ಟ್ರಂಪ್ ಸುಂಕಾಸ್ತ್ರಕ್ಕೆ ದಕ್ಷಿಣ ಕೊರಿಯಾ ತತ್ತರ; ಶೇ.25ರಷ್ಟು ತೆರಿಗೆ ವಿಧಿಸಿದ ಅಮೆರಿಕ: ಜಾಗತಿಕ ಮಾರುಕಟ್ಟೆಯಲ್ಲಿ ಕಂಪನ
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆರ್ಥಿಕ ಸಂರಕ್ಷಣಾ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಮಂಗಳವಾರ ದಕ್ಷಿಣ ಕೊರಿಯಾದಿಂದ(US-SouthKorea Trade War) ಆಮದಾಗುವ ಪ್ರಮುಖ ಉತ್ಪನ್ನಗಳ ಮೇಲೆ ಅಮೆರಿಕ ಸರ್ಕಾರವು ಶೇ.25ರಷ್ಟು ಸುಂಕವನ್ನು ವಿಧಿಸಿದೆ. ದಕ್ಷಿಣ ಕೊರಿಯಾದ ಶಾಸಕಾಂಗವು ಈ ಹಿಂದೆ ಒಪ್ಪಿಕೊಂಡಿದ್ದ ವ್ಯಾಪಾರ ಒಪ್ಪಂದವನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಟ್ರಂಪ್ ಈ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ.
ಟ್ರಂಪ್ ಆಕ್ರೋಶಕ್ಕೆ ಕಾರಣವೇನು..?
ಈ ಬಗ್ಗೆ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ದಕ್ಷಿಣ ಕೊರಿಯಾದ ಶಾಸಕಾಂಗವು ನಮ್ಮ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಜಾರಿಗೆ ತರುತ್ತಿಲ್ಲ. ಅಮೆರಿಕವು ತನ್ನ ಸುಂಕಗಳನ್ನು ಕಡಿತಗೊಳಿಸಿ ಒಪ್ಪಂದದಂತೆ ನಡೆದುಕೊಂಡಿದೆ. ಆದರೆ ಕೊರಿಯಾ ತನ್ನ ಭರವಸೆಯನ್ನು ಈಡೇರಿಸಿಲ್ಲ. ಹೀಗಾಗಿ, ನಾವು ದಕ್ಷಿಣ ಕೊರಿಯಾದ ವಾಹನಗಳು, ಮರಮುಟ್ಟು ಮತ್ತು ಔಷಧಗಳ ಮೇಲಿನ ಸುಂಕವನ್ನು ಶೇ. 15ರಿಂದ ಶೇ. 25ಕ್ಕೆ ಏರಿಸುತ್ತಿದ್ದೇವೆ ಎಂದು ಗುಡುಗಿದ್ದಾರೆ.
ಪರಸ್ಪರ ವಿನಿಮಯದ ಕೊರತೆ
ನಮ್ಮ ವ್ಯಾಪಾರ ಒಪ್ಪಂದಗಳು ಅಮೆರಿಕಕ್ಕೆ ಬಹಳ ಮುಖ್ಯವಾಗಿವೆ. ನಾವು ಒಪ್ಪಂದದಂತೆ ಅಮೆರಿಕದ ಸುಂಕಗಳನ್ನು ತಕ್ಷಣವೇ ಕಡಿತಗೊಳಿಸಿದ್ದೇವೆ. ನಮ್ಮ ವ್ಯಾಪಾರ ಪಾಲುದಾರರೂ ಅದೇ ರೀತಿ ನಡೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ದಕ್ಷಿಣ ಕೊರಿಯಾ ತನ್ನ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಆರ್ಥಿಕ ಭದ್ರತೆಯೇ ರಾಷ್ಟ್ರೀಯ ಭದ್ರತೆ
ಟ್ರಂಪ್ ಈ ಹಿಂದೆಯೇ ಹೇಳಿದಂತೆ, ಆರ್ಥಿಕ ಭದ್ರತೆಯೇ ರಾಷ್ಟ್ರೀಯ ಭದ್ರತೆಯಾಗಿದೆ. ನಮಗೆ ಅನ್ಯಾಯ ಮಾಡುವ ಯಾವುದೇ ರಾಷ್ಟ್ರದ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ನಿಲುವನ್ನು ಟ್ರಂಪ್ ಈ ಘೋಷಣೆಯಲ್ಲಿ ಪುನರುಚ್ಚರಿಸಿದ್ದಾರೆ.
ಯಾವ ಕ್ಷೇತ್ರಗಳಿಗೆ ಭಾರಿ ಪೆಟ್ಟು..?
ಈ ಸುಂಕ ಏರಿಕೆಯು ದಕ್ಷಿಣ ಕೊರಿಯಾದ ಆರ್ಥಿಕತೆಯ ಬೆನ್ನೆಲುಬಾಗಿರುವ ಹಲವು ಕ್ಷೇತ್ರಗಳಿಗೆ ಮಾರಕವಾಗಲಿದೆ.
ವಾಹನ ಉದ್ಯಮ
ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್‌ನಂತಹ ದೈತ್ಯ ಕಂಪನಿಗಳ ಷೇರುಗಳು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಶೇ. 4ರಷ್ಟು ಕುಸಿತ ಕಂಡಿವೆ. ಅಲ್ಲದೆ, ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ದಕ್ಷಿಣ ಕೊರಿಯಾದ ಔಷಧೀಯ ಉತ್ಪನ್ನಗಳ ಬೆಲೆ ಈಗ ಗಗನಕ್ಕೇರಲಿದೆ.
ಜಾಗತಿಕ ಪೂರೈಕೆ
ದಕ್ಷಿಣ ಕೊರಿಯಾ ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, ಈ ನಿರ್ಧಾರದಿಂದ ಜಾಗತಿಕ ಪೂರೈಕೆ ಸರಪಳಿಯಲ್ಲಿ ಏರುಪೇರಾಗುವ ಸಾಧ್ಯತೆಯಿದೆ.
ದಕ್ಷಿಣ ಕೊರಿಯಾದ ಪ್ರತಿ-ಕ್ರಮ
ಟ್ರಂಪ್ ಅವರ ಈ ಘೋಷಣೆಯಿಂದ ಕೊರಿಯಾ ಸರ್ಕಾರ ಬೆಚ್ಚಿಬಿದ್ದಿದೆ. ಸಿಯೋಲ್‌ನಲ್ಲಿರುವ ಅಧ್ಯಕ್ಷೀಯ ಭವನವು ಈ ಬಗ್ಗೆ ತುರ್ತು ಸಭೆ ನಡೆಸಿದ್ದು, ತನ್ನ ವಾಣಿಜ್ಯ ಸಚಿವರನ್ನು ತಕ್ಷಣವೇ ವಾಷಿಂಗ್ಟನ್‌ಗೆ ಮಾತುಕತೆಗಾಗಿ ಕಳುಹಿಸಿಕೊಟ್ಟಿದೆ. ನಾವು ಒಪ್ಪಂದಕ್ಕೆ ಬದ್ಧರಾಗಿದ್ದೇವೆ, ಸಂಸತ್ತಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೊರಿಯಾ ಸಮರ್ಥನೆ ನೀಡಿದೆ,(ಏಜೆನ್ಸೀಸ್).