ಮೆಟಾ ಕಂಪನಿ ತನ್ನ ಎಐ ಮಾಡೆಲ್ಗಳಿಗೆ ತರಬೇತಿ ನೀಡುವುದಕ್ಕಾಗಿ ಉದ್ಯೋಗಿಗಳ ಕಂಪ್ಯೂಟರ್ ಚಟುವಟಿಕೆಗಳನ್ನು ಗಮನಿಸುವ ‘ಮಾಡೆಲ್ ಕೆಪ್ಯಾಬಿಲಿಟಿ ಇನಿಶಿಯೇಟಿವ್’ (ಎಂಸಿಐ) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ತಂತ್ರಜ್ಞಾನ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಏನೆಲ್ಲಾ ಟ್ರಾ್ಯಕ್ ಮಾಡಲಾಗುತ್ತದೆ?: ಉದ್ಯೋಗಿಗಳು ತಮ್ಮ ಕೆಲಸದ ಲ್ಯಾಪ್ಟಾಪ್ಗಳಲ್ಲಿ ಒತ್ತುವ ಕೀಲಿಗಳು (ಕೀ ಸ್ಟ್ರೋಕ್ಸ್), ಮೌಸ್ ಚಲನೆಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಈ ತಂತ್ರಜ್ಞಾನವು ದಾಖಲಿಸಿಕೊಳ್ಳುತ್ತದೆ. ವಿಶೇಷವಾಗಿ ಜಿಮೇಲ್, ವಿಎಸ್ ಕೋಡ್ ಮತ್ತು ಮೆಟಾಮಾಟೆಯಂತಹ ಆಪ್ಗಳ ಬಳಕೆಯನ್ನು ಇದು ಗಮನಿಸುತ್ತದೆ.
ಉದ್ದೇಶವೇನು?: ಮನುಷ್ಯರು ಕಂಪ್ಯೂಟರ್ನಲ್ಲಿ ದೈನಂದಿನ ಕೆಲಸಗಳನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಎಐ ಏಜೆಂಟ್ಗಳಿಗೆ ಕಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಉದಾಹರಣೆಗೆ, ಡ್ರಾಪ್ಡೌನ್ ಮೆನು, ಶಾರ್ಟ್ಕಟ್ ಕೀಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ದಾಖಲಿಸಿಕೊಂಡು, ಎಐ ಏಜೆಂಟ್ಗಳಿಗೆ ಕಲಿಸಲಾಗುತ್ತದೆ.
ಉದ್ಯೋಗಿಗಳ ಆತಂಕ: ಒಂದು ಕಡೆ ಕಂಪನಿ ಸುಮಾರು 8,000 ಉದ್ಯೋಗಿಗಳನ್ನು, ಅಂದರೆ, ಶೇ. 10ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಕಠಿಣ ನಿಯಮ ಜಾರಿಗೆ ಬಂದಿರುವುದು ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಇದು ದಬ್ಬಾಳಿಕೆ ಎಂದು ಕೆಲವರು ಬಣ್ಣಿಸಿದ್ದಾರೆ. ಈ ಕಣ್ಗಾವಲು ವ್ಯವಸ್ಥೆಯಿಂದ ಹೊರಬರಲು ಅವಕಾಶ ನೀಡುವಂತೆ ಉದ್ಯೋಗಿಗಳು ಆಂತರಿಕವಾಗಿ ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕಂಪನಿಯ ಸಿಟಿಒ ಆಂಡ್ರೂ್ಯ ಬೋಸ್ವರ್ತ್, ಕಂಪನಿ ನೀಡಿರುವ ಲ್ಯಾಪ್ಟಾಪ್ಗಳಲ್ಲಿ ಈ ವ್ಯವಸ್ಥೆಯನ್ನು ನಿರಾಕರಿಸುವ ಯಾವುದೇ ಆಯ್ಕೆ ನಿಮಗಿಲ್ಲ. ನೀವು ಕೋಪಗೊಳ್ಳಬಹುದು ಅಥವಾ ಆಘಾತಕ್ಕೊಳಗಾಗಬಹುದು, ಆದರೆ ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ನೇರವಾಗಿ ಹೇಳಿದ್ದಾರೆ. ಆದರೆ ಈ ಡೇಟಾವನ್ನು ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಬಳಸುವುದಿಲ್ಲ. ವೈಯಕ್ತಿಕ ಫೋನ್ಗಳ ಮೇಲೆ ಇದು ನಿಗಾ ಇಡುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ಕಂಪನಿ ಸಭೆಯಲ್ಲಿ ಮಾರ್ಕ್ ಜುಕರ್ಬರ್ಗ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹೊರಗಿನ ಕಾಂಟ್ರಾಕ್ಟರ್ಗಳಿಗಿಂತ ಮೆಟಾ ಉದ್ಯೋಗಿಗಳು ಹೆಚ್ಚು ಬುದ್ಧಿವಂತರಾಗಿದ್ದು, ಅವರ ಕೆಲಸದ ವಿಧಾನದ ಮೂಲಕ ಸಂಗ್ರಹಿಸಿದ ಡೇಟಾದಿಂದ ಎಐ ಮಾಡೆಲ್ಗಳನ್ನು ಹೆಚ್ಚು ಶಕ್ತಿಯುತವಾಗಿ ತರಬೇತುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಯು ಸಾಫ್ಟ್ವೇರ್ ಎಂಜಿನಿಯರ್ಗಳ ಬದಲಿಗೆ ಎಐ ಬಿಲ್ಡರ್ ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ಅಂದರೆ ಉದ್ಯೋಗಿಗಳು ಕೇವಲ ಕೋಡಿಂಗ್ ಮಾಡುವುದಷ್ಟೇ ಅಲ್ಲದೆ, ಎಐ ಅನ್ನು ಹೇಗೆ ತರಬೇತಿಗೊಳಿಸಬೇಕು ಎಂಬುದರ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.
ಈ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದ ಬೆನ್ನಲ್ಲೇ, ಮುಂದಿನ ತಿಂಗಳು ಸುಮಾರು 10% ಉದ್ಯೋಗಿಗಳನ್ನು, ಅಂದರೆ ಸುಮಾರು 8,000 ಜನರನ್ನು ವಜಾಗೊಳಿಸಲು ಮೆಟಾ ಸಿದ್ಧತೆ ನಡೆಸುತ್ತಿದೆ. ಇದು ಉದ್ಯೋಗಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಮೆಟಾದ ಈ ಕ್ರಮ ಕೇವಲ ಅಮೆರಿಕಕ್ಕೆ ಸೀಮಿತವಾಗಿಲ್ಲ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಟೆಕ್ ಹಬ್ಗಳಲ್ಲಿ ಉದ್ಯೋಗಿಗಳ ಖಾಸಗಿತನದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿವೆ.