ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಒಂದಾದ ಹೋರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಮತ್ತೊಮ್ಮೆ ಮುಚ್ಚಿರುವುದಾಗಿ ಘೋಷಿಸಿದೆ. ಜೊತೆಗೆ ಈ ಪ್ರದೇಶದತ್ತ ಬರುವ ವಾಣಿಜ್ಯ ಹಾಗೂ ಸರಕು ಸಾಗಣೆ ಹಡಗುಗಳಿಗೆ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸಮುದ್ರ ಮಾರ್ಗದ ರೇಡಿಯೋ ಸಂದೇಶದ ಮೂಲಕ ಈ ಘೋಷಣೆ ಮಾಡಿದೆ.
ಜಲಸಂಧಿ ಮುಚ್ಚಲು ಕಾರಣವೇನು?
ಐಆರ್‌ಜಿಸಿ ಹೇಳುವ ಪ್ರಕಾರ, ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ತನ್ನ ಪಡೆಗಳನ್ನು ಹಿಂಪಡೆದಿಲ್ಲ. ಜೊತೆಗೆ ಅಮೆರಿಕದ ಸೇನಾ ಪಡೆಗಳು ಇನ್ನೂ ಪರ್ಷಿಯನ್ ಕೊಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿವೆ. ಈ ಎರಡು ಅಂಶಗಳು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಡುವೆ ನಡೆದ ಒಪ್ಪಂದದ ಪ್ರಮುಖ ಷರತ್ತುಗಳಾಗಿದ್ದವು ಎಂದು ಇರಾನ್ ಹೇಳಿದೆ. ಈ ಷರತ್ತುಗಳು ಈಡೇರುವವರೆಗೆ ಹೋರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಐಆರ್‌ಜಿಸಿ ಸ್ಪಷ್ಟಪಡಿಸಿದೆ.
ಹಡಗುಗಳಿಗೆ ಗಂಭೀರ ಎಚ್ಚರಿಕೆ
ಜಲಸಂಧಿಯತ್ತ ಯಾವುದೇ ವಾಣಿಜ್ಯ ಅಥವಾ ಸರಕು ಸಾಗಣೆ ಹಡಗುಗಳು ಬರಬಾರದು ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ. "ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಹಡಗುಗಳು ಈ ಪ್ರದೇಶವನ್ನು ತಪ್ಪಿಸಬೇಕು. ಸೂಚನೆಯನ್ನು ಉಲ್ಲಂಘಿಸುವ ಹಡಗುಗಳು ಗುರಿಯಾಗುವ ಸಾಧ್ಯತೆ ಇದೆ" ಎಂದು ಎಚ್ಚರಿಸಲಾಗಿದೆ. ಈ ಹೇಳಿಕೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೊಸ ಆತಂಕ ಹುಟ್ಟಿಸಿದೆ. ಏಕೆಂದರೆ ವಿಶ್ವದ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಣೆ ಇದೇ ಮಾರ್ಗದ ಮೂಲಕ ನಡೆಯುತ್ತದೆ.
ಅಮೆರಿಕದ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕದ ಸೆಂಟ್ರಲ್ ಕಮಾಂಡ್, ಇರಾನ್ ಬಂದರುಗಳ ಮೇಲಿನ ಎರಡು ತಿಂಗಳ ನಿರ್ಬಂಧವನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. ಆದರೆ ನಿರ್ಬಂಧ ಸಂಪೂರ್ಣ ತೆರವಾಗಿಲ್ಲ ಎಂದು ಇರಾನ್ ಏಕೆ ಭಾವಿಸುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.
ಮತ್ತೆ ಹೆಚ್ಚಿದ ಉದ್ವಿಗ್ನತೆ
ಇತ್ತೀಚೆಗೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಂಡುಬಂದಿದ್ದವು. ಆದರೆ ಇರಾನ್ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ರದ್ದುಪಡಿಸಿದ ಬಳಿಕ ಪರಿಸ್ಥಿತಿ ಮತ್ತೆ ಬದಲಾಗಿದೆ. ಇದೀಗ ಹೋರ್ಮುಜ್ ಜಲಸಂಧಿ ಮುಚ್ಚುವ ಘೋಷಣೆ ಹಾಗೂ ಹಡಗುಗಳಿಗೆ ನೀಡಿರುವ ಎಚ್ಚರಿಕೆ ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಮತ್ತೊಮ್ಮೆ ಕಗ್ಗಂಟಾಗಿಸಿದೆ. ವಿಶ್ವದ ತೈಲ ಮಾರುಕಟ್ಟೆ, ಸಾಗಾಣಿಕೆ ಕ್ಷೇತ್ರ ಮತ್ತು ಹಲವು ದೇಶಗಳು ಈ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿವೆ,(ಏಜೆನ್ಸೀಸ್).