Donald Trump ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಇದೇ ನವೆಂಬರ್ 22-23 ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾಗವಹಿಸುವುದಿಲ್ಲ ಎಂದಿದ್ದಾರೆ. ಅಲ್ಲದೆ, ಶೃಂಗಸಭೆಯ ಕೊನೆಯ ದಿನದಂದು ನಡೆಯುವ ಔಪಚಾರಿಕ ಹಸ್ತಾಂತರ ಸಮಾರಂಭದಲ್ಲಿ ಮಾತ್ರ ಅಮೆರಿಕದ ಪ್ರತಿನಿಧಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೆವಿಟ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾರ ಇತ್ತೀಚಿನ ಹೇಳಿಕೆಗಳು ಮತ್ತು ಕಾಮೆಂಟ್‌ಗಳಿಂದ ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡವು ಅಸಮಾಧಾನಗೊಂಡಿದೆ. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಅಧಿಕೃತ ಜಿ-20 ಚರ್ಚೆಗಳಲ್ಲಿ ಅಮೆರಿಕ ಭಾಗವಹಿಸುತ್ತಿಲ್ಲ ಎಂದು ಲೆವಿಟ್ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಅಧ್ಯಕ್ಷರು ಅಮೇರಿಕನ್ ಅಧ್ಯಕ್ಷರ ವಿರುದ್ಧ ಭಾಷೆಯನ್ನು ಬಳಸುತ್ತಿರುವುದನ್ನು ನಾನು ಗಮನಿಸಿದ್ದೇನೆ, ಅದು ಅಧ್ಯಕ್ಷರು ಮತ್ತು ಅವರ ತಂಡಕ್ಕೆ ಇಷ್ಟವಾಗಲಿಲ್ಲ ಎಂದಿದ್ದಾರೆ.
ರಾಮಫೋಸಾ ಹೇಳಿದ್ದೇನು..?
ರಾಜಕೀಯವನ್ನು ಬಹಿಷ್ಕರಿಸಿ ಕೆಲಸ ಮಾಡುವುದಿಲ್ಲ. ಹೊರಗೆ ನಿಲ್ಲುವುದಕ್ಕಿಂತ ಜಿ-20 ಟೆಂಟ್ ಒಳಗೆ ಇರುವುದು ಉತ್ತಮ ಎಂದು ರಾಮಫೋಸಾ ಹೇಳಿದ್ದಾರೆ. ಅಲ್ಲದೆ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಪೋಸಾ, ಅಮೆರಿಕದ ಸೂಚನೆಯ ಹೊರತಾಗಿಯೂ ಸಭೆಯಲ್ಲಿ ಕೆಲವು ರೀತಿಯ ಭಾಗವಹಿಸುವಿಕೆಯ ಕುರಿತು ಚರ್ಚೆಗಳು ಇನ್ನೂ ನಡೆಯುತ್ತಿವೆ ಎಂದು ಸೂಚಿಸಿದ್ದಾರೆ.
ಜಿ-20 ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು..?
ಈ ತಿಂಗಳು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಯಾವುದೇ ಅಮೆರಿಕದ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಅಲ್ಪಸಂಖ್ಯಾತ ರೈತರ ಮೇಲಿನ ಹಿಂಸಾಚಾರವನ್ನು ಬಹಿಷ್ಕರಿಸಲು ಕಾರಣವೆಂದು ಟ್ರಂಪ್ ಉಲ್ಲೇಖಿಸಿದ್ದಾರೆ.
ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ದಕ್ಷಿಣ ಆಫ್ರಿಕಾ
ಟ್ರಂಪ್ ಹೇಳಿಕೆಗಳನ್ನು ದಕ್ಷಿಣ ಆಫ್ರಿಕಾ ಬಲವಾಗಿ ತಿರಸ್ಕರಿಸಿದೆ. ಅಮೆರಿಕದ ಬಹಿಷ್ಕಾರವು ಶೃಂಗಸಭೆಯ ಕೊನೆಯಲ್ಲಿ ತಮ್ಮ ಅಧ್ಯಕ್ಷತೆಯನ್ನು ಖಾಲಿಯಾಗಿ ಬಿಡುವುದಕ್ಕೆ ಸಮಾನವಾಗಿರುತ್ತದೆ ಎಂದು ಅಧ್ಯಕ್ಷ ರಾಮಫೋಸಾ ಹೇಳಿದ್ದಾರೆ. ಇದು ಶೃಂಗಸಭೆಗೆ ಮುಂಚಿತವಾಗಿಯೇ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಸೃಷ್ಟಿಸಿದೆ,(ಏಜೆನ್ಸೀಸ್).