Shooting: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ(ನ. 29) ತಡರಾತ್ರಿ ಕುಟುಂಬವೊಂದರ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಯಾನ್ ಜೋಕ್ವಿನ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರೆ ಹೀದರ್ ಬ್ರೆಂಟ್ ಮಾತನಾಡಿದ್ದು,
ಇತರ ವ್ಯವಹಾರಗಳೊಂದಿಗೆ ಹಂಚಿಕೊಂಡಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ಸಭಾಂಗಣದೊಳಗೆ ಗುಂಡಿನ ದಾಳಿ ನಡೆದಿದೆ. ಮಕ್ಕಳು ಸೇರಿದಂತೆ ಕುಟುಂಬಗಳು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ದಾಳಿಕೋರರು ಒಳಗೆ ನುಗ್ಗಿ ಗುಂಡು ಹಾರಿಸಿದ್ದಾರೆ.
ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ವಯಸ್ಕರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಇಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಯೂ ಯಾವುದೋ ಉದ್ದೇಶವನ್ನಿಟ್ಟುಕೊಂಡು ನಡೆದಿದೆ ಎಂದು ಹೇಳಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 50 ಮೈಲುಗಳಷ್ಟು ಪೂರ್ವಕ್ಕೆ ಸ್ಟಾಕ್ಟನ್‌ನ ಲುಸಿಲ್ ಅವೆನ್ಯೂದ 1900 ಬ್ಲಾಕ್ ಬಳಿ ಘಟನೆ ನಡೆದಿದೆ. ಆರೋಪಿಗಳ ಸುಳಿವುಗಳಿಗಾಗಿ ಹುಡುಕಾಟ ಮುಂದುವರಿಸಿದ್ದರಿಂದ ಆ ಪ್ರದೇಶವು ರಾತ್ರಿಯಿಡೀ ಸೀಲ್ ಆಗಿತ್ತು. ಅಧಿಕಾರಿಗಳು ಯಾವುದೇ ಬಂಧನಗಳನ್ನು ಅಥವಾ ಶಂಕಿತರನ್ನು ಗುರುತಿಸಿಲ್ಲ, ಮತ್ತು ಎಷ್ಟು ಮಂದಿ ಶೂಟರ್‌ಗಳು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).