ಲಂಡನ್: "ಕಷ್ಟಪಟ್ಟು ಓದಿ ದೊಡ್ಡ ಡಿಗ್ರಿ ಪಡೆದರೆ ಸಾಕು, ಭವಿಷ್ಯ ಉಜ್ವಲವಾಗಿರುತ್ತದೆ" ಎಂಬ ನಂಬಿಕೆ ಈಗಿನ ಕಾಲದಲ್ಲಿ ಸುಳ್ಳಾಗುತ್ತಿದೆಯೇ? ಹೌದು ಎನ್ನುತ್ತಿದೆ ಲಂಡನ್‌ನ ಈ ಯುವಕನ ಕರುಣಾಜನಕ ಕಥೆ. ಪದವಿಯಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದರೂ, ಬರೋಬ್ಬರಿ 500 ಕಡೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೂ ಒಂದೇ ಒಂದು ಕೆಲಸದ ಆಫರ್ ಸಿಗದೆ ಈ ಯುವಕ(Unemployment) ಈಗ ಕಂಗಾಲಾಗಿದ್ದಾನೆ. "ಇಡೀ ವ್ಯವಸ್ಥೆಯೇ ಹದಗೆಟ್ಟಿದೆ" ಎಂದು ಆತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.
ಯಾರು ಈ ಯುವಕ?
21 ವರ್ಷದ ಖಲೀದ್ ಶರೀಫ್ ಈ ದುರದೃಷ್ಟಕರ ಪದವೀಧರ. ಈತ ಲಂಡನ್‌ನ ಕಿಂಗ್ಸ್‌ಟನ್ ವಿಶ್ವವಿದ್ಯಾಲಯದಿಂದ 'ಡಿಜಿಟಲ್ ಮೀಡಿಯಾ ಟೆಕ್ನಾಲಜಿ'ಯಲ್ಲಿ ಪದವಿ ಪೂರೈಸಿದ್ದಾನೆ. ವಿಶೇಷವೆಂದರೆ, 2025ರಲ್ಲಿ ಪದವಿ ಪಡೆದ ಈತ ತನ್ನ ತರಗತಿಯಲ್ಲೇ ಟಾಪರ್ ಆಗಿದ್ದವನು (Distinction). ಮೂಲತಃ ಈಜಿಪ್ಟ್‌ನಲ್ಲಿ ಹುಟ್ಟಿ, ಕತಾರ್‌ನಲ್ಲಿ ಬೆಳೆದ ಖಲೀದ್, ಉನ್ನತ ಶಿಕ್ಷಣ ಮತ್ತು ಉದ್ಯೋಗದ ಕನಸು ಹೊತ್ತು 18ನೇ ವಯಸ್ಸಿಗೆ ಲಂಡನ್‌ಗೆ ಬಂದಿದ್ದನು.
ಕೋಟ್ಯಂತರ ರೂಪಾಯಿ ವ್ಯಯ
ಖಲೀದ್ ಈ ಪದವಿಗಾಗಿ ವ್ಯಯಿಸಿದ ಮೊತ್ತ ಸಣ್ಣದೇನಲ್ಲ. ಬೋಧನಾ ಶುಲ್ಕ ಮತ್ತು ಲಂಡನ್‌ನ ಜೀವನ ವೆಚ್ಚ ಎಲ್ಲವನ್ನೂ ಸೇರಿಸಿದರೆ ಸುಮಾರು 1,00,000 ಪೌಂಡ್ (ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 1.04 ಕೋಟಿ ರೂ.) ಖರ್ಚಾಗಿದೆ. ಕೋಟಿ ರೂಪಾಯಿ ಸುರಿದು ಓದಿದ ಮೇಲೆ ತನಗೊಂದು ಭದ್ರವಾದ ಭವಿಷ್ಯ ಸಿಗುತ್ತದೆ ಎಂದು ಆತ ನಂಬಿದ್ದನು. ಆದರೆ ವಾಸ್ತವ ಮಾತ್ರ ಬೇರೆಯೇ ಇತ್ತು.
500 ಅರ್ಜಿ, ಕೇವಲ 20 ಇಂಟರ್ವ್ಯೂ ಕಾಲ್!
ಖಲೀದ್ ಕಳೆದ ಕೆಲವೇ ತಿಂಗಳುಗಳಲ್ಲಿ 500ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅದರಲ್ಲಿ ಆತನಿಗೆ ಬಂದಿದ್ದು ಕೇವಲ 20 ಇಂಟರ್ವ್ಯೂ ಕರೆಗಳು ಮಾತ್ರ. ದುರದೃಷ್ಟವಶಾತ್, ಆ 20 ಇಂಟರ್ವ್ಯೂಗಳ ನಂತರವೂ ಒಂದೇ ಒಂದು ಕಂಪನಿ ಆತನನ್ನು ಕೆಲಸಕ್ಕೆ ನೇಮಿಸಿಕೊಂಡಿಲ್ಲ. "ನಾನು ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದರೂ ಕೆಲಸ ಸಿಗುತ್ತಿಲ್ಲ ಎಂದಮೇಲೆ, ನನಗಿಂತ ಕಡಿಮೆ ಅಂಕ ಪಡೆದವರ ಪರಿಸ್ಥಿತಿ ಏನಾಗಿರಬೇಡ?" ಎಂದು ಆತ ನೋವಿನಿಂದ ಪ್ರಶ್ನಿಸುತ್ತಾನೆ.
ಹಿನ್ನೆಲೆಯೇ ಶಾಪವಾಯಿತೇ?
ತಾನು ಇಂಟರ್ನ್ಯಾಷನಲ್ ವಿದ್ಯಾರ್ಥಿ ಎಂಬ ಕಾರಣಕ್ಕೆ ಕಂಪನಿಗಳು ತನ್ನನ್ನು ತಿರಸ್ಕರಿಸುತ್ತಿರಬಹುದು ಎಂಬ ಅನುಮಾನ ಖಲೀದ್‌ಗಿದೆ. ಆತ ಕತಾರ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರಿಂದ, ಆತನಿಗೆ ಉದ್ಯೋಗ ನೀಡಲು 'ವೀಸಾ ಸ್ಪಾನ್ಸರ್‌ಶಿಪ್' (Visa Sponsorship) ಬೇಕಾಗಬಹುದು ಎಂದು ಕಂಪನಿಗಳು ಭಾವಿಸುತ್ತಿವೆ. ಆದರೆ ವಾಸ್ತವದಲ್ಲಿ, ಆತನ ತಾಯಿಯ ಮೂಲಕ ಆತ ಬ್ರಿಟನ್‌ನಲ್ಲಿ ಕೆಲಸ ಮಾಡಲು ಸಂಪೂರ್ಣ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾನೆ.
AI ಮತ್ತು ಕೋವಿಡ್ ಎಂಬ ಭೂತ
ಉದ್ಯೋಗ ಮಾರುಕಟ್ಟೆ ಕುಸಿಯಲು ಖಲೀದ್ ಎರಡು ಮುಖ್ಯ ಕಾರಣಗಳನ್ನು ನೀಡುತ್ತಾನೆ. ಒಂದು ಕೋವಿಡ್ ಸಾಂಕ್ರಾಮಿಕದ ನಂತರ ಉಂಟಾದ ಆರ್ಥಿಕ ಹಿಂಜರಿತ, ಮತ್ತೊಂದು ಕೃತಕ ಬುದ್ಧಿಮತ್ತೆಯ (AI) ಅಬ್ಬರ. ಕಂಪನಿಗಳು ಖರ್ಚು ಕಡಿಮೆ ಮಾಡಲು ಹೊಸಬರನ್ನು (Graduates) ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಮಾರುಕಟ್ಟೆಯಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಅವಕಾಶಗಳು ಮಾತ್ರ ಬೆರಳೆಣಿಕೆಯಷ್ಟಿವೆ.
ಹತಾಶೆ ನಡುವೆಯೂ ಬದುಕಿನ ಹೋರಾಟ
ಪೂರ್ಣ ಪ್ರಮಾಣದ ಕೆಲಸ ಸಿಗದೆ ಹತಾಶನಾಗಿದ್ದರೂ ಖಲೀದ್ ಕೈಕಟ್ಟಿ ಕುಳಿತಿಲ್ಲ. ಸದ್ಯ ಫ್ರೀಲಾನ್ಸ್ ವಿಡಿಯೋಗ್ರಾಫರ್ ಮತ್ತು ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾನೆ. ಜೊತೆಗೆ ತನ್ನದೇ ಆದ 'ಜೋಕ್' (Zoque) ಎಂಬ ಉಡುಪಿನ ಬ್ರ್ಯಾಂಡ್ ಅನ್ನು ಕೂಡ ಆರಂಭಿಸಿದ್ದಾನೆ. "ನನಗೆ ವೃತ್ತಿಪರವಾಗಿ ಇಂದು ತಿಳಿದಿರುವ ಹೆಚ್ಚಿನ ವಿಷಯಗಳು ಯೂನಿವರ್ಸಿಟಿಯಲ್ಲಿ ಕಲಿತದ್ದಲ್ಲ, ಬದಲಾಗಿ ಯೂಟ್ಯೂಬ್ ನೋಡಿ ಮತ್ತು ಸ್ವಂತ ಅನುಭವದಿಂದ ಕಲಿತದ್ದು" ಎಂದು ಆತ ಹೇಳುತ್ತಾನೆ.
ವಿಶ್ವದಾದ್ಯಂತ ಓದಿನ ಹೊರೆ
ಬ್ರಿಟನ್ ಮಾತ್ರವಲ್ಲದೆ ಅಮೆರಿಕದಂತಹ ದೇಶಗಳಲ್ಲೂ ಶಿಕ್ಷಣದ ವೆಚ್ಚ ಗಗನಕ್ಕೇರಿದೆ. ಸಾರ್ವಜನಿಕ ಕಾಲೇಜುಗಳಲ್ಲಿ 80 ಲಕ್ಷದಿಂದ 1.20 ಕೋಟಿ ರೂ.ವರೆಗೂ ಖರ್ಚಾದರೆ, ಖಾಸಗಿ ಕಾಲೇಜುಗಳಲ್ಲಿ ಇದು 2 ಕೋಟಿ ರೂ. ಮೀರುತ್ತದೆ. ಇಷ್ಟೊಂದು ಹಣ ವ್ಯಯಿಸಿ ಓದಿದರೂ ಕೆಲಸ ಸಿಗದ ಪರಿಸ್ಥಿತಿ ಇಂದು ಜಗತ್ತಿನಾದ್ಯಂತ ಯುವಜನತೆಯನ್ನು ಕಾಡುತ್ತಿದೆ.
ಖಲೀದ್‌ನ ಈ ಕಥೆ ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರಕ್ಕೆ ಹಿಡಿದ ಕನ್ನಡಿಯಾಗಿದೆ,(ಏಜೆನ್ಸೀಸ್).