White House 
ವಿದೇಶ

ವೈಟ್​ಹೌಸ್​ ಬಳಿ ಗುಂಡಿನ ದಾಳಿ: ಇಬ್ಬರು ನ್ಯಾಷನಲ್​ ಗಾರ್ಡ್​ಗಳಿಗೆ ಗಂಭೀರ ಗಾಯ! | White House

ಅಮೆರಿಕ: ಅಮೆರಿಕದ ಶ್ವೇತಭವನದ(White House) ಬಳಿ ಅಪರಿಚಿತ ವ್ಯಕ್ತಿಯೊಬ್ಬ ಗುರುವಾರ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ನ್ಯಾಷನಲ್​ ಗಾರ್ಡ್​ಗಳಿಗೆ ಗಂಭೀರ ಗಾಯಗಳಾಗಿವೆ.
ಗಾರ್ಡ್ ಸದಸ್ಯರ ಮೇಲೆ ಗುಂಡು ಹಾರಿಸಿದ ಶಂಕಿತ ವ್ಯಕ್ತಿ 2021 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿದ ಅಫ್ಘಾನ್ ಪ್ರಜೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ರಾಷ್ಟ್ರೀಯ ಗಾರ್ಡ್ ಸೈನಿಕರ ಸ್ಥಿತಿ ಗಂಭೀರವಾಗಿದೆ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಂದೂಕುಧಾರಿ ಒಂದು ಮೂಲೆಯಲ್ಲಿ ಹೊಂಚು ಹಾಕಿ ಕುಳಿತಿದ್ದ, ಕೈ ಪಿಸ್ತೂಲ್​ನಿಂದ ಇಬ್ಬರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ. ಹತ್ತಿರದ ಇತರ ಗಾರ್ಡ್ ಸದಸ್ಯರು ಕೂಡಲೇ ಸುತ್ತುವರೆದು ಆರೋಪಿಯನ್ನು ಬಂಧಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಕೂಡ ಗುಂಡಿನ ದಾಳಿಯ ಬಗ್ಗೆ ಮಾತನಾಡಿದ್ದು, ದಾಳಿಕೋರನನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.

ಭಯೋತ್ಪಾದನಾ ಕೃತ್ಯ!

ಎಫ್‌ಬಿಐ ಈ ಘಟನೆಯನ್ನು ಸಂಭಾವ್ಯ ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಿದೆ. ಅಲ್ಲದೆ, ಈ ಪ್ರಕರಣವನ್ನು ಫೆಡರಲ್ ಅಧಿಕಾರಿಗಳ ಮೇಲಿನ ದಾಳಿ ಎಂದು ಹೇಳಿದೆ. ಇನ್ನು ಘಟನೆ ಬಳಿಕ ಟ್ರಂಪ್ ಸರ್ಕಾರ ನಗರಕ್ಕೆ 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಕಳುಹಿಸಲು ಆದೇಶಿಸಿದೆ(ಏಜೆನ್ಸೀಸ್​).