ನೀರು, ವಿದ್ಯುತ್​, ಇಂಟರ್ನೆಟ್ ಇಲ್ಲವೇ ಇಲ್ಲ​! ಶ್ರೀಲಂಕಾದಲ್ಲಿ ಅಗತ್ಯ ಸೇವೆಗಳ​ ಪೂರೈಕೆಯಲ್ಲಿ ದಿಢೀರ್​ ವ್ಯತ್ಯಯ ಆಗಿದ್ದೇಕೆ? | Srilanka  
ವಿದೇಶ

ನೀರು, ವಿದ್ಯುತ್​, ಇಂಟರ್ನೆಟ್ ಇಲ್ಲವೇ ಇಲ್ಲ​! ಶ್ರೀಲಂಕಾದಲ್ಲಿ ಅಗತ್ಯ ಸೇವೆಗಳ​ ಪೂರೈಕೆಯಲ್ಲಿ ದಿಢೀರ್​ ವ್ಯತ್ಯಯ ಆಗಿದ್ದೇಕೆ? | Srilanka

ವಿದ್ಯುತ್ ಕಡಿತವು ಶ್ರೀಲಂಕಾದಲ್ಲಿ ನೀರಿನ ಪೂರೈಕೆಯಲ್ಲಿ ಅಡಚಣೆಯನ್ನು ಉಂಟುಮಾಡಿತು. ಇದರ ಬೆನ್ನಲ್ಲೇ ಜನಸಾಮಾನ್ಯರು ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದಂತೆ ನೀರು ಸರಬರಾಜು ಪ್ರಾಧಿಕಾರವು ಮನವಿ ಮಾಡಿಕೊಂಡಿದೆ.

  • ಶ್ರೀಲಂಕಾದಲ್ಲಿ ತೀವ್ರ ವಿದ್ಯುತ್, ನೀರು ಮತ್ತು ಇಂಟರ್ನೆಟ್ ಸೇವೆಗಳ ವ್ಯತ್ಯಯ

  • ಶನಿವಾರ ಶ್ರೀಲಂಕಾದಲ್ಲಿ ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ

  • ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಪೂರೈಕೆ ಸ್ಥಗಿತ

ಶ್ರೀಲಂಕಾ: ಶನಿವಾರ ಭಾರಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇಶಾದ್ಯಂತ ವಿದ್ಯುತ್​ ಸರಬರಾಜಿನಲ್ಲಿ ಇದಕ್ಕಿದ್ದಂತೆ ಸಮಸ್ಯೆಯಾಗಿದೆ.​ 3 ಗಂಟೆಗೂ ಹೆಚ್ಚು ಕಾಲ ಕರೆಂಟ್​ ಲಭ್ಯವಾಗಲಿಲ್ಲ. ವಿದ್ಯುತ್ ವ್ಯತ್ಯಯ ಮಾತ್ರವಲ್ಲದೇ, ನೀರು, ಇಂಟರ್ನೆಟ್ ಸೇವೆಗಳು ಮತ್ತು ಮೊಬೈಲ್ ಸಂಪರ್ಕದ ಮೇಲೂ ತೀವ್ರ ಪರಿಣಾಮ ಬೀರಿದ್ದಾಗಿ ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.

ವಿದ್ಯುತ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವು ಶನಿವಾರ ರಾಷ್ಟ್ರವ್ಯಾಪಿ ಸಮಸ್ಯೆಗೆ ಮೂಲ ಕಾರಣ ಎಂದು ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಕಡಿತವು ಶ್ರೀಲಂಕಾದಲ್ಲಿ ನೀರಿನ ಪೂರೈಕೆಯಲ್ಲಿ ಅಡಚಣೆಯನ್ನು ಉಂಟುಮಾಡಿತು. ಇದರ ಬೆನ್ನಲ್ಲೇ ಜನಸಾಮಾನ್ಯರು ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದಂತೆ ನೀರು ಸರಬರಾಜು ಪ್ರಾಧಿಕಾರವು ಮನವಿ ಮಾಡಿಕೊಂಡಿದೆ.

ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ ಅಷ್ಟೇ ಎಂದು ದೇಶದ ಇಂಧನ ಸಚಿವ ಅನುಸಾರ ಕರುಣಾತಿಲಕ ಕೂಡ ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಥಗಿತಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ಇನ್ನೂ ಯಾರು ಸ್ಪಷ್ಟಪಡಿಸಿಲ್ಲ. ಸರ್ಕಾರದ ಮಾಹಿತಿ ಪ್ರಕಾರ, ದೇಶದ ಮಧ್ಯ ಪರ್ವತ ಪ್ರದೇಶದ ಜಲವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷವು ಸ್ಥಗಿತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಮತ್ತೊಂದೆಡೆ, ಸೌರ ಫಲಕಗಳನ್ನು ಹೊಂದಿರುವ ಜನರು ವಿದ್ಯುತ್ ಗ್ರಿಡ್‌ನಿಂದ ಸಂಪರ್ಕ ಕಡಿತಗೊಳಿಸುವಂತೆ ಕೇಳಿಕೊಳ್ಳಲಾಗಿದೆ. ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸುವವರೆಗೆ ಈ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ,(ಏಜೆನ್ಸೀಸ್).