ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ ನೇತಾಡಿದ ಸ್ಕೈ ಡೈವರ್!
- ಸಂಭವನೀಯ ಅಪಘಾತದಿಂದ ಅದೃಷ್ಟವಶಾತ್ ಬಚಾವ್ ಆದ ಸ್ಕೈ ಡೈವರ್
- ಆಸ್ಟ್ರೇಲಿಯಾದ ಕೈರ್ನ್ಸ್ ನಗರದ ದಕ್ಷಿಣ ಭಾಗದಲ್ಲಿ ನಡೆದ ಘಟನೆ
- ಸಾರಿಗೆ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ ನಂತರ ಬೆಳಕಿಗೆ
- ಜಿಗಿಯಲು ಮುಂದಾದಾಗ ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣದ ಪ್ಯಾರಾಚೂಟ್ ಓಪನ್
ಸಿಡ್ನಿ: ಭೂಮಿಯಿಂದ ಸಾವಿರಾರು ಮೀಟರ್ ಎತ್ತರದಲ್ಲಿ ವಿಮಾನದಿಂದ ಕೆಳಗೆ ಜಿಗಿಯುವಾಗ ( Skydiver ) ಬೆನ್ನಿಗೆ ಕಟ್ಟಿಕೊಂಡ ಪ್ಯಾರಾಚೂಟ್ ವಿಮಾನದ ಬಾಲಕ್ಕೆ ಸಿಲುಕಿಕೊಂಡರೆ ಪರಿಸ್ಥಿತಿ ಹೇಗಿರುತ್ತದೆ ಅಂತ ಒಮ್ಮೆ ಊಹಿಸಿ. ನೆನೆಸಿಕೊಂಡರೆ ಸಾಕು ಜೀವ ಬಾಯಿಗೆ ಬರುತ್ತದೆ. ಹೀಗಿರುವಾಗ ಇಂಥದ್ದೊಂದು ಸನ್ನಿವೇಶ ಆಸ್ಟ್ರೇಲಿಯಾದಲ್ಲಿ ನಿಜವಾಗಿಯೂ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಕೈ ಡೈವರ್ ಒಬ್ಬರು ಸಂಭವನೀಯ ಅಪಘಾತದಿಂದ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದ ಕೈರ್ನ್ಸ್ ನಗರದ ದಕ್ಷಿಣ ಭಾಗದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದಿದೆ. ಯಾವಾಗ ಸಾರಿಗೆ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದರೋ ಆ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಸುಮಾರು 15,000 ಅಡಿ (4,600 ಮೀಟರ್) ಎತ್ತರದಲ್ಲಿ ಪ್ಯಾರಾಚೂಟಿಸ್ಟ್‌ಗಳು 16- ವೇ ಫಾರ್ಮೇಶನ್ಗೆ ಪ್ಲಾನ್ ಮಾಡಿದ್ದರು. ಇದನ್ನು ಪ್ಯಾರಾಚೂಟಿಂಗ್ ಕ್ಯಾಮೆರಾ ಆಪರೇಟರ್ ಚಿತ್ರೀಕರಿಸಲು ರೆಡಿಯಾಗಿದ್ದರು. ಈ ವೇಳೆ ಮೊದಲ ಸ್ಪರ್ಧಿ ವಿಮಾನದ ನಿರ್ಗಮನ ದ್ವಾರದ ಬಳಿ ಬಂದು, ಕೆಳಗೆ ಜಿಗಿಯಲು ಮುಂದಾದಾಗ ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣದ ಪ್ಯಾರಾಚೂಟ್ ಓಪನ್ ಆಯಿತು. ಇದೇ ವೇಳೆ ಪ್ಯಾರಾಚೂಟಿಂಗ್ ಕ್ಯಾಮೆರಾ ಆಪರೇಟರ್ ಒಂದು ತುದಿಯಲ್ಲಿ ಇದ್ದರು. ಓಪನ್ ಆದ ಪ್ಯಾರಾಚೂಟ್ ಗಾಳಿಗೆ ತೂರಿ, ಸ್ಕೈ ಡೈವರ್ ಸಮೇತ ಎಳೆದೊಯ್ಯುವಾಗ ಪ್ಯಾರಾಚೂಟಿಂಗ್ ಕ್ಯಾಮೆರಾ ಆಪರೇಟರ್ಗೆ ಡಿಕ್ಕಿಯಾಯಿತು. ಇದರಿಂದ ಆಪರೇಟರ್ ಕೆಳಗೆ ಬಿದ್ದರೆ, ಸ್ಕೈ ಡೈವರ್ ವಿಮಾನದ ಬಾಲದಲ್ಲಿ ಪ್ಯಾರಾಚೂಟ್ ಸಮೇತ ಸಿಲುಕಿಕೊಂಡು ನೇತಾಡಿದರು. ಇದೇ ವೇಳೆ ಇನ್ನುಳಿದ ಪ್ಯಾರಾಚೂಟಿಸ್ಟ್‌ಗಳು ಕೆಳಗೆ ಜಿಗಿದರು.
ಇದಾದ ನಂತರ ವಿಮಾನದ ಬಾಲದಲ್ಲಿ ಸಿಲುಕಿಕೊಂಡಿದ್ದ ಸ್ಕೈ ಡೈವರ್ ಹರಿತವಾದ ಆಯುಧದಿಂದ ಮೀಸಲು ಪ್ಯಾರಾಚೂಟ್ನ ಹಗ್ಗಗಳನ್ನು ಕತ್ತರಿಸಿ, ಮುಖ್ಯವಾದ ಪ್ಯಾರಾಚೂಟ್ ಓಪನ್ ಮಾಡಿ ಸುರಕ್ಷಿತವಾಗಿ ನೆಲದ ಮೇಲೆ ಲ್ಯಾಂಡ್ ಆದರು. ಸಂಭವನೀಯ ಭಾರಿ ದುರಂತದಿಂದ ಸ್ಕೈ ಡೈವರ್ ಅಚ್ಚರಿಯ ರೀತಿಯಲ್ಲಿ ಬದುಕುಳಿದರು.
ಅಂದಹಾಗೆ, ಸ್ಕೈ ಡೈವಿಂಗ್ ವೇಳೆ ಕೊಕ್ಕೆ ಚಾಕುವನ್ನು ಹೊತ್ತೊಯ್ಯುವುದು ಕಡ್ಡಾಯವಲ್ಲದಿದ್ದರೂ ಈ ರೀತಿ ಅಕಾಲಿಕವಾಗಿ ಮೀಸಲು ಪ್ಯಾರಾಚೂಟ್ ಓಪನ್ ಆದಂತಹ ಸಂದರ್ಭದಲ್ಲಿ ಅದೇ ಚಾಕು ಜೀವ ಉಳಿಸುವ ಸಾಧನವಾಗಬಹುದು ಎಂದು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಇಲಾಖೆಯ ಮುಖ್ಯ ಆಯುಕ್ತ ಆಂಗಸ್ ಮಿಚೆಲ್ ಹೇಳಿದ್ದಾರೆ.
ಇನ್ನು ಈ ಘಟನೆಯಿಂದ ವಿಮಾನದ ಬಾಲಕ್ಕೆ ತುಂಬಾ ಹಾನಿಯಾಯಿತು. ಆದರೂ ಪೈಲಟ್, ವಿಮಾನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳದೆ ಮೇಡೇ ವಿಪತ್ತು ಕರೆ ನೀಡಿ, ವಿಮಾನವನ್ನು ಸುರಕ್ಷಿತವಾಗಿ ನೆಲದ ಮೇಲೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು, (ಏಜೆನ್ಸೀಸ್).