ಸಾಂದರ್ಭಿಕ ಚಿತ್ರ 
ವಿದೇಶ

ವೈಟ್‌ಹೌಸ್ ಬಾಲ್‌ರೂಮ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್; ಟ್ರಂಪ್ ಫುಲ್ ಖುಷ್ | Ballroom construction begins

ಪ್ರಮುಖ ಮುಖ್ಯಾಂಶಗಳು

  • ವೈಟ್‌ಹೌಸ್ ಬಾಲ್‌ರೂಮ್ ಕಾಮಗಾರಿಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್
  • ತೀರ್ಪನ್ನು ಸ್ವಾಗತಿಸಿರುವ ಟ್ರಂಪ್, ಅತ್ಯಂತ ಅದ್ಭುತ ಯೋಜನೆ ಎಂದು ಬಣ್ಣಿಸಿದ್ದಾರೆ
  • ಕಳೆದ ವರ್ಷ ಐತಿಹಾಸಿಕ ಈಸ್ಟ್ ವಿಂಗ್‌ ಧ್ವಂಸ ಮಾಡಿ ಬಾಲ್‌ರೂಮ್ ನಿರ್ಮಾಣಕ್ಕೆ ಚಾಲನೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ವೈಟ್‌ಹೌಸ್ ಬಾಲ್‌ರೂಮ್ ಯೋಜನೆಗೆ ಸದ್ಯಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ವೈಟ್‌ಹೌಸ್ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಬಾಲ್‌ರೂಮ್‌ನ ಕಾಮಗಾರಿಯನ್ನು ಮುಂದುವರಿಸಲು ಅಮೆರಿಕದ ಸುಪ್ರೀಂ ಕೋರ್ಟ್ ತಾತ್ಕಾಲಿಕ ಅವಕಾಶ ನೀಡಿದೆ. ಈ ಆದೇಶವನ್ನು ಟ್ರಂಪ್ ಸ್ವಾಗತಿಸಿದ್ದಾರೆ.
ಇನ್ನು, ಕೋರ್ಟ್‌ನ ತೀರ್ಪಿಗೆ

ಟ್ರಂಪ್

ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ‘ದಿ ಗ್ರೇಟೆಸ್ಟ್ ಆಫ್ ಇಟ್ಸ್ ಕೈಂಡ್’ ಎಂದು ಬಣ್ಣಿಸಿರುವ ಅವರು, ಇದು ಅಮೆರಿಕದ ಅಧ್ಯಕ್ಷರು ಹಾಗೂ ಸೇನೆಯ ಕನಸಿನ ಯೋಜನೆ ಎಂದು ಹೇಳಿದ್ದಾರೆ. ‘ಅಧ್ಯಕ್ಷರು 150 ವರ್ಷಗಳಿಂದ ಬಯಸಿದ್ದ ಯೋಜನೆ ಇದು. ಸೇನೆಯೂ ಕಳೆದ 100 ವರ್ಷಗಳಿಂದ ಇದನ್ನು ಬಯಸುತ್ತಿತ್ತು. ಅವರ ಆಸೆ ಶೀಘ್ರದಲ್ಲೇ ಈಡೇರುತ್ತೆ’ ಎಂದು ಟ್ರಂಪ್ ಹೇಳಿದ್ದಾರೆ.

ಕಾಮಗಾರಿ ನಿಲ್ಲಿಸುವ ಆದೇಶಕ್ಕೆ ತಾತ್ಕಾಲಿಕ ಬ್ರೇಕ್

ಕಳೆದ ಶುಕ್ರವಾರ ಮಧ್ಯರಾತ್ರಿಯಿಂದ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಕೆಳಹಂತದ ಕೋರ್ಟ್ ಆದೇಶಿಸಿತ್ತು. ಆದರೆ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಆ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದ್ದು, ಕಾನೂನು ಹೋರಾಟ ಮುಂದುವರಿಯುವವರೆಗೆ ಕಾಮಗಾರಿ ಸಾಗಿಸಲು ಅವಕಾಶ ಸಿಕ್ಕಿದೆ. ಆದರೆ ಇದು ಅಂತಿಮ ತೀರ್ಪು ಅಲ್ಲ. ಬಾಲ್‌ರೂಮ್ ಯೋಜನೆಯ ಕಾನೂನುಬದ್ಧತೆ ಕುರಿತ ದೊಡ್ಡ ವಿವಾದ ಇನ್ನೂ ಬಾಕಿಯಿದೆ.

ಐತಿಹಾಸಿಕ ಈಸ್ಟ್ ವಿಂಗ್‌ ಧ್ವಂಸ

ಟ್ರಂಪ್ ಕಳೆದ ವರ್ಷ ವೈಟ್‌ಹೌಸ್‌ನ ಐತಿಹಾಸಿಕ ಈಸ್ಟ್ ವಿಂಗ್‌ ಅನ್ನು ಧ್ವಂಸ ಮಾಡಿ ಅದರ ಜಾಗದಲ್ಲಿ ಬಾಲ್‌ರೂಮ್ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದರು. ಇದಕ್ಕೆ ಐತಿಹಾಸಿಕ ಕಟ್ಟಡಗಳ ಸಂರಕ್ಷಣಾ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇಷ್ಟು ದೊಡ್ಡ ಮಟ್ಟದ ಬದಲಾವಣೆಗೆ ಅಮೆರಿಕ ಕಾಂಗ್ರೆಸ್‌ನಿಂದ ಅನುಮತಿ ಅಗತ್ಯವಿತ್ತೇ ಎಂಬ ಪ್ರಶ್ನೆಯೂ ಇದೀಗ ಕೋರ್ಟ್‌ನಲ್ಲಿ ಚರ್ಚೆಯಾಗುತ್ತಿದೆ. ಕೆಳಹಂತದ ಕೋರ್ಟ್ ಬಾಲ್‌ರೂಮ್ ನಿರ್ಮಾಣಕ್ಕೆ ತಡೆ ನೀಡಿತ್ತು.

ರಾಷ್ಟ್ರೀಯ ಭದ್ರತೆಗೆ ಅಗತ್ಯ ಎಂದ ಟ್ರಂಪ್

ಟ್ರಂಪ್ ಆಡಳಿತವು ಯೋಜನೆ ಕೇವಲ ಕಾರ್ಯಕ್ರಮಗಳಿಗಾಗಿ ನಿರ್ಮಿಸುತ್ತಿರುವ ಕಟ್ಟಡವಲ್ಲ, ಅಧ್ಯಕ್ಷರ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ವಾದಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸಿದ Solicitor General John Sauer, ಟ್ರಂಪ್ ವೈಟ್‌ಹೌಸ್‌ನ ಸಾಮಾನ್ಯ ಬಾಡಿಗೆದಾರರಲ್ಲ, ಅವರು ಅಮೆರಿಕದ ಕಾರ್ಯಾಂಗದ ಚುನಾಯಿತ ಮುಖ್ಯಸ್ಥರು ಎಂದು ಹೇಳಿದ್ದಾರೆ. ವೈಟ್‌ಹೌಸ್ ಸಂಕೀರ್ಣವನ್ನು ನವೀಕರಿಸುವ ಮತ್ತು ಭದ್ರಪಡಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂಬುದು ಆಡಳಿತದ ವಾದ.
ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶದಿಂದ ಟ್ರಂಪ್​ಗೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ಆದರೆ ವೈಟ್‌ಹೌಸ್ ಬಾಲ್‌ರೂಮ್ ಯೋಜನೆಯ ಭವಿಷ್ಯದ ಬಗ್ಗೆ ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ,(ಏಜೆನ್ಸೀಸ್​).