Spain migrant crisis 9 killed 
ವಿದೇಶ

ಮೊರೊಕ್ಕೊದಿಂದ ಸ್ಪೇನ್‌ಗೆ ಸಾವಿರಾರು ವಲಸಿಗರ ದಂಡು: ಗಡಿ ಬಿಕ್ಕಟ್ಟಿನಲ್ಲಿ 9 ಸಾವು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆ ಎಂಟ್ರಿ..Spain Migrant

ಪ್ರಮುಖ ಮುಖ್ಯಾಂಶಗಳು

  • ಸ್ಪೇನ್‌ನ ಸಿಯುಟಾ ಗಡಿಯಲ್ಲಿ ವಲಸಿಗರ ಭಾರೀ ದಂಡು. ಮೂರು ಸಾವಿರಕ್ಕೂ ಹೆಚ್ಚು ಜನರಿಂದ ಗಡಿ ಪ್ರವೇಶ.
  • ಗಡಿಯಲ್ಲಿ ಉಂಟಾದ ನೂಕುನುಗ್ಗಾಟದ ನಡುವೆ 9 ಜನರು ಸಾವು.
  • ಸ್ಪೇನ್ ಜೊತೆಗಿನ ಶೆಂಗನ್ ಮುಕ್ತ ಗಡಿ ಒಪ್ಪಂದ ರದ್ದುಗೊಳಿಸುವ ಬೆದರಿಕೆ ಹಾಕಿದ ಇಟಲಿಯ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ.
ಮ್ಯಾಡ್ರಿಡ್: ಉತ್ತರ ಆಫ್ರಿಕಾದ ಮೊರೊಕ್ಕೊದಿಂದ ಸ್ಪೇನ್‌ನ ಸೆಯೂಟಾ ಪ್ರದೇಶಕ್ಕೆ ಮೂರು ಸಾವಿರಕ್ಕೂ ಹೆಚ್ಚು ವಲಸಿಗರು ನುಗ್ಗಿದ ಪರಿಣಾಮ 9 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. ಇನ್ನು ದಿಢೀರನೆ ನಿರ್ಮಾಣವಾದ ಈ ಪರಿಸ್ಥಿತಿಯನ್ನು ನಿಭಾಯಿಸಲು ಸ್ಪೇನ್​ ಸರ್ಕಾರ ಸಶಸ್ತ್ರ ಪಡೆ, ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿದೆ ಎನ್ನಲಾಗಿದೆ.
ಸ್ಪೇನ್ ಪ್ರಧಾನಿ ಪೆಡ್ರೊ ಸಂಚೆಜ್ ಅವರು ಆಂತರಿಕ ಸಚಿವ ಫರ್ನಾಂಡೋ ಗ್ರ್ಯಾಂಡೆ-ಮಾರ್ಲಾಸ್ಕಾ ಅವರೊಂದಿಗೆ ಶುಕ್ರವಾರ ಸಂಜೆ ಸಿಯುಟಾಗೆ ಭೇಟಿ ನೀಡಲಿದ್ದಾರೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಮ್ಯಾಡ್ರಿಡ್‌ನಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ಕೋರಿದೆ ಎನ್ನಲಾಗಿದೆ. ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ವಲಸಿಗರು ಯುರೋಪ್​​ಗೆ ಪ್ರವೇಶಿಸಲು ಸ್ಪೇನ್​ಅನ್ನು ವಲಸೆ ಮಾರ್ಗವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಿವಿಲ್ ಗಾರ್ಡ್ ಹೇಳಿದ್ದೇನು?
ಸ್ಪೇನ್‌ನ ಸಿವಿಲ್ ಗಾರ್ಡ್ ಅಧಿಕಾರಿಗಳ ಸಂಘದ ಮುಖ್ಯಸ್ಥ ರಚಿದ್ ಸ್ಬಿಹಿ ಮಾತನಾಡಿ, ಪರಿಸ್ಥಿತಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಾವಿರಾರು ವಲಸಿಗರು ಗಡಿ ದಾಟುತ್ತಿದ್ದಾರೆ. ಗಡಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳಿದರು.
ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಮೊರಾಕೋ ದೇಶದ ಯುವಕರು, ಮಹಿಳೆಯರು ಮತ್ತು ಸಣ್ಣ ಮಕ್ಕಳಿರುವ ಕುಟುಂಬಗಳು ರಸ್ತೆಗಳಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಜೊತೆಗೆ ವಿವಾ ಎಸ್ಪಾನಾ(ಸ್ಪೇನ್ ದೇಶಕ್ಕೆ ಜಯವಾಗಲಿ) ಎಂದು ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿ ಇದೆ.

ಬಿಕ್ಕಟ್ಟಿಗೆ ಕಾರಣವೇನು?

ಸ್ಪೇನ್ ಮತ್ತು ಮೊರಾಕ್ಕೊ ನಡುವಿನ ಈ ಗಡಿ ಬಿಕ್ಕಟ್ಟು ಹೆಚ್ಚಾಗಲು ಕಾರಣ ಏನು ಎನ್ನುವ ಮಾಹಿತಿ ಇಲ್ಲ. ಮೊರಾಕ್ಕೊ ಆಂತರಿಕ ಸಚಿವಾಲಯವು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪರಿಸ್ಥಿತಿ ನಿಭಾಯಿಸಲು ಸ್ಪೇನ್​ ಜೊತೆಗೆ ಸಹಕರಿಸುತ್ತಿದೆ ಎನ್ನಲಾಗಿದೆ. ಸೆಯುಟಾಗೆ ಕಾನೂನುಬಹಿರವಾಗಿ ಪ್ರವೇಶಿಸಿದ ವಲಸಿಗರನ್ನು ವಾಪಸ್ ಕಳುಹಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ವಲಸೆ ಸಮಸ್ಯೆ ವಿಚಾರಕ್ಕೆ ಮಾತ್ರ ತುರ್ತು ಪರಿಸ್ಥಿತಿ ಘೋಷಣೆ ಮಾಡೋಕೆ ಆಗೋದಿಲ್ಲ. ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಲಾಗುತ್ತದೆ ಎಂದು ಸ್ಪೇನ್ ಸರ್ಕಾರ ಸ್ಪಷ್ಟಪಡಿಸಿದೆ. ಈ ಘಟನೆಯು ಇಟಲಿಯಲ್ಲಿಯೂ ತಲ್ಲಣ ಮೂಡಿಸಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ನಾಗರಿಕರ ಸುರಕ್ಷತೆಗಾಗಿ ಸ್ಪೇನ್ ಜೊತೆಗಿನ ಶೆಂಗನ್ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಮೇ 2021 ಬೃಹತ್​ ವಲಸೆ

ಮೂರು ವರ್ಷದ ಹಿಂದೆ ಅಂದರೆ, ಮೇ 2021ರಂದು ಇದೇ ರೀತಿಯ ಬೃಹತ್ ಗಡಿ ಬಿಕ್ಕಟ್ಟು ಉಂಟಾಗಿ ಕೇವಲ ಎರಡು ದಿನಗಳಲ್ಲಿ 8,000ಕ್ಕೂ ಹೆಚ್ಚು ವಲಸಿಗರು ಸಿಯುಟಾ ಪ್ರವೇಶಿಸಿದ್ದರು. ಮೊರಾಕೋದಿಂದ ಸುಮಾರು 3.1 ಮೈಲಿ 5 ಕಿ.ಮೀ ದೂರವನ್ನು ಈಜಿಕೊಂಡು ಅಥವಾ ನಡೆದುಕೊಂಡು ವಲಸಿಗರು ಸಿಯುಟಾ ತಲುಪಲು ಯತ್ನಿಸುತ್ತಾರೆ ಎನ್ನಲಾಗಿದೆ,(ಏಜೆನ್ಸೀಸ್).