ಟಿ20 ವಿಶ್ವ​ಕಪ್​; ವಿಲ್ ಜ್ಯಾಕ್ಸ್ ಸ್ಪಿನ್​ ಮೋಡಿ, ಪಲ್ಲೆಕೆಲೆಯಲ್ಲಿ ಲಂಕಾ ದಹನ: 51 ರನ್‌ಗಳಿಂದ ಗೆದ್ದ ಆಂಗ್ಲರು 
ವಿದೇಶ

ಟಿ20 ವಿಶ್ವ​ಕಪ್​; ವಿಲ್ ಜ್ಯಾಕ್ಸ್ ಸ್ಪಿನ್​ ಮೋಡಿ, ಪಲ್ಲೆಕೆಲೆಯಲ್ಲಿ ಲಂಕಾ ದಹನ: 51 ರನ್‌ಗಳಿಂದ ಗೆದ್ದ ಆಂಗ್ಲರು | England win

ಪಲ್ಲೆಕೆಲೆ: ಟಿ20 ವಿಶ್ವಕಪ್​ನ ಸೂಪರ್ 8 ಹಂತದ ಮೊದಲ ಪಂದ್ಯದಲ್ಲೇ ಮಾಜಿ ಚಾಂಪಿಯನ್ ಇಂಗ್ಲೆಂಡ್(England win) ತನ್ನ ಅಸಲಿ ಆಟ ಪ್ರದರ್ಶಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಅವರದ್ದೇ ನೆಲದಲ್ಲಿ 51 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಸ್ಪಿನ್ನರ್‌ಗಳ ಜಾದೂ ಮತ್ತು ಫಿಲ್ ಸಾಲ್ಟ್ ಅವರ ಸಮಯೋಚಿತ ಬ್ಯಾಟಿಂಗ್ ಇಂಗ್ಲೆಂಡ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಫಿಲ್ ಸಾಲ್ಟ್ ಸ್ಫೋಟಕ ಅರ್ಧಶತಕ: ಇಂಗ್ಲೆಂಡ್‌ಗೆ ಸಾಧಾರಣ ಮೊತ್ತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಶ್ರೀಲಂಕಾದ ಸ್ಪಿನ್ ಜಾಲಕ್ಕೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ (62 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟ ನಡೆಸದಿದ್ದರೆ ಇಂಗ್ಲೆಂಡ್ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ವಿಲ್ ಜ್ಯಾಕ್ಸ್ (21) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಲಂಕಾ ಸ್ಪಿನ್ನರ್ ದುನಿತ್ ವೆಲ್ಲಲಾಗೆ (3 ವಿಕೆಟ್) ಮತ್ತು ಮಹೇಶ್ ತೀಕ್ಷಣ ಅವರ ದಾಳಿಗೆ ತತ್ತರಿಸಿದರು.

ಲಂಕಾ ಬ್ಯಾಟಿಂಗ್ ಕುಸಿತ: ವಿಲ್ ಜ್ಯಾಕ್ಸ್ ಸ್ಪಿನ್ ಮ್ಯಾಜಿಕ್..!

147 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‌ನ ಪಾರ್ಟ್-ಟೈಮ್ ಸ್ಪಿನ್ನರ್ ವಿಲ್ ಜ್ಯಾಕ್ಸ್ ಆಘಾತ ನೀಡಿದರು. ಪವರ್‌ಪ್ಲೇ ಅವಧಿಯಲ್ಲೇ ಕೇವಲ 19 ಎಸೆತಗಳ ಅಂತರದಲ್ಲಿ ಲಂಕಾ ತಂಡವು 15/0 ರಿಂದ 34/5 ಕ್ಕೆ ಕುಸಿಯುವ ಮೂಲಕ ಹರಾಕಿರಿ ಮಾಡಿಕೊಂಡಿತು. ಜ್ಯಾಕ್ಸ್ ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಕಿತ್ತು ಲಂಕಾದ ಸೊಕ್ಕಡಗಿಸಿದರು.

ನಾಯಕನ ಹೋರಾಟ ವ್ಯರ್ಥ: 95 ರನ್‌ಗಳಿಗೆ ಆಲೌಟ್

ಶ್ರೀಲಂಕಾ ತಂಡದ ಪರ ನಾಯಕ ದಸುನ್ ಶಾನಕ (30 ರನ್) ಕೊನೆಯವರೆಗೂ ಹೋರಾಟ ನಡೆಸಿದರೂ, ಅವರಿಗೆ ಇತರ ಬ್ಯಾಟರ್‌ಗಳಿಂದ ಯಾವುದೇ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಶ್ರೀಲಂಕಾ 16.4 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಸರ್ವಪತನ ಕಂಡಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಶ್ರೀಲಂಕಾದ 3ನೇ ಅತಿ ಕಡಿಮೆ ಮೊತ್ತವಾಗಿದ್ದು, ಇಂಗ್ಲೆಂಡ್ ಸ್ಪಿನ್ನರ್‌ಗಳು ಒಟ್ಟು 7 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದರು,(ಏಜೆನ್ಸೀಸ್).