ಪ್ರತಿ ಹಾವಿಗೂ 21 ಲಕ್ಷ ರೂಪಾಯಿ... ಕಚ್ಚಿದ್ರೆ ಮಾಂಸವೇ ಕರಗುವಷ್ಟು ವಿಷವುಳ್ಳ ಈ ಉರಗ ಚಿನ್ನಕ್ಕಿಂತಲೂ ದುಬಾರಿ ಏಕೆ! Snakes  
ವಿದೇಶ

ಪ್ರತಿ ಹಾವಿಗೂ 21 ಲಕ್ಷ ರೂಪಾಯಿ... ಕಚ್ಚಿದ್ರೆ ಮಾಂಸವೇ ಕರಗುವಷ್ಟು ವಿಷವುಳ್ಳ ಈ ಉರಗ ಚಿನ್ನಕ್ಕಿಂತಲೂ ದುಬಾರಿ ಏಕೆ! Snakes

ಪ್ರಮುಖ ಮುಖ್ಯಾಂಶಗಳು

  • ಹಾವುಗಳಿಗಾಗಿಯೇ ಮೀಸಲಾಗಿರುವ ಬ್ರೆಜಿಲ್‌ನ ಸ್ನೇಕ್ ಐಲ್ಯಾಂಡ್‌ ಇಲಾ ದಾಕ್ವೆಮಡಾ ಗ್ರ್ಯಾಂಡೆ
  • ಸಾವೊ ಪೌಲೊದಿಂದ 120 ಕಿಲೋಮೀಟರ್ ದೂರದಲ್ಲಿರುವ 110 ಎಕರೆ ವಿಸ್ತೀರ್ಣದ ದ್ವೀಪ
  • ಅರ್ಧ ಗಂಟೆಯಲ್ಲಿ ಮನುಷ್ಯನನ್ನು ಕೊಲ್ಲಬಲ್ಲ ಅಳಿವಿನಂಚಿನ ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವುಗಳು
  • ಮುಖ್ಯ ಭೂಭಾಗದ ಹಾವುಗಳಿಗಿಂತ ಆರು ಪಟ್ಟು ಹೆಚ್ಚು ಶಕ್ತಿಶಾಲಿ ವಿಷ ಹೊಂದಿರುವ ಹಾವುಗಳು
  • ಕಪ್ಪು ಮಾರುಕಟ್ಟೆಯಲ್ಲಿ ಒಂದು ಹಾವಿಗೆ 7 ಲಕ್ಷದಿಂದ 21 ಲಕ್ಷ ರೂಪಾಯಿಗಳವರೆಗೆ ಬೆಲೆ
Snakes : ಹಾವುಗಳು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಕಂಡುಬರುತ್ತವೆ. ಆದರೆ, ಹಾವುಗಳೇ ಸಂಪೂರ್ಣವಾಗಿ ನೆಲೆಸಿರುವ ಯಾವುದಾದರೂ ಒಂದು ಪ್ರದೇಶವಿದೆಯೆ? ಹೌದು, ಅದೊಂದು ದ್ವೀಪ ಮಾತ್ರ ಹಾವುಗಳಿಗಾಗಿಯೇ ಮೀಸಲಿದೆ. ಬ್ರೆಜಿಲ್‌ನಲ್ಲಿರುವ ಈ ದ್ವೀಪದ ಹೆಸರು 'ಇಲಾ ದಾಕ್ವೆಮಡಾ ಗ್ರ್ಯಾಂಡೆ' ( Ila da Queimada Grande ) ಅಥವಾ 'ಸ್ನೇಕ್ ಐಲ್ಯಾಂಡ್' (Snake Island).
ಬ್ರೆಜಿಲ್‌ನ ಪ್ರಮುಖ ನಗರಗಳಲ್ಲಿ ಒಂದಾದ ಸಾವೊ ಪೌಲೊದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ 110 ಎಕರೆ ವಿಸ್ತೀರ್ಣದ ಈ ವಿಚಿತ್ರ ದ್ವೀಪದಲ್ಲಿ, ಅಳಿವಿನಂಚಿನಲ್ಲಿರುವ 'ಗೋಲ್ಡನ್ ಲ್ಯಾನ್ಸ್‌ಹೆಡ್' ಎನ್ನುವ ಅಪರೂಪದ ಪ್ರಭೇದದ ಸಾವಿರಾರು ಹಾವುಗಳು ವಾಸಿಸುತ್ತವೆ. ಈ ಹಾವುಗಳು ಅತ್ಯಂತ ಮಾರಕವಾದ ವಿಷವನ್ನು ಹೊಂದಿದ್ದು, ಕಚ್ಚಿದ ಕೇವಲ ಅರ್ಧ ಗಂಟೆಯಲ್ಲಿ ಮನುಷ್ಯನನ್ನು ಕೊಲ್ಲಬಲ್ಲವು.
ಬ್ರೆಜಿಲ್‌ನ ಸ್ಥಳೀಯರಲ್ಲಿ ಈ ದ್ವೀಪದ ಬಗ್ಗೆ ಹಲವು ಭಯಾನಕ ಕಥೆಗಳಿವೆ. ಕಳ್ಳಕಾಕರು ಇಲ್ಲಿ ಬಚ್ಚಿಟ್ಟ ಸಂಪತ್ತನ್ನು ರಕ್ಷಿಸಲು ಈ ಹಾವುಗಳನ್ನು ತಂದಿಡಲಾಗಿದೆ ಎಂಬುದು ಅತ್ಯಂತ ಜನಪ್ರಿಯ ಕಥೆಗಳಲ್ಲಿ ಒಂದಾಗಿದೆ. ಆದರೆ, ವಿಜ್ಞಾನಿಗಳು ಇದು ಕೇವಲ ಒಂದು ಮಿಥ್ಯೆ ಎಂದು ಹೇಳುತ್ತಾರೆ ಮತ್ತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಮಾರು 11,000 ವರ್ಷಗಳ ಹಿಂದೆ ಮೊದಲ ಹಿಮಯುಗದ ಅವಧಿಯಲ್ಲಿ ಭೂಮಿಯ ಮೇಲಿನ ನೀರಿನ ಮಟ್ಟ ಹೆಚ್ಚಾದಾಗ ಈ ಹಾವುಗಳು ದ್ವೀಪದಲ್ಲಿ ಸಿಲುಕಿಕೊಂಡವು. ದಕ್ಷಿಣ ಅಮೆರಿಕಾದ ಮುಖ್ಯ ಭೂಭಾಗದಲ್ಲಿ ವಾಸಿಸುವ ಇತರ ಹಾವುಗಳಿಗೆ ಹೋಲಿಸಿದರೆ ಇವು ವಿಕಾಸಾತ್ಮಕ ಬದಲಾವಣೆಗಳನ್ನು ಹೊಂದಿದವು. ದ್ವೀಪದಲ್ಲಿದ್ದ ಈ ಹಾವುಗಳಿಗೆ ಯಾವುದೇ ನೈಸರ್ಗಿಕ ಪರಭಕ್ಷಕಗಳಿರಲಿಲ್ಲ, ಆದ್ದರಿಂದ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು ಎಂದಿದ್ದಾರೆ.
ಆದರೆ, ಯಾವುದೇ ಪರಭಕ್ಷಕಗಳು ಇಲ್ಲದೇ ಇದ್ದಾಗ, ಇವಕ್ಕೆ ನೈಸರ್ಗಿಕ ಬೇಟೆಯೂ ಇರಲಿಲ್ಲ. ಈ ದ್ವೀಪಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳೇ ಇದರ ಬೇಟೆಯಾಗಿದ್ದವು. ಪಕ್ಷಿಗಳನ್ನು ಹಿಡಿಯಲು ಅವು ಕಚ್ಚಿದ ತಕ್ಷಣವೇ ಕೆಳಗೆ ಬೀಳಬೇಕಿತ್ತು, ಇಲ್ಲದಿದ್ದರೆ ಅವು ಹಾರಿಹೋಗುತ್ತಿದ್ದವು. ಇದರಿಂದ ಹಾವುಗಳು ತಮ್ಮ ಆಹಾರವನ್ನು ಕಳೆದುಕೊಳ್ಳುತ್ತಿದ್ದವು. ಈ ಒಂದು ಅನಿವಾರ್ಯತೆಯಿಂದಾಗಿ ಈ ದ್ವೀಪದ ಹಾವುಗಳ ವಿಕಾಸದ ಮೇಲೆ ಪ್ರಭಾವ ಬೀರಿತು. ಹೀಗಾಗಿ ಈ ಹಾವುಗಳು ಮುಖ್ಯ ಭೂಭಾಗದ ಹಾವುಗಳಿಗಿಂತ ಆರು ಪಟ್ಟು ಹೆಚ್ಚು ಶಕ್ತಿಶಾಲಿ ವಿಷವನ್ನು ಪಡೆದುಕೊಂಡವು. ಇದರಿಂದ ಬೇಟೆ ಸುಲಭವಾಯಿತು. ಇದರ ವಿಷ ಎಷ್ಟು ಭಯಾನಕವಾಗಿದೆ ಅಂದರೆ, ಕಚ್ಚಿದ ಜಾಗದಲ್ಲಿ ಮಾಂಸವು ಕೂಡ ಕರಗಿಹೋಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
1909 ರಿಂದ 1920 ರವರೆಗೆ ಇಲ್ಲಿ ಒಂದು ಸಣ್ಣ ಜನಸಂಖ್ಯೆ ವಾಸಿಸುತ್ತಿತ್ತು. ದ್ವೀಪದಲ್ಲಿ ಸ್ಥಾಪಿಸಲಾದ ದೀಪಗೃಹದ ನಿಯಂತ್ರಣದ ಜವಾಬ್ದಾರಿಯನ್ನು ಈ ಜನರು ಹೊತ್ತಿದ್ದರು. ಆದಾಗ್ಯೂ, ದೀಪಗೃಹವು ಸ್ವಯಂಚಾಲಿತ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ಜನರು ಇಲ್ಲಿಂದ ಸ್ಥಳಾಂತರಗೊಂಡರು. ಪ್ರಸ್ತುತ ಬ್ರೆಜಿಲ್ ಸರ್ಕಾರವು ಈ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.
ಬ್ರೆಜಿಲ್ ನೌಕಾಪಡೆಯು ಈ ದ್ವೀಪವನ್ನು ನಿಯಂತ್ರಿಸುತ್ತದೆ. ಸಂಶೋಧಕರು ಮತ್ತು ವಿಜ್ಞಾನಿಗಳು ತಮ್ಮ ಅನುಮತಿಯೊಂದಿಗೆ ಇದನ್ನು ಭೇಟಿ ಮಾಡಬಹುದು. ಆದಾಗ್ಯೂ, ಹೀಗೆ ಹೋಗುವಾಗ ಗುಂಪಿನಲ್ಲಿ ಒಬ್ಬ ವೈದ್ಯರು ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದೆ. ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವುಗಳು ಕಪ್ಪು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೆ ಬಾಳುವಂತಹವು. ಒಂದು ಹಾವಿಗೆ 7 ಲಕ್ಷದಿಂದ 21 ಲಕ್ಷ ರೂಪಾಯಿಗಳವರೆಗೆ ಬೆಲೆ ಸಿಗುತ್ತದೆ. ಕಳ್ಳಸಾಗಣೆದಾರರು ಮತ್ತು ದರೋಡೆಕೋರರು ಇದರ ಪ್ರಯೋಜನ ಪಡೆಯಲು ದ್ವೀಪಕ್ಕೆ ಬರುತ್ತಾರೆ ಎಂಬ ವರದಿಗಳೂ ಇವೆ. ಗೋಲ್ಡನ್ ಲ್ಯಾನ್ಸ್‌ಹೆಡ್‌ಗಳನ್ನು ಹೊರತುಪಡಿಸಿ, ಡಿಪ್ಸಸ್ ಆಲ್ಬಿಫ್ರಾನ್ಸ್ ಎನ್ನುವ ಸಣ್ಣ ಸಂಖ್ಯೆಯ ವಿಷರಹಿತ ಹಾವುಗಳು ಸಹ ಇಲ್ಲಿ ವಾಸಿಸುತ್ತವೆ.

ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವು ಅಷ್ಟು ದುಬಾರಿ ಏಕೆ?

ಈ ಹಾವು ಪ್ರಪಂಚದಲ್ಲಿ ಕೇವಲ ಒಂದೇ ಒಂದು ನಿರ್ಬಂಧಿತ ದ್ವೀಪದಲ್ಲಿ ಮಾತ್ರ ವಾಸಿಸುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಶಕ್ತಿಶಾಲಿ ವಿಷವನ್ನು ಹೊಂದಿದೆ. ಹೀಗಾಗಿ, ಕ್ರಿಮಿನಲ್ ವನ್ಯಜೀವಿ ಕಳ್ಳಸಾಗಣೆದಾರರು ಇದ ಬೇಟೆಯನ್ನು ಆಡುತ್ತಾರೆ, (ಏಜೆನ್ಸೀಸ್​).