ಸೂರ್ಯನ ಮೇಲೆ ಮನುಷ್ಯ ಬಿದ್ದಂತೆ ಭಾಸವಾಗುವ ವೈರಲ್ ಫೋಟೋ
- ಸೂರ್ಯನ ಮೇಲೆ ಮನುಷ್ಯ ಬೀಳುತ್ತಿರುವಂತೆ ಭಾಸವಾಗುವ ಫೋಟೋ ವೈರಲ್
- ಕ್ಯಾಮೆರಾ ಕಣ್ಣಲ್ಲಿ ಏನೆಲ್ಲ ಅದ್ಭುತ ಸೃಷ್ಟಿಸಬಹುದು ಅನ್ನೋದಕ್ಕೆ ವೈರಲ್ ಫೋಟೋ ಸಾಕ್ಷಿ
- ನವೆಂಬರ್ 8ರ ಶನಿವಾರದಂದು ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
- ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗ್ರಾಫರ್ ಮೆಕಾರ್ಥಿ
The Fall Of Icarus : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಫೋಟೋ ನೋಡಿದವರು ಒಂದು ಕ್ಷಣ ತಮ್ಮ ಕಣ್ಣುಗಳನ್ನು ತಾವೇ ನಂಬುತ್ತಿಲ್ಲ. ಅಂಥದ್ದೇನಿದೆ ಆ ಫೋಟೋದಲ್ಲಿ ಎಂದು ನೀವು ಪ್ರಶ್ನೆ ಮಾಡಬಹುದು. ಏನಿದೆ ಅಂದರೆ, ಫೋಟೋಗ್ರಾಫರ್ ಒಬ್ಬರ ಕೈಚಳಕ ಆ ಫೋಟೋದಲ್ಲಿ ಅಡಗಿದೆ. ಕ್ಯಾಮೆರಾ ಕಣ್ಣಲ್ಲಿ ಏನೆಲ್ಲ ಅದ್ಭುತಗಳನ್ನು ಸೃಷ್ಟಿ ಮಾಡಬಹುದು ಅನ್ನೋದಕ್ಕೆ ವೈರಲ್ ಫೋಟೋ ತಾಜಾ ಸಾಕ್ಷಿಯಾಗಿದೆ.
ಹೌದು, ವೈರಲ್ ಫೋಟೋದಲ್ಲಿ ಮನುಷ್ಯನೊಬ್ಬ ಸೌರ ಮಂಡಲದ ಅಧಿಪತಿ ಸೂರ್ಯನ ಮೇಲೆ ಬೀಳುತ್ತಿರುವಂತೆ ಭಾಸವಾಗುತ್ತದೆ. ಸೂರ್ಯ ಉರಿಯುವ ಬೆಂಕಿ ಚೆಂಡು ಅನ್ನೋದು ಎಲ್ಲರಿಗೂ ಗೊತ್ತಿದೆ. ಅಲ್ಲದೆ, ನಮ್ಮ ಭೂಮಿಯಿಂದ ಸೂರ್ಯ ಬರೋಬ್ಬರಿ 149.59 ಮಿಲಿಯನ್ ಕಿ.ಮೀ ದೂರದಲ್ಲಿದ್ದಾನೆ. ಹೀಗಿರುವಾಗ ಅಷ್ಟೊಂದು ಸ್ಪಷ್ಟವಾಗಿ ಫೋಟೋ ಸೆರೆ ಹಿಡಿಯಲು ಹೇಗೆ ಸಾಧ್ಯವಾಯಿತು ಅಂತ ವೈರಲ್ ಫೋಟೋ ನೋಡಿದವರು ಪ್ರಶ್ನೆ ಮಾಡುತ್ತಿದ್ದಾರೆ.
ವಿವರಗಳಿಗೆ ಹೋಗುವುದಾದರೆ, ಈ ಅದ್ಭುತ ಫೋಟೋವನ್ನು ಆಂಡ್ರಿವ್ ಮೆಕಾರ್ಥಿ ಎಂಬ ಫೋಟೋಗ್ರಾಫರ್ ಕ್ಲಿಕ್ಕಿಸಿದ್ದಾರೆ. ಇವರು ಅಮೆರಿಕದ ಅರಿಝೋನಾ ಮೂಲದವರು. ನವೆಂಬರ್ 8ರ ಶನಿವಾರದಂದು ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಸಂಗೀತಗಾರ ಮತ್ತು ಸ್ಕೈ ಡೈವರ್ ಗೇಬ್ರಿಯಲ್ ಬ್ರೌನ್ ಎಂಬುವರು ಸಣ್ಣ ಪ್ರೊಪೆಲ್ಲರ್ ಸಾಮರ್ಥ್ಯದ ವಿಮಾನದಿಂದ ಸುಮಾರು 3500 ಅಡಿ ಅಥವಾ 1070 ಮೀಟರ್ ಎತ್ತರದಿಂದ ಜಿಗಿಯುವಾಗ ಅದೇ ಸಮಯದಲ್ಲಿ ಸುಮಾರು 8000 ಅಡಿ ಅಥವಾ 2440 ಮೀಟರ್ ಅಂತರದಿಂದ ಮೆಕಾರ್ಥಿ ಅವರು ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಗೇಬ್ರಿಯಲ್ ಅವರು ಸೂರ್ಯ ಮುಂದೆ ಹಾದು ಹೋಗುವ ಸಮಯಕ್ಕೆ ಸರಿಯಾಗಿ ಈ ಅದ್ಭುತ ಫೋಟೋವನ್ನು ಕ್ಲಿಕ್ಕಿಸಲಾಗಿದೆ.
ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೆಕಾರ್ಥಿ, "ದಿ ಫಾಲ್ ಆಫ್ ಇಕಾರಸ್" ಎಂದು ಕರೆಯಲ್ಪಡುವ ಈ ಫೋಟೋಗೆ ಸಾಕಷ್ಟು ಪ್ಲಾನಿಂಗ್ ಅಗತ್ಯವಿತ್ತು. ನನಗೆ ತಿಳಿದಿರುವತೆ ಈ ಫೋಟೋ ಅಸ್ತಿತ್ವದಲ್ಲಿ ಇರುವ ಮೊದಲ ಫೋಟೋ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಮೆಕಾರ್ಥಿ ಅವರು ತಮ್ಮ ಟ್ವೀಟ್ನಲ್ಲಿ ಇಕಾರಸ್ ಎಂಬ ಪದವನ್ನು ಬಳಸಿದ್ದಾರೆ. ಅದು ಓರ್ವ ವ್ಯಕ್ತಿಯ ಹೆಸರು. ಗ್ರೀಕ್ ಪುರಾಣಗಳಲ್ಲಿ ಬರುವ ಡೇಡಾಲಸ್‌ನ ಮಗನಾದ ಇಕಾರಸ್ನ ಹೆಸರು. ಸೂರ್ಯನ ಹತ್ತಿರ ಹಾರಾಡಬಾರದು ಎಂಬ ತನ್ನ ತಂದೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಮೇಣ ಮತ್ತು ಗರಿಗಳ ರೆಕ್ಕೆಗಳೊಂದಿಗೆ ಹಾರುತ್ತಾ ಸಾವಿಗೆ ಹಾರಿದ ಪ್ರಸಿದ್ಧ ವ್ಯಕ್ತಿಯೇ ಈ ಇಕಾರಸ್ ಎಂದು ಹೇಳಲಾಗಿದೆ.
ಹುಚ್ಚುತನದ ಸವಾಲುಗಳ ನಡುವೆಯೂ ಸೆರೆಹಿಡಿಯಲಾದ ಒಂದು ಅವಾಸ್ತವಿಕ ಕ್ಷಣವಿದು. ನಾವು ಈ ಫೋಟೋವನ್ನು "ದಿ ಫಾಲ್ ಆಫ್ ಇಕಾರಸ್" ಎಂದು ಕರೆಯುತ್ತೇವೆ ಎಂದು ಮೆಕಾರ್ಥಿ ಬರೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಅನೇಕ ನೆಟ್ಟಿಗರು ಮೆಕಾರ್ಥಿ ಅವರ ಕೈಚಳಕ ಕಂಡು ಹುಬ್ಬೇರಿಸಿದ್ದಾರೆ. ಖಂಡಿತವಾಗಿ ಈ ಫೋಟೋಗ್ರಾಫರ್ ಕೆಲವು ಪ್ರಶಸ್ತಿಗಳನ್ನು ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದಕ್ಕಾಗಿಯೇ ನಾವು ನಿಜವಾದ ಮಾನವ ನಿರ್ಮಿತ ಕಲೆಯನ್ನು ಬೆಂಬಲಿಸುತ್ತಲೇ ಇರಬೇಕು. ಈ ಫೋಟೋ ತುಂಬಾ ಸುಂದರವಾಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, ಇದು ಸಂಪೂರ್ಣವಾಗಿ ಅದ್ಭುತವಾಗಿದೆ. ಇದಕ್ಕಾಗಿ ತುಂಬಾ ಶ್ರಮ ಪಡಲಾಗಿದೆ. ನಿಮಗೆ ಅಭಿನಂದನೆಗಳು ಎಂದಿದ್ದಾರೆ. ‘
ಅಂದಹಾಗೆ, ಮೆಕಾರ್ಥಿ ಅವರು ಸೂರ್ಯನ ಅದ್ಭುತ ಚಿತ್ರಗಳನ್ನು ಸೆರೆಹಿಡಿದು ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಸೂರ್ಯನ ಮುಂದೆ ಹಾದುಹೋಗುವುದನ್ನು ಸೆರೆಹಿಡಿದಿದ್ದರು. ಆಗಲೂ ಫೋಟೋ ವೈರಲ್ ಆಗಿತ್ತು. ಐಎಸ್ಎಸ್ ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಪರಿಭ್ರಮಿಸುತ್ತದೆ, (ಏಜೆನ್ಸೀಸ್).