ಘಟನೆಯ ಸ್ಥಳ 
ವಿದೇಶ

ಪಾಕಿಸ್ತಾನದಲ್ಲಿ ಪೊಲೀಸ್ ಚೆಕ್​ ಪೋಸ್ಟ್ ಮೇಲೆ ಉಗ್ರರಿಂದ ಆತ್ಮಾಹುತಿ ದಾಳಿ: ಕನಿಷ್ಠ 15 ಮಂದಿ ಸಾವು | Suicide attack

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಂಟಿ ಪೊಲೀಸ್ ಚೆಕ್ ಪೋಸ್ಟ್ ಮೇಲೆ ಶುಕ್ರವಾರ(ಜು/ 24) ಭಯೋತ್ಪಾದಕರು ಆತ್ಮಾಹುತಿ ದಾಳಿ(Suicide attack) ನಡೆಸಿದ್ದು, ಪರಿಣಾಮ ಓರ್ವ ಸಾಮಾನ್ಯ ಪ್ರಜೆ ಸೇರಿ 15 ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್, ಟ್ಯಾಂಕ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ ಎಂದು ಹೇಳಿದೆ. ದಾಳಿಕೋರರು ಆರಂಭದಲ್ಲಿ ಚೆಕ್ ಪೋಸ್ಟ್‌ನ ಪರಿಧಿಯನ್ನು ಭೇದಿಸಲು ಪ್ರಯತ್ನಿಸಿದರು ಆದರೆ ಭದ್ರತಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಿದರು. ಭದ್ರತಾ ಪಡೆಗಳ ನಡೆಸಿದ ಗುಂಡಿನ ಚಕಮಕಿಯಲ್ಲಿ 15 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ತಿಳಿಸಿದೆ.
ಬಳಿಕ ಉಗ್ರರು ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಚೆಕ್ ಪೋಸ್ಟ್‌ನ ಪರಿಧಿಯ ಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಪೋಟ ಸಂಭವಿಸಿತು. ಸ್ಫೋಟದ ಪರಿಣಾಮದಿಂದಾಗಿ, ಚೆಕ್ ಪೋಸ್ಟ್‌ನಲ್ಲಿನ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿದ್ದು, ಪರಿಣಾಮವಾಗಿ 12 ಮಿಲಿಟರಿ ಸಿಬ್ಬಂದಿ, ಇಬ್ಬರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಹುತಾತ್ಮರಾಗಿದ್ದಾರೆ ಎಂದಿದೆ.
ಇನ್ನೂ ಘಟನೆ ನಡೆದ ಪ್ರದೇಶದಲ್ಲಿ ಉಳಿದಿರುವ ಯಾವುದೇ ಉಗ್ರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ. ಭದ್ರತಾ ಪಡೆಗಳು "ಅಜ್ಮ್-ಇ-ಇಸ್ತೆಹ್ಕಮ್" ಅಭಿಯಾನದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಮುಂದುವರೆಸುತ್ತದೆ. ನಮ್ಮ ವೀರ ಸೈನಿಕರ ಈ ತ್ಯಾಗಗಳು ನಮ್ಮ ರಾಷ್ಟ್ರವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ನಮ್ಮ ಅಚಲ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದೆ (ಏಜೆನ್ಸೀಸ್).