South Korea: ದಕ್ಷಿಣ ಕೊರಿಯಾದಲ್ಲಿ ಈ ವಾರ ನಡೆಯಲಿರುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಿರಲು ಇದೀಗ ಸರ್ಕಾರ ಮಹತ್ವದ ನಿರ್ಧಾರವನ್ನೇ ಕೈಗೊಂಡಿದೆ.
ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಕನ್ನಡಕವನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದು, ತೆರಿಗೆ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಸ್ಮಾರ್ಟ್ ಸಾಧನ ಬಳಸಿ ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಕಟ್ಟುನಿಟ್ಟಿನ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ದೇಶದ ಅತ್ಯಂತ ಮಹತ್ವದ ಪರೀಕ್ಷೆಗಳಲ್ಲಿ ಒಂದಾಗಿರುವ ಕಾಲೇಜು ಪ್ರವೇಶ ಸಾಮರ್ಥ್ಯ ಪರೀಕ್ಷೆ (CSAT)ಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ತೆರಿಗೆ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಸ್ಮಾರ್ಟ್ ಸಾಧನ ಬಳಸಿ ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನೇ ಮುಂದೂಡಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಆದರೆ, ಪರೀಕ್ಷೆ ಮುಂದೂಡುವ ಸಾಧ್ಯತೆಯನ್ನು ಶಿಕ್ಷಣ ಸಚಿವಾಲಯ ತಳ್ಳಿಹಾಕಿದೆ.
ಸೋಮವಾರ ಸಂಸತ್ತಿನ ವಿಚಾರಣೆ ವೇಳೆ ಮಾತನಾಡಿದ ಶಿಕ್ಷಣ ಸಚಿವ ಚೋಯ್ ಕ್ಯೋ-ಜಿನ್, ಪರೀಕ್ಷೆಯ ಪ್ರತಿಯೊಂದು ಅವಧಿಯಲ್ಲೂ ವಿದ್ಯಾರ್ಥಿಗಳು ಧರಿಸುವ ಕನ್ನಡಕಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಜುಲೈ ತಿಂಗಳಿನಿಂದಲೇ ಸ್ಮಾರ್ಟ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಸ್ಮಾರ್ಟ್ ಕನ್ನಡಕಗಳ ಮೂಲಕ ರಹಸ್ಯವಾಗಿ ಫೋಟೋ ತೆಗೆಯುವುದು, ವಿಡಿಯೋ ಚಿತ್ರೀಕರಿಸುವುದು ಹಾಗೂ ಆಡಿಯೋ ದಾಖಲಿಸುವ ಸಾಧ್ಯತೆ ಇರುವುದರಿಂದ ಇಂತಹ ಸಾಧನಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೊಠಡಿಯ ಹೊರಗೆ ನಿಷೇಧಿತ ಸಾಧನಗಳ ವಿವರ ಮತ್ತು ನಕಲು ಮಾಡಿದರೆ ಎದುರಾಗುವ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ಫಲಕಗಳನ್ನು ಹಾಕಲಾಗುತ್ತದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸ್ಮಾರ್ಟ್ ಸಾಧನಗಳ ಮೇಲೆ ನಿಗಾ ಇಡಲು ಕನಿಷ್ಠ ಒಬ್ಬ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗುತ್ತದೆ. ಅನುಮಾನಾಸ್ಪದ ಪ್ರಕರಣಗಳನ್ನು ತಕ್ಷಣ ನಿರ್ಧರಿಸಲು ಸಾಧ್ಯವಾಗದಿದ್ದರೆ, ಪರೀಕ್ಷಾ ಕೇಂದ್ರಗಳು, ಸ್ಥಳೀಯ ಶಿಕ್ಷಣ ಕಚೇರಿಗಳು ಮತ್ತು ಸಚಿವಾಲಯದ ನಿಯಂತ್ರಣ ಕೊಠಡಿಯ ನಡುವೆ ಸಂಪರ್ಕ ಕಲ್ಪಿಸುವ ಸಹಾಯವಾಣಿಯನ್ನೂ ಸ್ಥಾಪಿಸಲಾಗುತ್ತದೆ. ಇದಲ್ಲದೆ, ರೇಡಿಯೋ ಸಿಗ್ನಲ್ ಪತ್ತೆಹಚ್ಚುವ ಸಾಧನಗಳಂತಹ ತಂತ್ರಜ್ಞಾನಗಳನ್ನು ಬಳಸುವ ಕುರಿತು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ವರ್ಷದ ಪರೀಕ್ಷೆಯಲ್ಲಿ ಅವುಗಳನ್ನು ಅಳವಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಪರೀಕ್ಷೆಯ ವೇಳೆ ಸ್ಮಾರ್ಟ್ ಸಾಧನಗಳನ್ನು ಧರಿಸಿದ ಅಥವಾ ಬಳಸಿದ ಅಭ್ಯರ್ಥಿಗಳ ಆ ವರ್ಷದ ಫಲಿತಾಂಶವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ, ಮುಂದಿನ ವರ್ಷ ಪರೀಕ್ಷೆ ಬರೆಯುವುದಕ್ಕೂ ನಿರ್ಬಂಧ ವಿಧಿಸಲಾಗುತ್ತದೆ. ಪ್ರಸ್ತುತ ಇರುವ ಒಂದು ವರ್ಷದ ನಿಷೇಧವನ್ನು ಮೂರುರಿಂದ ಹತ್ತು ವರ್ಷಗಳವರೆಗೆ ವಿಸ್ತರಿಸುವ ಕುರಿತು ಸಂಸತ್ತಿನೊಂದಿಗೆ ಚರ್ಚೆ ನಡೆಸುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ನಕಲು ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರಿಗೆ ದೂರು ನೀಡುವ ಸಾಧ್ಯತೆಯೂ ಇದೆ. ಈ ಕಟ್ಟುನಿಟ್ಟಿನ ಕ್ರಮಗಳಿಗೆ ಕಾರಣವಾಗಿರುವುದು ಇತ್ತೀಚೆಗೆ ನಡೆದ ತೆರಿಗೆ ಲೆಕ್ಕಪರಿಶೋಧಕರ ಪರೀಕ್ಷೆಯ ನಕಲು ಪ್ರಕರಣ. ಈ ವರ್ಷದ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಅಭ್ಯರ್ಥಿಯೊಬ್ಬರು, ಐಟೆಕ್ ಕ್ಯಾಮರಾ ಬಳಸಿ ಪ್ರಶ್ನೆಪತ್ರಿಕೆಯ ಫೋಟೋಗಳನ್ನು ತೆಗೆದು ಎಐಗೆ ಕಳುಹಿಸಿದ್ದರು. ಬಳಿಕ ಸ್ಮಾರ್ಟ್‌ಫೋನ್‌ನಲ್ಲಿ ಉತ್ತರಗಳನ್ನು ಪರಿಶೀಲಿಸಿದ್ದಾಗಿ ಭಾನುವಾರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹಾನ್ ಸಿಯಾಂಗ್-ಸೂಕ್ ಅವರು ಸೋಮವಾರ ತುರ್ತು ತಂಡ ರಚಿಸಿ, ಕಾಲೇಜು ಪ್ರವೇಶ ಪರೀಕ್ಷೆಯ ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ರೂಪಿಸುವಂತೆ ಸೂಚಿಸಿದ್ದಾರೆ. ಎಐ ಆಧಾರಿತ ನಕಲು ಪತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರ ಜತೆಗೆ, ಪರೀಕ್ಷಾ ಅಕ್ರಮಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆಯೂ ಕರೆ ನೀಡಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕೊರಿಯಾದಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಅವಕಾಶಗಳಿಗೆ ಈ ಪ್ರವೇಶ ಪರೀಕ್ಷೆ ನಿರ್ಣಾಯಕ ಆಗಿರುವುದರಿಂದ, ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸರ್ಕಾರ ಈಗ ಟೆಕ್ನಾಲಜಿ ಆಧಾರಿತ ನಿಗಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ,(ಏಜೆನ್ಸೀಸ್).