ಸಿಡ್ನಿ ಗುಂಡಿನ ದಾಳಿಯ ಉಗ್ರ ನವೀದ್ ಅಕ್ರಮ್
- ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಉಗ್ರರ ಗುಂಡಿನ ದಾಳಿ
- ಗುಂಡಿನ ದಾಳಿಯಲ್ಲಿ 12 ಮಂದಿ ಬಲಿ
- ನವೀದ್ ಅಕ್ರಮ್ ಮೂಲತಃ ಪಾಕ್ನ ಲಾಹೋರ್ ಮೂಲದವನು ಎನ್ನಲಾಗಿದೆ
ಆಸ್ಟ್ರೇಲಿಯಾ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 29 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಶೂಟರ್‌ಗಳಲ್ಲಿ ಒಬ್ಬರು ಸಾವನ್ನಪ್ಪಿದರೆ, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಸಿಡ್ನಿಯಲ್ಲಿ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಹನುಕ್ಕಾ ಹಬ್ಬದ ಆಚರಣೆಯ ಮೊದಲ ದಿನದಂದು ಈ ದಾಳಿಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಡ್ನಿ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಶಂಕೆಗಳು ಈಗ ಬಲವಾಗಿವೆ.
ಬೋಂಡಿ ಬೀಚ್ ಗುಂಡಿನ ದಾಳಿಯ ಶಂಕಿತರಲ್ಲಿ ಒಬ್ಬನನ್ನು ಸಿಡ್ನಿಯ ಬೋನಿರಿಗ್‌ನ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಪಾಕಿಸ್ತಾನದ ಲಾಹೋರ್ ಮೂಲದವನು ಎನ್ನಲಾಗಿದೆ. ತನಿಖೆಯ ಭಾಗವಾಗಿ ಭಾನುವಾರ ಸಂಜೆ ನವೀದ್ (24) ನಿವಾಸದ ಮೇಲೆ ಪೊಲೀಸರ ತಂಡ ದಾಳಿ ನಡೆಸಿದೆ.
ಯಾರೀ ನವೀದ್ ಅಕ್ರಮ್?
ಬಹು ವರದಿಗಳ ಪ್ರಕಾರ, ನವೀದ್ ಅಕ್ರಮ್ ಸಿಡ್ನಿಯ ಅಲ್-ಮುರಾದ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿ. ಗುಂಡಿನ ದಾಳಿಯಲ್ಲಿ ಭಾಗಿಯಾದ ಇಬ್ಬರು ಶೂಟರ್ಗಳ ಪೈಕಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಗುಂಡಿನ ದಾಳಿಯಲ್ಲಿ ಮೂರನೇ ಶೂಟರ್ ಭಾಗಿಯಾಗಿದ್ದಾನೆಯೇ ಎಂದು ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ವೈರಲ್ ವಿಡಿಯೋ ಪ್ರಕಾರ, ಗುಂಪಿನ ಮೇಲೆ ದಾಳಿ ಮಾಡಿದವರಲ್ಲಿ ನವೀದ್ ಅಕ್ರಮ್ ಕೂಡ ಇರುವುದಾಗಿ ವರದಿಯಾಗಿದೆ.
ಇದು ಭಯೋತ್ಪಾದಕ ದಾಳಿ: ಆಸ್ಟ್ರೇಲಿಯಾ ಖಾಕಿ ಪಡೆ
ಈ ಸಂದರ್ಭದಲ್ಲಿ ಎನ್ಎಸ್ಡಬ್ಲ್ಯೂ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಮಾತನಾಡಿ, "ಘಟನಾ ಸ್ಥಳದಲ್ಲಿ ಕಂಡುಬಂದ ಶಸ್ತ್ರಾಸ್ತ್ರಗಳ ಪ್ರಕಾರ, ತನಿಖೆಯ ಸಮಯದಲ್ಲಿ ಸಿಕ್ಕ ಕೆಲವು ಇತರ ಪುರಾವೆಗಳು ಇದು ಭಯೋತ್ಪಾದಕ ದಾಳಿ ಎಂಬುದನ್ನು ಒತ್ತಿ ಹೇಳಿವೆ. ಮೃತ ಅಪರಾಧಿಗೆ ಸೇರಿದ ಕಾರಿನಲ್ಲಿ ನಾವು ಸ್ಫೋಟಕ ಸಾಧನಗಳು ಇರುವುದನ್ನು ದೃಢ ಪಡಿಸಿಕೊಂಡಿದ್ದೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).