ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಅವರು ಅಮೆರಿಕದ ಮೆರಿಲ್ಯಾಂಡ್ ರಾಜ್ಯದ ಗವರ್ನರ್ ವೆಸ್ ಮೂರ್ ಅವರನ್ನು ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಸಭೆಯಲ್ಲಿ ಭೇಟಿ ಮಾಡಿ, ಜೈವಿಕ ಇಂಧನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.  
ವಿದೇಶ

ಭಾರತ ಅಮೇರಿಕ ಸಹಯೋಗದಲ್ಲಿ ಜೈವಿಕ ಇಂಧನ ಅಭಿವೃದ್ಧಿಗಾಗಿ ಮಹತ್ವದ ಚರ್ಚೆ : ಮಂಡಳಿ ಅಧ್ಯಕ್ಷ ಎಸ್.ಈ ಸುಧೀಂದ್ರbiofuel-development

ಭಾರತ ಅಮೆರಿಕ ನಡುವಿನ ಶುದ್ಧ ಇಂಧನ ಕ್ಷೇತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಅವರು ಅಮೆರಿಕದ ಮೆರಿಲ್ಯಾಂಡ್ ರಾಜ್ಯದ ಗವರ್ನರ್ ವೆಸ್ ಮೂರ್ ಅವರನ್ನು ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಸಭೆಯಲ್ಲಿ ಭೇಟಿ ಮಾಡಿ, ಜೈವಿಕ ಇಂಧನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಕರ್ನಾಟಕ ಮತ್ತು ಮೆರಿಲ್ಯಾಂಡ್ ರಾಜ್ಯಗಳ ನಡುವೆ ಜೈವಿಕ ಇಂಧನಗಳಾದ ಕಂಪ್ರೆಸ್ಡ್ ಬಯೋಗ್ಯಾಸ್ (ಇಆಎ), ಬಯೋ ಡೀಸೆಲ್, ಗ್ರೀನ್ ಹೈಡ್ರೋಜನ್ ಹಾಗೂ ಸುಸ್ಥಿರ ವಿಮಾನಯಾನ ಇಂಧನ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್. ಈ. ಸುಧೀಂದ್ರ ಅವರು, ಕರಿದ ಅಡುಗೆ ಎಣ್ಣೆಯನ್ನು ನಿಯಂತ್ರಣವಿಲ್ಲದೆ ಒಳಚರಂಡಿ, ಮಣ್ಣು ಅಥವಾ ಜಲಮೂಲಗಳಿಗೆ ತ್ಯಜಿಸುವುದರಿಂದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಇದರಿಂದ ಅಂತರ್ಜಲ ಮಾಲಿನ್ಯ, ಒಳಚರಂಡಿ ವ್ಯವಸ್ಥೆಯ ಅಡಚಣೆ, ಮಣ್ಣಿನ ಫಲವತ್ತತೆಯ ಕುಸಿತ ಉಂಟಾಗುವುದರ ಜತೆಗೆ ಅಕ್ರಮವಾಗಿ ಮರುಬಳಕೆಯಾಗುವ ಅಡುಗೆ ಎಣ್ಣೆ ಮಾನವ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ವಿವಿಧ ರೀತಿಯ ಕ್ಯಾನ್ಸರ್‌ಗೆ ಕಾರಣವಾಗುವ ಅಪಾಯವಿದೆ ಎಂದು ವಿವರಿಸಿದರು.
ಕರಿದ ಅಡುಗೆ ಎಣ್ಣೆಯನ್ನು ಬಯೋ ಡೀಸೆಲ್ ಆಗಿ ಪರಿವರ್ತಿಸುವ ಮೂಲಕ ಈ ಪರಿಸರ ಮತ್ತು ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಬಹುದಲ್ಲದೆ, ತ್ಯಾಜ್ಯವನ್ನು ಅಮೂಲ್ಯವಾದ ಶುದ್ಧ ಇಂಧನವಾಗಿ ರೂಪಾಂತರಿಸಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕರ್ನಾಟಕ ರಾಜ್ಯವು ಈ ಮಾದರಿಯನ್ನು ಯಶಸ್ವಿಯಾಗಿ ಉತ್ತೇಜಿಸಿದ್ದು, ಇದೇ ಮಾದರಿಯನ್ನು ಮೆರಿಲ್ಯಾಂಡ್ ರಾಜ್ಯದ ಸಹಯೋಗದೊಂದಿಗೆ ಮತ್ತಷ್ಟು ವಿಸ್ತರಿಸಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಚರ್ಚೆ ನಡೆಸಿರುವ ಗವರ್ನರ್ ವೆಸ್ ಮೂರ್ ಅವರು, ಜಾಗತಿಕ ಇಂಧನ ಭದ್ರತೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಜೈವಿಕ ಇಂಧನಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಮೆರಿಲ್ಯಾಂಡ್ ರಾಜ್ಯವು ಶುದ್ಧ ಇಂಧನ ಅಭಿವೃದ್ಧಿಗೆ ಬದ್ಧವಾಗಿದ್ದು, ಕರ್ನಾಟಕದೊಂದಿಗೆ ಈ ಉದಯೋನ್ಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.
ಕೃಷಿ ಅವಶೇಷಗಳು ಹಾಗೂ ಜೈವಿಕ ಸಂಪನ್ಮೂಲಗಳನ್ನು ( ಬಯೋ ಮಾಸ್) ಮೌಲ್ಯಯುತ ಇಂಧನವಾಗಿ ಪರಿವರ್ತಿಸುವ ಮೂಲಕ ಕರ್ನಾಟಕವು ದೇಶದಲ್ಲೇ ಜೈವಿಕ ಇಂಧನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಇಂಧನ ಭದ್ರತೆ ಹಾಗೂ ಗ್ರಾಮೀಣ ಜೀವನೋಪಾಯ ವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಎಸ್. ಈ. ಸುಧೀಂದ್ರ ಚರ್ಚೆಯಲ್ಲಿ ಮಾಹಿತಿ ನೀಡಿದ್ದಾರೆ.
ತಂತ್ರಜ್ಞಾನ, ಸಂಶೋಧನೆ, ಹೂಡಿಕೆ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಭಾಗಿತ್ವಕ್ಕೆ ಕರ್ನಾಟಕವು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಈ ಸಭೆಯ ಬಳಿಕ ಮೆರಿಲ್ಯಾಂಡ್ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಅರುಣಾ ಮಿಲ್ಲರ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಕರ್ನಾಟಕ ಭೇಟಿ ಕುರಿತಂತೆ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲಾಯಿತು.ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಎಸ್. ಈ. ಸುಧೀಂದ್ರ ಅವರು ಗವರ್ನರ್ ವೆಸ್ ಮೂರ್ ಹಾಗೂ ಅವರ ನಿಯೋಗವನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆ ಅಧಿಕೃತವಾಗಿ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸುವುದರ ಜೊತೆಗೆ ಕರ್ನಾಟಕ ಮತ್ತು ಮೆರಿಲ್ಯಾಂಡ್ ರಾಜ್ಯಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಆಹ್ವಾನ ನೀಡಲಾಗಿದ್ದು, ಈ ಸಭೆಯಲ್ಲಿ ವಾಷಿಂಗ್ಟನ್ ಡಿ.ಸಿ. ಮೂಲದ ಭಾರತೀಯ-ಅಮೆರಿಕನ್ ಉದ್ಯಮಿ ರವಿ ಪುಲಿ ಅವರು ಸಹ ಭಾಗವಹಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪ್ರಶಂಸಿಸಿದರು.ಕರ್ನಾಟಕವನ್ನು ಜಾಗತಿಕ ಮಟ್ಟದ ಸುಸ್ಥಿರ ಇಂಧನ ಪರಿಹಾರಗಳ ಕೇಂದ್ರವನ್ನಾಗಿ ರೂಪಿಸುವ ತನ್ನ ಬದ್ಧತೆಯ ಭಾಗವಾಗಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮೆರಿಲ್ಯಾಂಡ್ ರಾಜ್ಯ ಹಾಗೂ ಅಮೆರಿಕದ ಇತರ ಸಂಸ್ಥೆಗಳು ಮತ್ತು ಪಾಲುದಾರರೊಂದಿಗೆ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಕಾರ್ಯ ಮುಂದುವರಿಯಲಿದೆ ಎನ್ನಲಾಗಿದೆ.