ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ
- ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಗೆ ಬಂಧನ ಭೀತಿ
- ರಣತುಂಗ ಶ್ರೀಲಂಕಾದ ಪೆಟ್ರೋಲಿಯಂ ಸಚಿವರಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ
- ಇಂಧನ ಖರೀದಿ ಒಪ್ಪಂದದಿಂದ ಲಂಕಾಗೆ ಸುಮಾರು 23.5 ಕೋಟಿ ರೂ. ನಷ್ಟವಾಗಿರುವ ಆರೋಪ
ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾಗೆ 1996ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಕೊಟ್ಟ ತಂಡದ ನಾಯಕರಾಗಿದ್ದ ಅರ್ಜುನ್ ರಣತುಂಗ ( Arjuna Ranatunga ) ಅವರನ್ನು ಬಂಧಿಸಲು ಲಂಕಾದ ಅಧಿಕಾರಿಗಳು ಮುಂದಾಗಿರುವುದಾಗಿ ಅಲ್ಲಿನ ನ್ಯಾಯಾಲಯ ಸೋಮವಾರ (ಡಿ.15) ಮಾಹಿತಿ ನೀಡಿದೆ.
ರಣತುಂಗ ಅವರು ಶ್ರೀಲಂಕಾದ ಪೆಟ್ರೋಲಿಯಂ ಸಚಿವರಾಗಿದ್ದ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಅಡಿಯಲ್ಲಿ ಬಂಧಿಸಲು ಲಂಕಾ ಅಧಿಕಾರಿಗಳು ಮುಂದಾಗಿದ್ದಾರೆ. ದೀರ್ಘಾವಧಿಯ ತೈಲ ಖರೀದಿ ಒಪ್ಪಂದದ ಕಾರ್ಯವಿಧಾನವನ್ನು ಬದಲಾಯಿಸಿ, ಹೆಚ್ಚಿನ ವೆಚ್ಚದಲ್ಲಿ ತೈಲ ಖರೀದಿಗಳನ್ನು ಮಾಡಿದ ಆರೋಪ ರಣತುಂಗ ಮತ್ತು ಅವರ ಸಹೋದರರ ಮೇಲಿದೆ ಎಂದು ಲಂಕಾದ ಭ್ರಷ್ಟಾಚಾರ ಕಾವಲು ಸಂಸ್ಥೆ ತಿಳಿಸಿದೆ. ಒಟ್ಟು 27 ಖರೀದಿಗಳಿಂದ ರಾಜ್ಯಕ್ಕೆ 800 ಮಿಲಿಯನ್ ಶ್ರೀಲಂಕಾ ರೂಪಾಯಿಗಳು (ಸುಮಾರು 23.5 ಕೋಟಿ ರೂ.) ನಷ್ಟವಾಗಿರುವ ಆರೋಪ ಕೇಳಿಬಂದಿದೆ. ಲಂಚ ಅಥವಾ ಭ್ರಷ್ಟಾಚಾರ ಆರೋಪಗಳ ತನಿಖಾ ಆಯೋಗದ ಪ್ರಕಾರ, 2017ರಲ್ಲಿ ಒಪ್ಪಂದಗಳನ್ನು ಮಾಡಿಕೊಂಡ ಸಮಯದಲ್ಲಿ ಈ ಭ್ರಷ್ಟಾಚಾರ ನಡೆದಿದೆ.
ಸದ್ಯ ರಣತುಂಗ ಅವರು ವಿದೇಶದಲ್ಲಿದ್ದು, ತವರಿಗೆ ಬಂದ ಕೂಡಲೇ ಬಂಧಿಸುವುದಾಗಿ ಅಲ್ಲಿನ ಅಧಿಕಾರಿಗಳು ಕೊಲಂಬೊ ಮ್ಯಾಜಿಸ್ಟ್ರೇಟ್ ಅಸಂಗ ಬೊದರಾಗಮಗೆ ತಿಳಿಸಿದ್ದಾರೆ. ಮಾಜಿ ಸಚಿವ ರಣತುಂಗ ಅವರ ಹಿರಿಯ ಸಹೋದರ ಧಮ್ಮಿಕ ರಣತುಂಗ ಆ ಸಮಯದಲ್ಲಿ ಸರ್ಕಾರ ಒಡೆತನದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ನ ಚೇರ್ಮನ್ ಆಗಿದ್ದರು. ಅವರನ್ನು ಕಳೆದ ಸೋಮವಾರ ಬಂಧಿಸಲಾಯಿತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಲಂಕಾ ಮತ್ತು ಅಮೆರಿಕದ ದ್ವಿಪೌರತ್ವ ಹೊಂದಿರುವ ಧಮ್ಮಿಕ ರಣತುಂಗ ಅವರಿಗೆ ವಿದೇಶ ಪ್ರಯಾಣ ಮಾಡದಂತೆ ನಿರ್ಬಂಧ ಹೇರಲಾಗಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ನಿಗದಿ ಮಾಡಲಾಗಿದೆ. ಅಂದಹಾಗೆ, ರಣತುಂಗ ಸಹೋದರರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಈಗ ಮುನ್ನೆಲೆಗೆ ಬರಲು, ಕಳೆದ ವರ್ಷ ಅಧಿಕಾರಕ್ಕೆ ಬಂದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರೇ ಕಾರಣ. ಏಕೆಂದರೆ, ಸ್ಥಳೀಯ ಭ್ರಷ್ಟಾಚಾರವನ್ನು ಹತ್ತಿಕ್ಕುವ ಪ್ರತಿಜ್ಞೆಯ ಮೇರೆಗೆ ಕಳೆದ ವರ್ಷ ದಿಸಾನಾಯಕೆ ಅವರು ಅಧಿಕಾರಕ್ಕೆ ಬಂದರು.
ರಣತುಂಗ ಅವರ ಮತ್ತೊಬ್ಬ ಸಹೋದರ, ಮಾಜಿ ಪ್ರವಾಸೋದ್ಯಮ ಸಚಿವ ಪ್ರಸನ್ನ ಅವರನ್ನು ಕಳೆದ ತಿಂಗಳು ವಿಮಾ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಪ್ರಕರಣವು ಬಾಕಿ ಇದೆ. ಅಲ್ಲದೆ, 2022, ಜೂನ್ ತಿಂಗಳಲ್ಲಿ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ್ದಕ್ಕಾಗಿಯೂ ಪ್ರಸನ್ನ ಶಿಕ್ಷೆಗೆ ಒಳಗಾಗಿದ್ದರು.
ಅಂದಹಾಗೆ, 62 ವರ್ಷದ ಅರ್ಜುನ್ ರಣತುಂಗ ಅವರು ಎಡಗೈ ಬ್ಯಾಟರ್ ಆಗಿದ್ದು, 1996ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದರು. ಅಂದು ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಶ್ರೀಲಂಕಾಗೆ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ರಣತುಂಗ ಪ್ರಮುಖ ಪಾತ್ರವಹಿಸಿದ್ದರು, (ಏಜೆನ್ಸೀಸ್).