ಸ್ವಾತಂತ್ರ್ಯ ಪ್ರತಿಮೆ ( Statue Of Liberty )ಯ ಪ್ರತಿಕೃತಿ  
ವಿದೇಶ

ಚಂಡಮಾರುತದ ಅಬ್ಬರಕ್ಕೆ ಕುಸಿದುಬಿತ್ತು ಸ್ವಾತಂತ್ರ್ಯ ಪ್ರತಿಮೆಯ ಪ್ರತಿಕೃತಿ! ವಿಡಿಯೋ ವೈರಲ್​...Statue Of Liberty

ಪ್ರಮುಖ ಮುಖ್ಯಾಂಶಗಳು

  • ಬ್ರೆಜಿಲ್‌ನ ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದ ಗುವಾಯ್ಬಾ ನಗರಕ್ಕೆ ಅಪ್ಪಳಿಸಿದ ಚಂಡಮಾರುತ
  • ಚಂಡಮಾರುತದ ಅಬ್ಬರಕ್ಕೆ ಕುಸಿದುಬಿದ್ದ 24 ಮೀಟರ್ ಎತ್ತರದ ಸ್ವಾತಂತ್ರ್ಯ ಪ್ರತಿಮೆಯ ಪ್ರತಿಕೃತಿ
  • ಚಂಡಮಾರುತ ಬೀಸುತ್ತಿದ್ದ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ಮೀರಿತ್ತು
ಬ್ರಾಸಿಲಿಯಾ: ಸೋಮವಾರ (ಡಿ. 15) ದಕ್ಷಿಣ ಬ್ರೆಜಿಲ್‌ನ ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದ ಗುವಾಯ್ಬಾ ನಗರಕ್ಕೆ ಭಾರಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಹವಾನಾ ಮೆಗಾಸ್ಟೋರ್‌ನ ಹೊರಗೆ ನಿರ್ಮಿಸಲಾದ 24 ಮೀಟರ್ ಎತ್ತರದ ಸ್ವಾತಂತ್ರ್ಯ ಪ್ರತಿಮೆ ( Statue Of Liberty )ಯ ಪ್ರತಿಕೃತಿ ಕುಸಿದು ಬಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೃಹತ್ ಪ್ರತಿಮೆ ನಿಧಾನವಾಗಿ ಮುಂದಕ್ಕೆ ಬಾಗಿ ಖಾಲಿ ಪಾರ್ಕಿಂಗ್ ಸ್ಥಳದ ಮೇಲೆ ಬೀಳುತ್ತಿರುವ ದೃಶ್ಯ ಭೀಕರವಾಗಿದೆ.
ಬ್ರೆಜಿಲ್ ನಾಗರಿಕ ರಕ್ಷಣಾ ಸಂಸ್ಥೆ ಡೆಫೆಸಾ ಸಿವಿಲ್ ಪ್ರಕಾರ, ಚಂಡಮಾರುತ ಬೀಸುತ್ತಿದ್ದ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ಮೀರಿತ್ತು. ಸದ್ಯ ಇಡೀ ಗುವಾಯ್ಬಾ ಮಹಾನಗರಕ್ಕೆ ತೀವ್ರ ಹವಾಮಾನ ಎಚ್ಚರಿಕೆಗಳನ್ನು ನೀಡಲಾಗಿದೆ. ಇನ್ನು ಚಂಡಮಾರುತದ ರಭಸಕ್ಕೆ ಬಿದ್ದ ಸ್ವಾತಂತ್ರ್ಯದ ಪ್ರತಿಮೆಯನ್ನು 2020ರಲ್ಲಿ ಸ್ಥಾಪಿಸಲಾಯಿತು. ಇದನ್ನು 11 ಮೀಟರ್ ಎತ್ತರದ ಕಾಂಕ್ರೀಟ್ ಬೇಸ್‌ನಲ್ಲಿ ಭವ್ಯವಾಗಿ ನಿಲ್ಲಿಸಲಾಗಿತ್ತು. ಸದ್ಯ ಈ ಪ್ರತಿಮೆ ಕುಸಿದಿದ್ದರೂ ಅಡಿಪಾಯಕ್ಕೆ ಯಾವುದೇ ಹಾನಿಯಾಗದಂತೆ ಪ್ರತಿಮೆ ಸ್ಥಿರವಾಗಿಯೇ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನೆಯ ಸಮಯದಲ್ಲಿ ಯಾವುದೇ ಜೀವ ಹಾನಿಯಾಗಲಿ ಅಥವಾ ಆಸ್ತಿಪಾಸ್ತಿ ಹಾನಿಯಾಗಲಿ ಸಂಭವಿಸಿಲ್ಲ ಅನ್ನೋದೆ ಸಮಾಧಾನಕರ ಸಂಗತಿಯಾಗಿದೆ. ಈ ಪ್ರತಿಮೆ ಕುಸಿಯುವ ಕೆಲವೇ ಕ್ಷಣಗಳ ಮೊದಲು, ಅಲ್ಲಿದ್ದ ಸಿಬ್ಬಂದಿ ಮತ್ತು ಸ್ಥಳೀಯರು ಜಾಗೃತರಾಗಿ ವಾಹನಗಳನ್ನು ಪಾರ್ಕಿಂಗ್ ಸ್ಥಳದಿಂದ ಹೊರತೆಗೆದು ಅಪಘಾತವನ್ನು ತಪ್ಪಿಸಿದರು. ಹವಾನ್ ಕಂಪನಿಯು ತಕ್ಷಣವೇ ಪ್ರದೇಶವನ್ನು ಸೀಲ್ ಮಾಡಿ ಸುರಕ್ಷತಾ ನಿಯಮಗಳ ಪ್ರಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಘೋಷಿಸಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರತಿಮೆಯ ಅವಶೇಷಗಳನ್ನು ತೆಗೆದುಹಾಕಲಾಗಿದೆ ಮತ್ತು ಅಂಗಡಿಯ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಲಿಲ್ಲ ಎಂದು ಹವಾನ್​ ಕಂಪನಿ ತಿಳಿಸಿದೆ.
ಇನ್ನು ಗುವಾಯ್ಬಾ ನಗರ ಮಾತ್ರವಲ್ಲ ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದ ಇತರ ಭಾಗಗಳು ಸಹ ಚಂಡಮಾರುತದಿಂದ ಹಾನಿಗೆ ಒಳಗಾಗಿವೆ. ಟಿಯೋ ಹ್ಯೂಗೋದಲ್ಲಿ ಆಲಿಕಲ್ಲು ಮಳೆ ಬಿದ್ದರೆ, ಪಾಸೊ ಫಂಡೊ, ಸಾಂತಾ ಕ್ರೂಜ್ ಡೊ ಸುಲ್ ಮತ್ತು ವೆರಾ ಕ್ರೂಜ್‌ನಲ್ಲಿ ಮನೆ ಹಾಗೂ ಅಂಗಡಿಗಳ ಛಾವಣಿಗಳು ಹಾನಿಗೊಳಗಾದವು. ಲಜಿಯಾಡೊದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಯಿತು.
ಇನ್ನು 2021 ರಲ್ಲೇ ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಬೀಸಿದ ಚಂಡಮಾರುತದ ಸಮಯದಲ್ಲಿ ಕ್ಯಾಪಾವೊಡ ಕ್ಯಾನೊವಾದಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಮತ್ತೊಂದು ಪ್ರತಿಕೃತಿ ಕುಸಿದು ಬಿದ್ದಿತ್ತು. ಹೀಗಾಗಿ, ಗುವಾಯ್ಬಾ ನಗರದಲ್ಲಿ ಸಂಭವಿಸಿದ ಘಟನೆ ಇದೇ ಮೊದಲೇನಲ್ಲ. ಇತ್ತೀಚಿನ ಘಟನೆಯ ಬಳಿಕ ಇಂಜಿನಿಯರಿಂಗ್ ತಂಡಗಳು ತಾಂತ್ರಿಕ ಮೌಲ್ಯಮಾಪನಗಳನ್ನು ಪ್ರಾರಂಭಿಸಿವೆ, (ಏಜೆನ್ಸೀಸ್​).