ಸ್ಪೇಸ್‌ಎಕ್ಸ್ ಐಪಿಒ ಧಮಾಕಾ: 75 ಬಿಲಿಯನ್ ಡಾಲರ್ ಬಾಚಿದ ಇಲಾನ್ ಮಸ್ಕ್; ಗ್ರೀನ್‌ಶೂ ಆಪ್ಷನ್‌ನಿಂದ ಸಿಗಲಿದೆ ಹೆಚ್ಚುವರಿ ಬೂಸ್ಟ್!
ನ್ಯೂಯಾರ್ಕ್: ವಿಶ್ವದ ಅತ್ಯಂತ ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ಎಕ್ಸ್’ (SpaceX IPO) ಜಾಗತಿಕ ಷೇರು ಮಾರುಕಟ್ಟೆಗೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ. ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಈ ಐತಿಹಾಸಿಕ ಐಪಿಒ (IPO - ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಸಂಸ್ಥೆಯು ತನ್ನ ಶೇ. 5 ರಷ್ಟು ಷೇರುಗಳನ್ನು (ಅಂದಾಜು 55.5 ಕೋಟಿ ಷೇರುಗಳು) ಮಾರಾಟ ಮಾಡಿ, ಬರೋಬ್ಬರಿ 75 ಬಿಲಿಯನ್ ಡಾಲರ್ (ಸುಮಾರು 6.2 ಲಕ್ಷ ಕೋಟಿ ರೂಪಾಯಿ) ಬಂಡವಾಳವನ್ನು ಅತ್ಯಂತ ಯಶಸ್ವಿಯಾಗಿ ಸಂಗ್ರಹಿಸಿದೆ.
ಆದರೆ, ಕಥೆ ಇಲ್ಲಿಗೇ ಮುಗಿದಿಲ್ಲ. ಮುಂಬರುವ ವಾರಗಳಲ್ಲಿ ಸ್ಪೇಸ್‌ಎಕ್ಸ್ ಸಂಸ್ಥೆಯು ಮಾರುಕಟ್ಟೆಯಿಂದ ಇನ್ನು ಹನ್ನೊಂದು ಬಿಲಿಯನ್ ಡಾಲರ್ (ಅಂದಾಜು 91,000 ಕೋಟಿ ರೂಪಾಯಿ) ಹೆಚ್ಚುವರಿ ಹಣವನ್ನು ಬಾಚಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಜಾಗತಿಕ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾಗಿ ದಾಖಲಾಗಲಿರುವ ಈ ಹಣಕಾಸಿನ ಆಟದ ಹಿಂದೆ ಗ್ರೀನ್‌ಶೂ ಆಪ್ಷನ್ ಎಂಬ ರೋಚಕ ರಹಸ್ಯ ಅಡಗಿದೆ.
ಏನಿದು ‘ಗ್ರೀನ್‌ಶೂ ಆಪ್ಷನ್’? ಸ್ಪೇಸ್‌ಎಕ್ಸ್‌ಗೆ ಸಿಗಲಿದೆಯೇ ಬಿಗ್ ಬೂಸ್ಟ್?
ಷೇರು ಮಾರುಕಟ್ಟೆಯ ಭಾಷೆಯಲ್ಲಿ ‘ಗ್ರೀನ್‌ಶೂ ಆಪ್ಷನ್’ ಎಂದರೆ ಅದೊಂದು ವಿಶಿಷ್ಟವಾದ ಹೆಚ್ಚುವರಿ ಹಂಚಿಕೆ ನಿಯಮವಾಗಿದೆ. ಸ್ಪೇಸ್‌ಎಕ್ಸ್ ಐಪಿಒ ನಿರ್ವಹಣೆ ಮಾಡುತ್ತಿರುವ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಮೋರ್ಗನ್ ಸ್ಟಾನ್ಲಿಗೆ ಈ ವಿಶೇಷ ಹಕ್ಕನ್ನು ನೀಡಲಾಗಿದೆ. ಇದರ ಪ್ರಕಾರ, ಮುಂದಿನ 30 ದಿನಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಸ್ಪೇಸ್‌ಎಕ್ಸ್ ಷೇರುಗಳಿಗೆ ಭಾರಿ ಬೇಡಿಕೆ ಬಂದರೆ, ಮೋರ್ಗನ್ ಸ್ಟಾನ್ಲಿ ಬ್ಯಾಂಕ್ ಸಂಸ್ಥೆಯಿಂದ ತಲಾ 135 ಡಾಲರ್ ಮುಖಬೆಲೆಯ ಹೆಚ್ಚುವರಿ 8.3 ಕೋಟಿ ಷೇರುಗಳನ್ನು ನೇರವಾಗಿ ಖರೀದಿಸಬಹುದಾಗಿದೆ.
ಒಂದು ವೇಳೆ ಈ ಹಕ್ಕನ್ನು ಬ್ಯಾಂಕ್ ಸಂಪೂರ್ಣವಾಗಿ ಬಳಸಿಕೊಂಡರೆ, ಸ್ಪೇಸ್‌ಎಕ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಒಟ್ಟು ಷೇರುಗಳ ಸಂಖ್ಯೆ 63.8 ಕೋಟಿಗೆ ಏರಲಿದೆ. ಇದರ ನೇರ ಲಾಭ ಇಲಾನ್ ಮಸ್ಕ್ ಕಂಪನಿಗೆ ಸಿಗಲಿದ್ದು, ಸಂಸ್ಥೆಯ ಒಟ್ಟು ಬಂಡವಾಳ ಸಂಗ್ರಹಣೆ 75 ಬಿಲಿಯನ್ ಡಾಲರ್‌ನಿಂದ ಬರೋಬ್ಬರಿ 86.2 ಬಿಲಿಯನ್ ಡಾಲರ್‌ಗೆ ಜಿಗಿಯಲಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾರುಕಟ್ಟೆಯ ಏರಿಳಿತ ಮತ್ತು ಹೂಡಿಕೆದಾರರ ‘ಶಾರ್ಟ್ ಪೊಸಿಷನ್’ ಆಟ!
ವಿಶೇಷವೆಂದರೆ, ಈ ಹೆಚ್ಚುವರಿ 8.3 ಕೋಟಿ ಷೇರುಗಳನ್ನು ಸ್ಪೇಸ್‌ಎಕ್ಸ್ ಸಂಸ್ಥೆ ಇನ್ನೂ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಹೇಗೆ ಚಲಿಸುತ್ತದೆ ಎಂಬುದರ ಆಧಾರದ ಮೇಲೆ ಬ್ಯಾಂಕುಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಒಂದು ವೇಳೆ ಲಿಸ್ಟಿಂಗ್ ಆದ ನಂತರ ಸ್ಪೇಸ್‌ಎಕ್ಸ್ ಷೇರು ಬೆಲೆ 135 ಡಾಲರ್‌ಗಿಂತ ಮೇಲಕ್ಕೆ ಹೋದರೆ, ಬ್ಯಾಂಕುಗಳು ಗ್ರೀನ್‌ಶೂ ಆಪ್ಷನ್ ಬಳಸಿ ನೇರವಾಗಿ ಕಂಪನಿಯಿಂದಲೇ ಕಡಿಮೆ ಬೆಲೆಗೆ ಷೇರು ಕೊಂಡು ಹೂಡಿಕೆದಾರರಿಗೆ ಮಾರಿ ಭಾರಿ ಲಾಭ ಗಳಿಸುತ್ತವೆ.
ಇದಕ್ಕೆ ವಿರುದ್ಧವಾಗಿ, ಷೇರು ಬೆಲೆ ಐಪಿಒ ದರಕ್ಕಿಂತ ಕೆಳಗೆ ಕುಸಿದರೆ, ಬ್ಯಾಂಕುಗಳು ಮುಕ್ತ ಮಾರುಕಟ್ಟೆಯಿಂದಲೇ ಷೇರುಗಳನ್ನು ಮರುಖರೀದಿ ಮಾಡಲು ಆರಂಭಿಸುತ್ತವೆ. ಇದು ಮಾರುಕಟ್ಟೆಯಲ್ಲಿ ಷೇರು ಕುಸಿತದ ತೀವ್ರ ಒತ್ತಡವನ್ನು ಕಡಿಮೆ ಮಾಡಿ, ಬೆಲೆ ಸ್ಥಿರವಾಗಿರಲು ನೆರವಾಗುತ್ತದೆ. 1960 ರಲ್ಲಿ ಗ್ರೀನ್ ಶೂ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಮೊದಲ ಬಾರಿಗೆ ಈ ತಂತ್ರವನ್ನು ಬಳಸಿದ್ದರಿಂದ ಇದಕ್ಕೆ ಈ ಹೆಸರು ಬಂದಿದೆ.
ಅಲಿಬಾಬಾ ಹಾದಿಯೋ ಅಥವಾ ಉಬರ್ ಕಹಿಯೋ? ಮಸ್ಕ್ ಮುಂದಿದೆ ಕುತೂಹಲ!
ಜಾಗತಿಕ ಐಪಿಒ ಇತಿಹಾಸವನ್ನು ಗಮನಿಸಿದರೆ ಗ್ರೀನ್‌ಶೂ ಆಪ್ಷನ್ ಎರಡು ರೀತಿಯ ಫಲಿತಾಂಶ ನೀಡಿದೆ. 2014 ರಲ್ಲಿ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ಮಾರುಕಟ್ಟೆಗೆ ಬಂದಾಗ ಹೂಡಿಕೆದಾರರು ಮುಗಿಬಿದ್ದರು. ಇದರಿಂದ ಷೇರು ಬೆಲೆ ಶೇ.38 ರಷ್ಟು ಜಿಗಿಯಿತು. ಆಗ ಬ್ಯಾಂಕುಗಳು ಸಂಪೂರ್ಣ ಗ್ರೀನ್‌ಶೂ ಬಳಸಿ ಅಲಿಬಾಬಾ ಗಳಿಕೆಯನ್ನು 25 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿ, ಅಂದಿನ ಜಗತ್ತಿನ ಅತಿ ದೊಡ್ಡ ಐಪಿಒ ಆಗಿ ಇತಿಹಾಸ ಸೃಷ್ಟಿಸಿದವು.
ಆದರೆ 2019 ರಲ್ಲಿ ‘ಉಬರ್ ಸಂಸ್ಥೆಯ ಐಪಿಒ ಹಾದಿ ಸಂಪೂರ್ಣ ಉಲ್ಟಾ ಆಯಿತು. ಹೂಡಿಕೆದಾರರು ಆಸಕ್ತಿ ತೋರದ ಕಾರಣ ಉಬರ್ ಷೇರು ಶೇ. 7 ರಷ್ಟು ನಷ್ಟ ಅನುಭವಿಸಿತು. ಆಗ ಬ್ಯಾಂಕುಗಳು ಹೆಚ್ಚುವರಿ ಷೇರು ಕೊಳ್ಳದೆ ಮಾರುಕಟ್ಟೆಯಿಂದಲೇ ಷೇರು ಮರುಖರೀದಿ ಮಾಡಿ ಬೆಲೆ ಕುಸಿತ ತಡೆಯಬೇಕಾಯಿತು. ಈಗ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಅಲಿಬಾಬಾ ತರಹ ಮೈಲಿಗಲ್ಲು ಸೃಷ್ಟಿಸುತ್ತಾ ಅಥವಾ ಉಬರ್‌ನಂತೆ ತಣ್ಣಗಾಗುತ್ತಾ ಎಂಬುದನ್ನು ಮುಂದಿನ ನಾಲ್ಕು ವಾರಗಳು ನಿರ್ಧರಿಸಲಿವೆ,(ಏಜೆನ್ಸೀಸ್).