾದ್ ಹೇಳಿಕೊಂಡಿದೆ. ಆದರೆ ಅಫ್ಘಾನಿಸ್ತಾನವು ಇದನ್ನು ನಿರಾಕರಿಸಿದ್ದು, ಈ ದಾಳಿಗಳಲ್ಲಿ ಕೇವಲ 13 ಜನ ಮೃತಪಟ್ಟಿದ್ದಾರೆ ಮತ್ತು ಪಾಕಿಸ್ತಾನದ 55 ಸೈನಿಕರನ್ನು ತಮ್ಮ ಪಡೆಗಳು ಹತ್ಯೆ ಮಾಡಿವೆ ಎಂದು ಪ್ರತಿ-ದಾಳಿ ಮಾಡಿದೆ.

ಜಾಗತಿಕ ಆತಂಕ ಮತ್ತು ಭಾರತದ ನಿಲುವು

ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆಯೇ ದಕ್ಷಿಣ ಏಷ್ಯಾದಲ್ಲಿ ಈ ಎರಡು ಮುಸ್ಲಿಂ ರಾಷ್ಟ್ರಗಳ ನಡುವೆ ಯುದ್ಧ ಆರಂಭವಾಗಿರುವುದು ಜಾಗತಿಕ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳು ಸಂಧಾನಕ್ಕಾಗಿ ಪ್ರಯತ್ನಿಸುತ್ತಿದ್ದರೂ, ರಣಕಣದಲ್ಲಿ ಶಾಂತಿ ಮರೀಚಿಕೆಯಾಗಿದೆ. ಈ ನಡುವೆ ಭಾರತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದೆ,(ಏಜೆನ್ಸೀಸ್).