ಹಾರ್ಮುಜ್ ಜಲಸಂಧಿ ಬಂದ್: ಭಾರತಕ್ಕೆ ಎದುರಾಗಲಿದೆಯೇ ಇಂಧನ ಗಂಡಾಂತರ..?
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಈಗ ಜಾಗತಿಕ ಇಂಧನ(India Oil Crisis) ಮಾರುಕಟ್ಟೆಯನ್ನು ಆಹುತಿ ತೆಗೆದುಕೊಳ್ಳುತ್ತಿದೆ. ವಿಶ್ವದ ತೈಲ ಸಾಗಣೆಯ ಜೀವನಾಡಿ ಎನಿಸಿಕೊಂಡಿರುವ ಹಾರ್ಮುಜ್ ಜಲಸಂಧಿ ಸಂಘರ್ಷದಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದೆ ಎಂಬ ವರದಿಗಳು ಹೊರಬಿದ್ದಿವೆ. ಭಾರತ ತನ್ನ ಒಟ್ಟು ಕಚ್ಚಾ ತೈಲದ ಶೇ. 88 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಅರ್ಧದಷ್ಟು ಪಾಲು ಇದೇ ಹಾರ್ಮುಜ್ ಮಾರ್ಗದ ಮೂಲಕ ಬರುತ್ತದೆ. ಈ ಬಿಕ್ಕಟ್ಟು ಭಾರತದ ಆರ್ಥಿಕತೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ಆತಂಕ ಈಗ ಮನೆಮಾಡಿದೆ.
ಭಾರತದ ಬಳಿ ಎಷ್ಟಿದೆ ತೈಲ ಸಂಗ್ರಹ..?
ಪ್ರಖ್ಯಾತ ಇಂಧನ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ನೀಡಿರುವ ವರದಿಯ ಪ್ರಕಾರ, ಭಾರತವು ಪ್ರಸ್ತುತ ಸುಮಾರು 100 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ಸಂಗ್ರಹವನ್ನು ಹೊಂದಿದೆ. ಇದು ಮಂಗಳೂರು, ಪಾಡೂರು ಮತ್ತು ವಿಶಾಖಪಟ್ಟಣಂನಲ್ಲಿರುವ ಭೂಗತ ವ್ಯೂಹಾತ್ಮಕ ಮೀಸಲು, ತೈಲ ಕಂಪನಿಗಳ ಸ್ಟೋರೇಜ್ ಟ್ಯಾಂಕ್‌ಗಳು ಮತ್ತು ಸಮುದ್ರದಲ್ಲಿ ಭಾರತದತ್ತ ಬರುತ್ತಿರುವ ಹಡಗುಗಳಲ್ಲಿರುವ ತೈಲವನ್ನು ಒಳಗೊಂಡಿದೆ.
ಒಂದು ವೇಳೆ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆ ಸಂಪೂರ್ಣ ಸ್ಥಗಿತಗೊಂಡರೆ, ಭಾರತದ ಬಳಿ ಇರುವ ಈ ಸಂಗ್ರಹವು ಸುಮಾರು 40 ರಿಂದ 45 ದಿನಗಳವರೆಗೆ ದೇಶದ ಅಗತ್ಯವನ್ನು ಪೂರೈಸಬಲ್ಲದು. ಇದು ತಾತ್ಕಾಲಿಕ ಸಮಾಧಾನ ತಂದರೂ, ದೀರ್ಘಕಾಲದ ಯುದ್ಧವು ಭಾರತದ ಪಾಲಿಗೆ ದುಸ್ವಪ್ನವಾಗಲಿದೆ.
ಬೆಲೆ ಏರಿಕೆಯ ಬಿಸಿ: $80 ಗಡಿ ದಾಟಿದ ಬ್ರೆಂಟ್ ಕ್ರೂಡ್
ಇರಾನ್ ಬಿಕ್ಕಟ್ಟು ಶುರುವಾದಾಗಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ಏರಿಕೆಯಾಗಿದ್ದು, ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್‌ಗೆ $80 ದಾಟಿದೆ. ಭಾರತವು ಕಳೆದ ಆರ್ಥಿಕ ವರ್ಷದಲ್ಲಿ ತೈಲ ಆಮದಿಗಾಗಿ 137 ಬಿಲಿಯನ್ ಡಾಲರ್ ವೆಚ್ಚ ಮಾಡಿತ್ತು. ಈಗಿನ ಬೆಲೆ ಏರಿಕೆಯಿಂದಾಗಿ ಭಾರತದ ಆಮದು ಬಿಲ್ ಗಗನಕ್ಕೇರಲಿದ್ದು, ಇದು ದೇಶದ ವಿತ್ತೀಯ ಕೊರತೆಯ ಮೇಲೆ ನೇರ ಪರಿಣಾಮ ಬೀರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ಭಾರತ
ಹಾರ್ಮುಜ್ ಬಂದ್ ಆಗಿರುವುದರಿಂದ ಭಾರತ ಈಗ ಮಧ್ಯಪ್ರಾಚ್ಯದ ಬದಲು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದತ್ತ ಮುಖ ಮಾಡಬೇಕಿದೆ. ಅತಿ ಮುಖ್ಯವಾಗಿ, ಅರೇಬಿಯನ್ ಸಮುದ್ರದಲ್ಲಿ ಸಿದ್ಧವಾಗಿರುವ ರಷ್ಯಾದ ತೈಲ ಹಡಗುಗಳನ್ನು ಭಾರತ ತುರ್ತಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಟ್ರಂಪ್ ಅವರ ಸುಂಕದ ನೀತಿಗಳಿಂದಾಗಿ ಭಾರತ-ಅಮೆರಿಕ ನಡುವಿನ ರಷ್ಯಾ ತೈಲ ಖರೀದಿ ಒಪ್ಪಂದವು ಅತಂತ್ರ ಸ್ಥಿತಿಯಲ್ಲಿದ್ದರೂ, ಪ್ರಸ್ತುತ ಇಂಧನ ಭದ್ರತೆಗಾಗಿ ಭಾರತ ರಷ್ಯಾದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಸರ್ಕಾರದ ಮುಂದಿರುವ ಕಠಿಣ ನಿರ್ಧಾರಗಳು
ಪರಿಸ್ಥಿತಿ ಕೈಮೀರಿದರೆ ಭಾರತ ಸರ್ಕಾರವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.
ರಫ್ತು ಕಡಿತ: ಭಾರತವು ವಿಶ್ವದ ದೊಡ್ಡ ಸಂಸ್ಕರಿತ ತೈಲ ರಫ್ತುದಾರರಲ್ಲಿ ಒಂದು. ದೇಶೀಯ ಬಳಕೆಗಾಗಿ ರಫ್ತನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ದೇಶದ ಒಳಗಿನ ಪೂರೈಕೆಗೆ ಆದ್ಯತೆ ನೀಡಬಹುದು.
ವಿಮೆ ಮತ್ತು ಸಾಗಣೆ ವೆಚ್ಚ: ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಯಾನದ ವಿಮೆ ಮತ್ತು ಹಡಗು ಬಾಡಿಗೆ ದರಗಳು ಹೆಚ್ಚಾಗಿದ್ದು, ಇದು ತೈಲದ ಅಂತಿಮ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ತಜ್ಞರ ಎಚ್ಚರಿಕೆ
ಸದ್ಯಕ್ಕೆ ನಮ್ಮಲ್ಲಿ 45 ದಿನಗಳ ಸಂಗ್ರಹವಿರುವುದು ಸಮಾಧಾನಕರ ವಿಷಯ. ಆದರೆ ಹಾರ್ಮುಜ್ ಜಲಸಂಧಿಯು ದೀರ್ಘಕಾಲ ಬಂದ್ ಆದರೆ, ಜಾಗತಿಕ ಆರ್ಥಿಕತೆಯೇ ಕುಸಿಯಬಹುದು. ಭಾರತಕ್ಕೆ ಈಗ ಬೆಲೆ ಏರಿಕೆಗಿಂತ ಪೂರೈಕೆಯ ಸರಪಳಿ ಕಡಿದುಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು ಎಂದು ಕೆಪ್ಲರ್ ಸಂಸ್ಥೆಯ ವಿಶ್ಲೇಷಕ ಸುಮಿತ್ ರಿಟೋಲಿಯಾ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಭಾರತವು ಈಗ ಯುದ್ಧದ ಕಿಚ್ಚಿನ ನಡುವೆ ತನ್ನ ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳಲು ಚದುರಂಗದಾಟವಾಡಬೇಕಿದೆ. ಮುಂದಿನ 40 ದಿನಗಳು ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿವೆ,(ಏಜೆನ್ಸೀಸ್).