ಮುಂದಿನ 48 ಗಂಟೆ ಎಲ್ಲಿದ್ದೀರೋ ಅಲ್ಲೇ ಇರಿ! ಇರಾನ್‌ನಲ್ಲಿರುವ ಭಾರತೀಯರಿಗೆ ಬಿಗಿ ಎಚ್ಚರಿಕೆ!
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಜ್ವಾಲೆ ಅಕ್ಷರಶಃ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಡೆಡ್‌ಲೈನ್ ಮುಗಿಯಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗೆ(Stay Safe Indians) ಭಾರತ ಸರ್ಕಾರವು ಅತ್ಯಂತ ತುರ್ತು ಮತ್ತು ಗಂಭೀರವಾದ ಅಡ್ವೈಸರಿ ಹೊರಡಿಸಿದೆ. ಮುಂದಿನ 48 ಗಂಟೆಗಳ ಕಾಲ ನೀವು ಎಲ್ಲಿದ್ದೀರೋ ಅಲ್ಲೇ ಇರಿ, ಮನೆಯಿಂದ ಹೊರಬರಬೇಡಿ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಭಾರತೀಯ ರಾಯಭಾರ ಕಚೇರಿಯಿಂದ 5 ಪ್ರಮುಖ ಸೂಚನೆಗಳು
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ನೆಲೆಸಿರುವ ಸಾವಿರಾರು ಭಾರತೀಯರಿಗೆ ಈ ಕೆಳಗಿನ ಸೂಚನೆಗಳನ್ನು ನೀಡಿದೆ.
1. ಒಳಾಂಗಣದಲ್ಲೇ ಇರಿ: ಮುಂದಿನ 48 ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ಕಟ್ಟಡಗಳಿಂದ ಹೊರಬರಬಾರದು.
2. ವಿದ್ಯುತ್ ಮತ್ತು ಸೇನಾ ನೆಲೆಗಳಿಂದ ದೂರವಿರಿ: ಅಮೆರಿಕದ ದಾಳಿಯ ಪ್ರಮುಖ ಗುರಿಗಳಾಗಿರುವ ವಿದ್ಯುತ್ ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳ ಸಮೀಪ ಸುಳಿಯಬೇಡಿ.
3. ಮೇಲ್ಮಹಡಿ ಬಳಸಬೇಡಿ: ಬಹುಮಹಡಿ ಕಟ್ಟಡಗಳಲ್ಲಿ ಇರುವವರು ಮೇಲಿನ ಮಹಡಿಗಳಲ್ಲಿ ಇರಬಾರದು, ಸುರಕ್ಷಿತವಾದ ಕೆಳಮಹಡಿ ಅಥವಾ ಬೇಸ್‌ಮೆಂಟ್‌ಗಳನ್ನು ಆಶ್ರಯಿಸಬೇಕು.
4. ಹೋಟೆಲ್‌ನಲ್ಲಿದ್ದರೆ ಅಲ್ಲೇ ಇರಿ: ಎಂಬಸಿ ಬಾಡಿಗೆಗೆ ಪಡೆದಿರುವ ಹೋಟೆಲ್‌ಗಳಲ್ಲಿ ಇರುವವರು ಅಲ್ಲಿನ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
5. ಸಂವಹನ ಇಟ್ಟುಕೊಳ್ಳಿ: ರಾಯಭಾರ ಕಚೇರಿಯ ತುರ್ತು ಸಹಾಯವಾಣಿಗಳೊಂದಿಗೆ ಸದಾ ಸಂಪರ್ಕದಲ್ಲಿರಿ.
ಟ್ರಂಪ್ ನೀಡಿದ ಆ ಭಯಾನಕ 'ಪ್ರಳಯ'ದ ಎಚ್ಚರಿಕೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ನೀಡಿರುವ ಹೇಳಿಕೆ ಇಡೀ ವಿಶ್ವವನ್ನು ನಡುಗಿಸಿದೆ. ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ, ಅದು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ. ಇದು ನಡೆಯುವುದು ನನಗೂ ಇಷ್ಟವಿಲ್ಲ, ಆದರೆ ಬಹುಶಃ ಇದು ನಡೆದೇ ತೀರುತ್ತದೆ ಎಂದು ಬರೆದಿದ್ದಾರೆ. ಇರಾನ್‌ನ ಪ್ರತಿಯೊಂದು ಸೇತುವೆ ಮತ್ತು ಪವರ್ ಪ್ಲಾಂಟ್ ಅನ್ನು ಧೂಳೀಪಟ ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಇದು ಯುದ್ಧಾಪರಾಧ ಆಗಬಹುದು ಎಂಬ ತಜ್ಞರ ಎಚ್ಚರಿಕೆಯನ್ನೂ ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಮಾತುಕತೆ ಸಂಪೂರ್ಣ ಸ್ಥಗಿತ: ಯುದ್ಧವೊಂದೇ ದಾರಿ..?
'ಟೆಹ್ರಾನ್ ಟೈಮ್ಸ್' ವರದಿಯ ಪ್ರಕಾರ, ಇರಾನ್ ಅಮೆರಿಕದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನಗಳನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಅಮೆರಿಕದೊಂದಿಗೆ ಯಾವುದೇ ಸಂದೇಶ ವಿನಿಮಯ ನಡೆಯುತ್ತಿಲ್ಲ ಎಂದು ಇರಾನ್ ಘೋಷಿಸಿದೆ. ಇದು ಸಂಧಾನದ ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.
ಇರಾನ್‌ನ ದಿಟ್ಟ ಪ್ರತ್ಯುತ್ತರ: ನಾವಿನ್ನೂ ಇಲ್ಲೇ ಇದ್ದೇವೆ
ಟ್ರಂಪ್ ಅವರ ಬೆದರಿಕೆಗೆ ಇರಾನ್ ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಟರ್ಕಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದೆ.
ಅಲೆಕ್ಸಾಂಡರ್ ಇದನ್ನು ಸುಟ್ಟು ಹಾಕಿದ್ದ, ಮಂಗೋಲರು ಲೂಟಿ ಮಾಡಿದ್ದರು, ಇತಿಹಾಸವೇ ಇದನ್ನು ಪರೀಕ್ಷಿಸಿದೆ. ಆದರೂ ಇರಾನ್ ಇಂದಿಗೂ ಇಲ್ಲೇ ಇದೆ. ಒಬ್ಬ ಮನೋರೋಗಿಯ ಬೆದರಿಕೆಯಿಂದ ಕಾಲವೇ ಅಳಿಸಲು ಸಾಧ್ಯವಾಗದ ಈ ನಾಗರಿಕತೆಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಅಲ್ಲದೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಎಂದಿಗೂ ಮರೆಯಲಾಗದ ಏಟನ್ನು ತಿನ್ನಲಿವೆ ಎಂದು ಇರಾನ್ ಎಚ್ಚರಿಸಿದೆ.
ಜಗತ್ತಿನ ಕಣ್ಣು ಇಂದು ರಾತ್ರಿ 8 ಗಂಟೆಯ ಮೇಲೆ!
ವಾಷಿಂಗ್‌ಟನ್ ಕಾಲಮಾನ ರಾತ್ರಿ 8:00 (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 5:30) ಇಡೀ ಜಗತ್ತಿಗೆ ನಿರ್ಣಾಯಕವಾಗಲಿದೆ. ಅಮೆರಿಕ ತನ್ನ ಭೀಕರ ಬಾಂಬ್ ದಾಳಿ ಆರಂಭಿಸುತ್ತದೆಯೇ? ಇರಾನ್ ತನ್ನ ಕ್ಷಿಪಣಿಗಳ ಮೂಲಕ ತಿರುಗೇಟು ನೀಡುತ್ತದೆಯೇ? ಎಂಬ ಆತಂಕದಲ್ಲಿ ಇಡೀ ವಿಶ್ವ ಉಸಿರು ಬಿಗಿಹಿಡಿದು ಕಾಯುತ್ತಿದೆ. ವಿಶೇಷವಾಗಿ ಇರಾನ್‌ನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯವು ನಿರಂತರ ನಿಗಾ ವಹಿಸಿದೆ,(ಏಜೆನ್ಸೀಸ್).